Advertisement

“ಕಣ್ಣಿನ ಡಾಕ್ಟರ್‌’ಡಾ|ಕಿದಿಯೂರು ಗುರುರಾಜ ಭಾಗವತ್‌ ಇನ್ನಿಲ್ಲ

04:01 PM Apr 10, 2017 | Harsha Rao |

ಉಡುಪಿ: “ಕಣ್ಣಿನ ಡಾಕ್ಟರು’ ಎಂದು ಪ್ರಸಿದ್ಧರಾದ ಆಯುರ್ವೇದ ಚಿಕಿತ್ಸಕ, ಸೇವಾದೃಷ್ಟಿಯ ವೈದ್ಯ ಅಂಬಲಪಾಡಿಯ ಡಾ| ಕಿದಿಯೂರು ಗುರುರಾಜ ಭಾಗವತ್‌ (82) ಎ. 8ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ನಾಲ್ವರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. 

Advertisement

ದೇಶ-ವಿದೇಶಗಳ ರೋಗಿಗಳಿಗೆ ಚಿಕಿತ್ಸೆ
ಪರಂಪರಾಗತ ಆಯುರ್ವೇದ ಚಿಕಿತ್ಸಕರ ಕುಟುಂಬದಿಂದ ಬಂದ ಗುರುರಾಜ ಭಾಗವತರು ಶಾಸ್ತ್ರೀಯ ಆಯುರ್ವೇದ ಶಿಕ್ಷಣ ಪಡೆಯದಿದ್ದರೂ ತಮ್ಮ ಪೂರ್ವಿಕರ ಚಿಕಿತ್ಸಾ ಪರಂಪರೆಯ ರೋಗನಿದಾನ ಕ್ರಮವನ್ನು ಸ್ವಪ್ರಯತ್ನದಿಂದ ಕಲಿತರು. ಚಿಕಿತ್ಸಾನುಭವದ ಆಧಾರದಲ್ಲಿ ತೈಲ, ಲೇಹ್ಯ, ಭಸ್ಮ, ಚೂರ್ಣ ತಯಾರಿಕೆಯೊಂದಿಗೆ ಹಲವು ಚಿಕಿತ್ಸಾ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದರು. ಅವಿಭಜಿತ ದ.ಕ. ಜಿಲ್ಲೆಯಲ್ಲದೆ ಬೆಂಗಳೂರು, ಬಳ್ಳಾರಿ, ಮೈಸೂರು, ಧಾರವಾಡ, ಕೋಲಾರ ಹೀಗೆ ರಾಜ್ಯದ ನಾನಾ ಭಾಗಗಳಿಂದ, ಮುಂಬಯಿ, ಕೇರಳ, ಚೆನ್ನೈ ಮೊದಲಾದ ಹೊರ ರಾಜ್ಯಗಳಿಂದ, ಅಮೆರಿಕ, ಆಸ್ಟ್ರೇಲಿಯ, ಸಿಂಗಾಪುರ ಮೊದಲಾದ ರಾಷ್ಟ್ರಗಳಿಂದ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ವಿವಿಧ ರಾಷ್ಟ್ರಗಳ ಸಾವಿರಾರು ದಂಪತಿಗಳಿಗೆ ಸಂತಾನಫ‌ಲ ಚಿಕಿತ್ಸೆ ನೀಡಿರುವ ಹೆಗ್ಗಳಿಕೆ ಅವರದು. 

ಸೇವಾದೃಷ್ಟಿಯ ವೈದ್ಯ
ಕಣ್ಣು, ಸಂತಾನ ಮಾತ್ರವಲ್ಲದೆ ಸಂಧಿಶೂಲ, ಟೈಫಾಯ್ಡ, ಕ್ಯಾನ್ಸರ್‌, ಮನೋದೈಹಿಕ ಕಾಯಿಲೆಗಳಿಗೂ ಚಿಕಿತ್ಸೆ ನೀಡುತ್ತಿದ್ದ ಭಾಗವತರು “ಆಪರೇಶನ್‌ ಇಲ್ಲದೆ ಚಿಕಿತ್ಸೆ’ ನೀಡುವ ಸುಲಭ ಲಭ್ಯ ವೈದ್ಯರಾಗಿ, ಸೇವಾದೃಷ್ಟಿಯ ಜನಪರ ವೈದ್ಯರಾಗಿ ಮನೆಮಾತಾಗಿದ್ದರು. 

ಗ್ರಂಥರಚನೆ, ಲೇಖನ
1986ರಿಂದ ಹಲವೆಡೆ ನೇತ್ರ ಚಿಕಿತ್ಸಾ ಶಿಬಿರಗಳನ್ನು, ಸಂತಾನ ಚಿಕಿತ್ಸಾ-ಸಲಹಾ ಶಿಬಿರಗಳನ್ನು ನಡೆಸಿದ್ದ ಭಾಗವತರು ಆಯುರ್ವೇದ ವಿದ್ಯಾರ್ಥಿಗಳಿಗಾಗಿ “ದ್ರವ್ಯಗುಣ ಸಾರಸಂಗ್ರಹ’, ನವವಿವಾಹಿತರಿಗೆ “ಸ್ತ್ರೀ ಪುರುಷ ಸ್ವಾಸ್ಥ್ಯ ಚಿಂತನ’ ಕೃತಿಗಳನ್ನು ಪ್ರಕಟಿಸಿದ್ದರು. ಹಲವು ಪತ್ರಿಕೆಗಳಲ್ಲಿ ನೇತ್ರ ಚಿಕಿತ್ಸೆ, ಸಂತಾನಫ‌ಲ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಲೇಖನಗಳನ್ನು ಬರೆದಿದ್ದರು. 

ವಿವಿಧ ಪುರಸ್ಕಾರಗಳು
ಆಯುರ್ವೇದ ಚಿಕಿತ್ಸಾ ಪರಿಷತ್ತು, ಸಾರಸ್ವತ ಮಹಾವಿದ್ಯಾಲಯ ಮೊದಲಾದ ಸಂಘ-ಸಂಸ್ಥೆಗಳು ಭಾಗವತರಿಗೆ “ಧನ್ವಂತರಿ ಪುರಸ್ಕಾರ’, “ನೇತ್ರ ಚಿಕಿತ್ಸಾ ದುರಂಧರ’, “ಸದ್ವೆ„ದ್ಯ ಭೂಷಣ’, “ನೇತ್ರ ದೀಪಿಕಾ’, “ಆಯುರ್ವೇದ ಭಾಸ್ಕರ’ ಮೊದಲಾದ ಪ್ರಶಸ್ತಿ ನೀಡಿದ್ದವು. ಉದ್ಯಮಿ ಡಾ| ಜಿ. ಶಂಕರ್‌, ನಿವೃತ್ತ ಪ್ರಾಂಶುಪಾಲ ಪ್ರೊ| ರಾಧಾಕೃಷ್ಣ ಆಚಾರ್ಯ, ಬಳಕೆದಾರರ ವೇದಿಕೆ ಸಂಚಾಲಕ ಕೆ. ದಾಮೋದರ ಐತಾಳ್‌ ಮೊದಲಾದವರು ಶ್ರದ್ಧಾಂಜಲಿ ಸಲ್ಲಿಸಿದರು. ಸಾಹಿತಿ ಡಾ| ನಾ. ಮೊಗಸಾಲೆ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next