Advertisement
ಬಹುಶಃ ಈ ಅನುಭವ ನಿಮಗೂ ಆಗಿರಬಹುದು. ಒಂದು ಶಬ್ದವನ್ನೋ ಚಿತ್ರವನ್ನೋ ಎಲ್ಲೋ ನೋಡಿರುತ್ತೀರಿ. ಅದಾದ ಕೆಲವೇ ದಿನಗಳಲ್ಲಿ ಮತ್ತೆ ಅದೇ ಶಬ್ದ/ಚಿತ್ರವನ್ನು ಕಾಣುವ ಸಂದರ್ಭ ಬರುತ್ತದೆ. ಅಥವಾ ಒಂದೇ ಶಬ್ದ ಹಲವು ರೀತಿಗಳಲ್ಲಿ ಹಲವು ರೂಪಗಳಲ್ಲಿ ನಿಮ್ಮ ಮುಂದೆ ಬರಬಹುದು. ಮ್ಯಾಕ್‌ಬೆತ್‌ನಿಗೆ ಕಾಣಿಸಿಕೊಂಡ ಮೂರು ಭೂತಗಳಂತೆ ಅವು ಆಗಾಗ ಕಾಣಿಸಿಕೊಳ್ಳತೊಡಗಿದರೆ ಮನಸ್ಸು ಕಲವಿಲವಾಗುತ್ತದೆ, ಆಶ್ಚರ್ಯಪಡುತ್ತದೆ. ಇದೇನು ಒಳಿತಿನ ಸೂಚನೆಯೋ ಅಥವಾ ಕೆಡುಕಿನದೋ? ಮನಸ್ಸು ಭಯಪಡುತ್ತದೆ, ಜಾಗೃತಗೊಳ್ಳುತ್ತದೆ.
Related Articles
ಗಣಿತದ ಪ್ರಕಾರ ಹೀಗೆ ಒಂದು ಅಪರೂಪದ ಶಬ್ದ/ಚಿತ್ರ ಅಥವಾ ಸಂಗತಿ ಎರಡು-ಮೂರು ದಿನಗಳ ಅಂತರದಲ್ಲಿ ಮತ್ತೆ ಸಂಭವಿಸುವ ಸಂಭವನೀಯತೆ ತೀರಾ ಕಮ್ಮಿ. ಎಷ್ಟೆಂದರೆ ಅದರ ಬೆಲೆ ಸೊನ್ನೆಗೆ ಹತ್ತಿರದ್ದು. ಆದರೂ ಇಂಥದೊಂದು ಅನುಭವ ನಿಮಗಾಗಿದೆಯಾ ಎಂದು ಕೇಳಿದರೆ ಬಹುತೇಕ ಎಲ್ಲರೂ “ಹೌದು’ ಎಂದೇ ಒಪ್ಪುತ್ತಾರೆ. ಸ್ಟಾನ್‌ಫರ್ಡ್ ವಿವಿಯ ಪೊ›ಫೆಸರ್ ಅರ್ನಾಲ್ಡ್ ಝಿÌಕಿ ಈ ವಿದ್ಯಮಾನವನ್ನು 2006ರಲ್ಲಿ ಮೊದಲ ಬಾರಿಗೆ ವೈಜ್ಞಾನಿಕ ನೆಲೆಯಲ್ಲಿ ವಿವರಿಸಿದರು. ಇದಕ್ಕೆ ಅವರು ಕೊಟ್ಟ ಹೆಸರು ಆವರ್ತನ “ಕಣ್ಕಟ್ಟು ‘ ಎಂದು. ಅವರ ಪ್ರಕಾರ, ಮನುಷ್ಯನ ಮಿದುಳು ಎಷ್ಟು ಜಾಗ್ರತೆಯಿಂದ ತನ್ನ ಸುತ್ತಮುತ್ತಲಿನ ಸಂಗತಿಗಳನ್ನು ಪಂಚೇಂದ್ರಿಯಗಳ ಮೂಲಕ ಗ್ರಹಿಸುತ್ತಿರುತ್ತದೋ ಅಷ್ಟೇ ವಿಷಯಗಳನ್ನು ಕಡೆಗಣಿಸುತ್ತಲೂ ಇರುತ್ತದೆ. ಒಂದು ವಿಷಯದ ಮೇಲೆ ತೀವ್ರ ಗಮನ ಕೇಂದ್ರೀಕರಿಸಿದಾಗ ಮಿದುಳು, ಉಳಿದ – ಕಡಿಮೆ ಪ್ರಾಮುಖ್ಯದ – ಸಂಗತಿಗಳನ್ನು ಅವಗಣಿಸುವುದು ಸಾಮಾನ್ಯ. ಟಿವಿಯಲ್ಲಿ ತುಂಬ ಇಷ್ಟದ ಧಾರಾವಾಹಿ ನೋಡುತ್ತ ಅಡುಗೆಮನೆಯಲ್ಲಿ ಹಾಲುಕ್ಕಿಸಿ ಬೈಸಿಕೊಂಡ ವನಿತೆಯರು ಈ ಮಾತನ್ನು ಅಲ್ಲಗಳೆಯಲಾರರು. ಮಿದುಳಿನ ಈ ತಾರತಮ್ಯವನ್ನು ದಿನನಿತ್ಯದ ಎಲ್ಲ ವಿಷಯಗಳಲ್ಲೂ ನಾವು ನೋಡಬಹುದು. ಪತ್ರಿಕೆಯಲ್ಲಿ ಸುದ್ದಿ ಓದುವಾಗ ಇರಬಹುದು, ಫೇಸ್‌ಬುಕ್‌ನಲ್ಲಿ ಗೋಡೆ ಜಾಲಾಡುವಾಗ ಇರಬಹುದು ಅಥವಾ ತರಕಾರಿ ಅಂಗಡಿಯಲ್ಲಿ ತರಕಾರಿ ಕೊಳ್ಳುವಾಗ ಇರಬಹುದು, ನಾವು ಗಮನ ಕೇಂದ್ರೀಕರಿಸುವ ಸಂಗತಿಗಳು ಎಷ್ಟಿರುತ್ತವೋ ನಾವು ದಿವ್ಯವಾಗಿ ಉಪೇಕ್ಷಿಸುವ ಸಂಗತಿಗಳೂ ಅಷ್ಟೇ ಇರುತ್ತದೆ. ಆಸಕ್ತಿ ಇರುವ ವಿಷಯವನ್ನು ಬಹಳ ಚೆನ್ನಾಗಿ ಕಲಿಯಲು, ನೆನಪಿಟ್ಟುಕೊಳ್ಳಲು ಮಿದುಳು ಈ ರೀತಿ ಭೇದಭಾವ ಮಾಡುವುದು ಬಹಳ ಮುಖ್ಯ. ಕಂಡದ್ದನ್ನೆಲ್ಲಾ ನೆನಪಿಡಲು ಹೋಗಿದ್ದರೆ ನಮ್ಮ ಮಸ್ತಿಷ್ಕ ಕೆಲವೇ ವರ್ಷಗಳಲ್ಲಿ ತುಂಬಿತುಳುಕುವ ಮುನಿಸಿಪಾಲಿಟಿ ತೊಟ್ಟಿ ಆಗಿಬಿಡುತ್ತಿತ್ತು!
Advertisement
ಗಮನಿಸಿದ್ದೀರಾ, ನಾವು ಕೆಲ ವಿಷಯಗಳನ್ನು ತುಂಬ ಚೆನ್ನಾಗಿ ನೆನಪಿಡುತ್ತೇವೆ. ಕೆಲವು ವಿಷಯಗಳನ್ನು ಕಲಿತರೂ ಕಾಲಾಂತರದಲ್ಲಿ ಮರೆತುಬಿಡುತ್ತೇವೆ. ಯಾವ ಸಂಗತಿಯನ್ನು ನಾವು ಮತ್ತೆ ಮತ್ತೆ ಓದುತ್ತೇವೋ ಕೇಳುತ್ತೇವೋ ಬಳಸುತ್ತೇವೋ ಅಂಥ ಸಂಗತಿಗಳು ಮಿದುಳಲ್ಲಿ ಬಹಳ ಚೆನ್ನಾಗಿ ದಾಖಲಾಗುತ್ತವೆ. ಯಾವುದೇ ವಿಷಯ ಮನದಟ್ಟಾಗಬೇಕಾದರೆ ಗಮನವಿಟ್ಟು ಮಾಡಬೇಕು, ಮತ್ತೆ ಮತ್ತೆ ಮಾಡಬೇಕು ಎನ್ನುವುದು ಅದೇ ಕಾರಣಕ್ಕೆ. ನಿಮ್ಮ ಕಣ್ಣು ಇಂದು ಒಂದು ವಿಶೇಷವೆನ್ನಿಸುವ ಶಬ್ದವನ್ನು ಗಮನಿಸಿತೆನ್ನಿ. ಅದರರ್ಥ ನೀವು ಈ ಹಿಂದೆ ಆ ಶಬ್ದವನ್ನು ನೋಡಿರಲೇ ಇಲ್ಲ ಎಂದೇನಲ್ಲ. ನೋಡಿದ್ದರೂ ಮಿದುಳು ಆ ಶಬ್ದದತ್ತ ಗಮನವನ್ನೇ ಹರಿಸಿರಲಿಲ್ಲ ಎಂದು ಅರ್ಥ. ಈಗ ಕಣ್ಣು ನೋಡಿದೆ, ಮಿದುಳು ಗ್ರಹಿಸಿದೆ. ಇದೊಂದು ವಿಶೇಷ ಶಬ್ದ ಎಂದು ಮಿದುಳು ಭಾವಿಸಿದೆ. ಮುತುವರ್ಜಿ ವಹಿಸಿ ಅದನ್ನು ನೆನಪಿಟ್ಟಿದೆ. ಕೆಲ ದಿನಗಳ ನಂತರ ನೀವು ಅದೇ ಶಬ್ದವನ್ನು ಮತ್ತೆ ಎಲ್ಲಾದರೂ ಕಾಣುವ ಸಂದರ್ಭ ಬರಬಹುದು. ಮಿದುಳಿನಲ್ಲಿ ಆಗ ನಿಮ್ಮ ಸುಪ್ತಸ್ಮರಣೆ ಜಾಗೃತವಾಗುತ್ತದೆ. ನೆನಪು ನವೀಕೃತಗೊಳ್ಳುತ್ತದೆ. ಮಿದುಳು ತನ್ನ ಹಳೆಯ ಸ್ಮರಣೆಯನ್ನೂ ಈಗ ನೋಡಿದ ಸಂಗತಿಯನ್ನೂ ಪರಸ್ಪರ ತಾಳೆನೋಡಿ ಎರಡೂ ಒಂದೇ ಎಂದು ಗುರುತಿಸಿ ಎರಡೂ ನೆನಪುಗಳನ್ನು ತನ್ನ ತಿಜೋರಿಯಲ್ಲಿ ಭದ್ರಪಡಿಸಿಕೊಳ್ಳುತ್ತದೆ. ಈಗ ನಿಮ್ಮ ಆ ಸ್ಮರಣೆ ಹಿಂದಿಗಿಂತ ಹೆಚ್ಚು ಶಕ್ತಿಶಾಲಿ. ಅಳಿಸಿಹೋಗುವ ಸಾಧ್ಯತೆ ಈಗ ಕಡಿಮೆ.
ಬಹಳಷ್ಟು ವರ್ಷಗಳಿಂದ ನೀವು ಓರ್ವ ಸಾಹಿತಿಯ ಯಾವ ಬರಹವನ್ನೂ ಓದಿರುವುದಿಲ್ಲ ಎನ್ನಿ. ಅದೊಂದು ದಿನ ಅಕಸ್ಮಾತ್ತಾಗಿ ಯಾವುದೋ ಪತ್ರಿಕೆಯಲ್ಲಿ ಆ ಸಾಹಿತಿಯ ಹೆಸರು ನೋಡುತ್ತೀರಿ. ಮರುದಿನ ಮತ್ತೇನನ್ನೋ ಹುಡುಕುತ್ತಿದ್ದಾಗ ಪತ್ರಿಕೆಗಳ ಮಧ್ಯದಲ್ಲಿ ಆತನ ಹೆಸರು ಮತ್ತೆ ಕಾಣಿಸಿಕೊಳ್ಳುತ್ತದೆ. ಅದಾಗಿ ವಾರ ಬಿಟ್ಟು ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ತಡಕಾಡುತ್ತ ಇರುವಾಗ ಮತ್ತೆ ಅನಾಯಾಸವಾಗಿ ಅದೇ ಸಾಹಿತಿಯ ಹೆಸರು ಅಲ್ಲೆಲ್ಲೋ ಕಾಣಿಸಿಕೊಳ್ಳುತ್ತದೆ. ತುಂಬ ವಿಚಿತ್ರ ಅನ್ನಿಸಬಹುದಾದರೂ ಇದು ಕೇವಲ ಬೇಡರ್ ಮೈನ್‌ಹಾಫ್ ವಿದ್ಯಮಾನ ಅಷ್ಟೆ. ಈ ಹಿಂದೆಯೂ ನಿಮಗೆ ಆತನ ಹೆಸರು ಗುರುತಿಸುವ ಅವಕಾಶ ಈಗಿರುವಷ್ಟೇ ಸಲ ಬಂದುಹೋಗಿತ್ತು. ಆದರೆ, ಮಿದುಳು ಮಿಕ್ಕೆಲ್ಲ ಸಂಗತಿಗಳ ಜೊತೆ ಆ ವಿಷಯವನ್ನೂ ಉಪೇಕ್ಷೆ ಮಾಡಿ ಬದಿಗಿಟ್ಟಿತ್ತು ಅಷ್ಟೆ. ಈ ವಿದ್ಯಮಾನದ ಬಗ್ಗೆ ಗೆಳೆಯನಿಗೆ ವಿವರಿಸುತ್ತಿದ್ದಾಗ ಆತ ದುಃಖ ನಟಿಸಿ ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದ: ಬೇಡರೋ ಬ್ಲೇಡರೋ, ಒಟ್ಟಲ್ಲಿ ನನ್ನ ಜೀವನದಲ್ಲೂ ಈ ವಿದ್ಯಮಾನ ಈಗೀಗಷ್ಟೇ ಆಯ್ತು ಕಣಯ್ಯ. ನಿನ್ನೆ ಪತ್ರಿಕೆಯಲ್ಲಿ ಹೊಸ ಮಾದರಿ ಸೀರೆಗಳಿಗೆ 50% ಡಿಸ್ಕೌಂಟ್ ಅನ್ನೋ ಜಾಹೀರಾತನ್ನು ಓದಿದ್ದೆ. ಇವತ್ತು ಅದೇ ಅಕ್ಷರಗಳನ್ನು ಬರೆದು ತೂಗುಹಾಕಿದ್ದ ಅಂಗಡಿಗೂ ಹೋಗಿಬಂದಾಯಿತು! ಇದು ನೀನು ಹೇಳುವ ಬೇಡರ್ ಮೈನ್‌ಹಾಫ್ ವಿದ್ಯಮಾನಕ್ಕೆ ಉದಾಹರಣೆ ಆಗುತ್ತೋ ಇಲ್ಲವೋ?
ಆರ್‌ಸಿ