Advertisement

ಕಣ್ಣಿಗೆ ಮಣ್ಣೆರಚುವ ತಂತ್ರ

12:30 AM Feb 23, 2019 | Team Udayavani |

ಪಾಕಿಸ್ತಾನ ಉಗ್ರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌-ಉದ್‌- ದಾವಾ (ಜೆಯುಡಿ) ಮತ್ತು ಅದರ ಸಾಮಾಜಿಕ ಮುಖವಾಗಿರುವ ಫ‌ಲಾಹ್‌- ಐ-ಇನ್ಸಾನಿಯತ್‌ ಎಂಬೆರಡು ಸಂಘಟನೆಗಳಿಗೆ ಮರಳಿ ನಿಷೇಧ ಹೇರಿದೆ. ಪುಲ್ವಾಮದಲ್ಲಿ ಕಾರ್‌ ಬಾಂಬ್‌ ಸ್ಫೋಟಿಸಿ 40 ಸಿಆರ್‌ಪಿಎಫ್ ಯೋಧರನ್ನು ಸಾಯಿಸಿದ ಕೃತ್ಯಕ್ಕೆ ಜಾಗತಿಕವಾಗಿ ವ್ಯಕ್ತವಾಗಿರುವ ಆಕ್ರೋಶದ ಬಿಸಿ ತಟ್ಟಿದ ಬಳಿಕ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ. ಆದರೆ ಇದೊಂದು ಕಣ್ಣಿಗೆ ಮಣ್ಣೆರಚುವ ತಂತ್ರ ಎನ್ನುವುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಪುಲ್ವಾಮದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದು ಮಸೂದ್‌ ಅಜರ್‌ ನೇತೃತ್ವ ಜೈಶ್‌-ಎ-ಮೊಹಮ್ಮದ್‌ ಎಂಬ ಉಗ್ರ ಸಂಘಟನೆ. ಆದರೆ ಪಾಕಿಸ್ತಾನ ನಿಷೇಧಿಸಿದ್ದು ಉಗ್ರ ಹಫೀಜ್‌ ಸಯೀದ್‌ನ ಸಂಘಟನೆಯನ್ನು. ಈ ಇಬ್ಬರು ಕಡು ಪಾತಕಿಗಳಾಗಿದ್ದರೂ ಈ ಸಂದರ್ಭದಲ್ಲಿ ಸಯೀದ್‌ನ ಸಂಘಟನೆಯನ್ನು ನಿಷೇಧಿಸಿರುವುದರ ಹಿಂದೆ ಬೇರೆಯೇ ಉದ್ದೇಶ ಇರುವುದು ಸ್ಪಷ್ಟ. 

Advertisement

ಅಲ್ಲದೆ ಪಾಕಿಸ್ತಾನದ ಈ ನಡೆಯಿಂದ ಸ್ಪಷ್ಟವಾಗುವ ಇನ್ನೊಂದು ವಿಚಾರವೆಂದರೆ ಅದಕ್ಕೆ ಎಂದಿಗೂ ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವ ಇಚ್ಛಾಶಕ್ತಿಯಿಲ್ಲ. ಒತ್ತಡ ಬಿದ್ದಾಗಲೊಮ್ಮೆ ಉಗ್ರ ಸಂಘಟನೆಗಳನ್ನು ನಿಷೇಧಿಸುವ ಮತ್ತು ಉಗ್ರ ಮುಖಂಡರನ್ನು ಗೃಹ ಬಂಧನದಲ್ಲಿಡುವ ನಾಟಕವನ್ನು ಪಾಕಿಸ್ತಾನ ಹಿಂದೆಯೂ ಆಡಿದೆ. ಮುಂಬಯಿ ದಾಳಿಯ ಪ್ರಧಾನ ಸಂಚುಕೋರನಾಗಿರುವ ಸಯೀದ್‌ನನ್ನು ಈ ಹಿಂದೆ ಕೆಲ ತಿಂಗಳು ಗೃಹ ಬಂಧನದಲ್ಲಿರಿಸಿದ ನಾಟಕವಾಡಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಯಾವುದೇ ಸಮರ್ಪಕ ಸಾಕ್ಷ್ಯವನ್ನು ಒದಗಿಸದೆ ಅವನು ಬಿಡುಗಡೆಯಾಗುವಂತೆಯೂ ನೋಡಿಕೊಂಡಿತ್ತು. ಹೀಗೆ ನಾನು ಚಿವುಟಿದಂತೆ ಮಾಡುತ್ತೇನೆ ನೀನು ಅತ್ತಂತೆ ಮಾಡು ಎಂಬ ಆಟವನ್ನು ಅದು ಉಗ್ರರ ಜತೆ ಸೇರಿಕೊಂಡು ಆಡುತ್ತಾ ಜಗತ್ತಿನ ಕಣ್ಣಿಗೆ ಮಣ್ಣೆರಚುತ್ತಿದೆ. 

ಪಾಕಿಸ್ತಾನ ಹೀಗೆ ದಿಢೀರ್‌ ಎಂದು ಎರಡು ಉಗ್ರ ಸಂಘಟನೆಗಳಿಗೆ ನಿಷೇಧ ಹೇರಲು ಇನ್ನೂ ಒಂದು ಕಾರಣವಿದೆ. ಫೈನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌ (ಎಫ್ಎಟಿಎಫ್)ಎಂಬ ವಿವಿಧ ದೇಶಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಕಣ್ಗಾಪು ಇಟ್ಟು ಆರ್ಥಿಕ ಶ್ರೇಯಾಂಕಗಳನ್ನು ನೀಡುವ ಜಾಗತಿಕ ಸಂಸ್ಥೆಯ ಶೃಂಗ ಸಭೆ ಸಮಾಪನಗೊಳ್ಳುವುದಕ್ಕಿಂತ ಒಂದು ದಿನ ಮುಂಚಿತವಾಗಿ ಪಾಕಿಸ್ತಾನ ಈ ನಿಷೇಧ ಹೇರಿದೆ. ಈಗಾಗಲೆ ಪಾಕ್‌ ಎಫ್ಎಟಿಎಫ್ನ ಕಂದು ಪಟ್ಟಿಯಲ್ಲಿದೆ. ಇದು ಇನ್ನಷ್ಟು ಕೆಳಗೆ ಸರಿದು ಸರಿದು ಕಪ್ಪು ಪಟ್ಟಿಗೆ ಸೇರಿದರೆ ಎಲ್ಲ ಶ್ರೇಯಾಂಕಗಳು ಕುಸಿತವಾಗಿ ಆರ್ಥಿಕತೆಗೆ ಮಾರಕ ಹೊಡೆತ ಬೀಳಲಿದೆ. ಇದನ್ನು ತಪ್ಪಿಸುವ ಸಲುವಾಗಿ ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎರಡು ಉಗ್ರ ಸಂಘಟನೆಗಳಿಗೆ ಮರಳಿ ನಿಷೇಧ ಹೇರುವ ತೀರ್ಮಾನ ಕೈಗೊಳ್ಳಲಾಗಿದೆಯಷ್ಟೆ. 

ಈ ಮಾದರಿಯ ನಾಮಕಾವಸ್ತೆ ನಿಷೇಧದಿಂದ ಸಯೀದ್‌ ಮೇಲಾಗಲಿ, ಮಸೂದ್‌ ಮೇಲಾಗಲಿ ಯಾವ ರೀತಿಯ ಪರಿಣಾಮವೂ ಆಗುವುದಿಲ್ಲ. ಸಯೀದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಲಾಗಿದ್ದರೂ ಅವನು ಈಗಲೂ ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾನೆ. ಸಭೆ ಸಮಾರಂಭಗಳನ್ನು ನಡೆಸುತ್ತಾ ಭಾರತದ ವಿರುದ್ಧ ವಿಷ ಕಾರುತ್ತಿದ್ದಾನೆ. ಮಸೂದ್‌ ಕೂಡಾ ಪಾಕಿಸ್ತಾನದ ಸೇನೆಯ ಆಶ್ರಯದಲ್ಲೇ ಇದ್ದಾನೆ. ಹಿಂದೆ ಗೃಹಬಂಧನದಲ್ಲಿರುವಾಗಲೂ ಮನೆಯಲ್ಲೇ ಕುಳಿತೇ ಸಯೀದ್‌ ಭಾಷಣಗಳನ್ನು ಮಾಡುತ್ತಿದ್ದ, ಸಂಚುಗಳನ್ನು ರೂಪಿಸುತ್ತಿದ್ದ. ಪ್ರಸ್ತುತ ಪಾಕಿಸ್ತಾನ ನಿಷೇಧಿಸಿರುವ ಎರಡು ಸಂಘಟನೆಗಳು ಅವನ ಲಷ್ಕರ್‌- ಎ-ತಯ್ಯಬದ ಮುಂಚೂಣಿ ಸಂಘಟನೆಗಳು. ಈ ಮಾದರಿಯ 69 ನಿಷೇಧಿತ ಸಂಘಟನೆಗಳು ಪಾಕಿಸ್ತಾನದಲ್ಲಿ ಈಗಲೂ ಸಕ್ರಿಯವಾಗಿ ಕಾರ್ಯಾಚರಿಸುತ್ತಿವೆ ಎನ್ನುತ್ತಿದೆ ಒಂದು ವರದಿ. ಈ ಪೈಕಿ ಕೆಲವು ಉಗ್ರ ಸಂಘಟನೆಗಳು ಮದರಸಗಳು, ಶಾಲೆಗಳು, ಪ್ರಕಾಶನ ಸಂಸ್ಥೆಗಳು, ಆ್ಯಂಬುಲೆನ್ಸ್‌ ಇತ್ಯಾದಿಗಳನ್ನು ಹೊಂದಿವೆ. ಲಷ್ಕರ್‌ನ ಅಡಿಯಲ್ಲೇ 300ಕ್ಕೂ ಹೆಚ್ಚು ಸಂಸ್ಥಾಪನೆಗಳಿವೆ. ಹೀಗೆ ಆಳವಾಗಿ ಬೇರುಬಿಟ್ಟಿರುವ ಉಗ್ರ ಸಂಘಟನೆಗಳನ್ನು ಕಿತ್ತೂಗೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಜತೆಗೆ, ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಛಾತಿಯೂ ಇರಬೇಕು. ಆದರೆ ಸೇನೆಯ ಕೈಗೊಂಬೆಯಾಗಿರುವ ಸದ್ಯದ ಇಮ್ರಾನ್‌ ಖಾನ್‌ ಸರಕಾರದಲ್ಲಿ ಈ ಎರಡನ್ನೂ ಕಾಣಲು ಸಾಧ್ಯವಿಲ್ಲ. ಹೀಗಾಗಿ ಪಾಕ್‌ ಎಷ್ಟೇ ನಿಷೇಧಗಳನ್ನು ಹೇರಿದರೂ ಅದರಿಂದ ಹೆಚ್ಚೇನೂ ಉಪಯೋಗವಾಗದು. 

Advertisement

Udayavani is now on Telegram. Click here to join our channel and stay updated with the latest news.

Next