Advertisement

ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ

03:45 AM Jul 06, 2017 | Team Udayavani |

ಮಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದನ್ನು ಬಿಜೆಪಿ ಮುಖಂಡರು ಹಾಗೂ ಸಂಘಟನೆಗಳು ಖಂಡಿಸಿದೆ.

Advertisement

ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಂಸದ ನಳಿನ್‌ ಕುಮಾರ್‌ ಕಟೀಲು, ಕರ್ನಾಟಕ ರಾಜ್ಯದಲ್ಲಿ ನಿರಂತರವಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಹಾಗೂ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿವೆ. ಬಿ.ಸಿ.ರೋಡ್‌ನ‌ಲ್ಲಿ ಮಂಗಳವಾರ ಒಬ್ಬ ಅಮಾಯಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಇದು ಖಂಡನೀಯ. ಈ ಪ್ರಕರಣದಲ್ಲಿ ರಾಜಕೀಯ ಶಕ್ತಿಗಳ ಕೈವಾಡವಿದ್ದಂತೆ ಕಾಣುತ್ತಿದೆ. ಈ ಹಿಂದೆ ನಡೆದ ರುದ್ರೇಶ್‌ ಕೊಲೆ ಪ್ರಕರಣ, ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣ ಮುಂತಾದವುಗಳ ಬಗ್ಗೆ ಇನ್ನೂ ಸರಿಯಾದ ತನಿಖೆ ನಡೆದಿಲ್ಲ. ಗೋಹತ್ಯೆ ಮಾಡಿದವರಿಗೆ 10 ಲಕ್ಷ ರೂ. ಪರಿಹಾರ ನೀಡುತ್ತಾರೆ. ಆದರೆ ಅಮಾಯಕರ ಕೊಲೆಯಾದರೆ ಯಾವುದೇ ಪರಿಹಾರವನ್ನು ಸರಕಾರ ನೀಡುತ್ತಿಲ್ಲ. ಇಂತಹ ಘಟನೆಗಳಲ್ಲಿ ಕೇರಳದವರ ಕೈವಾಡವಿರುವಂತೆ ಕಾಣುತ್ತಿದೆ. ಕೇರಳದವರು ಇಲ್ಲಿಗೆ ಬಂದು ಕೊಲೆ ಮಾಡಿ ತಲೆಮರೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜಿಲ್ಲೆಯಲ್ಲಿ ನಡೆಯತ್ತಿರುವ ಘಟನೆಗಳಿಗೆ ಬೆಂಬಲ ನೀಡುವಂತೆ ಕಾಣುತ್ತಿದೆ. ಪಂಜಿಮೊಗರು ಜೋಡಿ ಕೊಲೆ ಪ್ರಕರಣ, ಉಪ್ಪಿನಂಗಡಿ ಕೊಲೆ ಪ್ರಕರಣದಲ್ಲಿ ಕೂಡ ಇಲ್ಲಿಯವರೆಗೆ ಆರೋಪಿಗಳ ಬಂಧನವಾಗಿಲ್ಲ. ಜಿಲ್ಲೆಯಲ್ಲಿ ನಡೆದಿರುವ ಪ್ರತಿಯೊಂದು ಘಟನೆಗಳನ್ನು ಕೇಂದ್ರ ಗೃಹಸಚಿವಾಲಯಕ್ಕೆ ವರದಿ ನೀಡಿ ಐಎನ್‌ಎ ಮೂಲಕ ತನಿಖೆ ನಡೆಸಲು ಒತ್ತಾಯಿಸಲಾಗುವುದು. ಅಮಾಯಕ ಶರತ್‌ ಅವರನ್ನು ನೋಡಲು ತಾನು ಆಸ್ಪತ್ರೆಗೆ ತೆರಳಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಪಕ್ಷದ ವತಿಯಿಂದ ಆರ್ಥಿಕ ಸಹಾಯ ಒದಗಿಸಲಾಗುತ್ತಿದ್ದರೂ ರಾಜ್ಯ ಸರಕಾರ ಕೂಡ ಈ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು ಎಂದು ನಳಿನ್‌ ಕುಮಾರ್‌ ತಿಳಿಸಿದರು.

ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲ: ಕಾರ್ಣಿಕ್‌
ಇತ್ತೀಚಿನ ದಿನಗಳಲ್ಲಿ ಅಮಾಯಕರ ಮೇಲೆ ಹಲ್ಲೆಗೈಯುವುದು, ಇರಿತಕ್ಕೆ ಒಳಪಡಿಸುವುದು ಹಾಗೂ ಕೊಲೆ ಮಾಡುವುದು ಜಿಲ್ಲೆಯ ಬಂಟ್ವಾಳ ಹಾಗೂ ಕಲ್ಲಡ್ಕ ಪ್ರದೇಶದಲ್ಲಿ ಮುಂದುವರಿದಿದೆ. ಜು. 4ರಂದು ರಾತ್ರಿ ಎಂದಿನಂತೆ ತನ್ನ ಲಾಂಡ್ರಿ ಅಂಗಡಿಯನ್ನು ಬಂದ್‌ ಮಾಡಿ ಮನೆಗೆ ತೆರಳುತ್ತಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ಅಮಾಯಕ ಶರತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಬಿಗಿ ಬಂದೋಬಸ್ತ್ ಹಾಗೂ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಒಂದು ಸಮುದಾಯದವರನ್ನು ಗುರಿಯಾಗಿಸಿ ಅಮಾಯಕರ ಮೇಲೆ ಪ್ರಾಣಾಂತಿಕ ಹಲ್ಲೆ ನಡೆಸಿರುವುದು ಜಿಲ್ಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಹಿಡಿದ ಕೈಗನ್ನಡಿ. ಹಲ್ಲೆಕೋರರನ್ನು ಕೂಡಲೇ ಬಂಧಿಸಿ ಅವರ ಮೇಲೆ ತೀವ್ರ ಕಾನೂನು ಕ್ರಮ ಕೈಗೊಳ್ಳಬೇಕು. ಅಮಾಯಕ ಶರತ್‌ ಚಿಕಿತ್ಸೆಗೆ ಸೂಕ್ತ ನೆರವು ಒದಗಿಸಬೇಕು.

ಇದೇ ಪರಿಸ್ಥಿತಿ ಮುಂದುವರಿದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಾಗರಿಕರು ರೊಚ್ಚಿಗೆದ್ದು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾದಲ್ಲಿ ಇದಕ್ಕೆ ಸಂಪೂರ್ಣವಾಗಿ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಡಳಿತ ಹಾಗೂ ಸರಕಾರವೇ ಹೊಣೆ ಎಂದು ವಿಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ.

Advertisement

ಕೃತ್ಯ ಖಂಡನೀಯ: ದ.ಕ. ಬಿಜೆಪಿ
ಶರತ್‌ ಅವರ ಮೇಲೆ ಕೆಲವೊಂದು ಮತೀಯವಾದಿಗಳಿಂದ ನಡೆದ ಮಾರಣಾಂತಿಕ ಹಲ್ಲೆಯನ್ನು ದ.ಕ. ಜಿಲ್ಲಾ ಬಿಜೆಪಿ ಉಗ್ರವಾಗಿ ಖಂಡಿಸಿದೆ. ಯಾವುದೇ ಅಪರಾಧ ಚಟುವಟಿಕೆಗಳಲ್ಲಿರದೆ ಸಂಘದ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ನಿಷ್ಠಾವಂತ ಕಾರ್ಯಕರ್ತ ಶರತ್‌ ಮೇಲೆ ನಡೆದ ಹಲ್ಲೆಯನ್ನು ಸಂಘ ಪರಿವಾರ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಈ ಹಲ್ಲೆಯ ಬಗ್ಗೆ ಜಿಲ್ಲೆಯ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಗಮನಹಿರಿಸಿ ಕೂಡಲೇ ತನಿಖೆ ಕೈಗೆತ್ತಿಕೊಂಡು ನಿಜವಾದ ಅಪರಾಧಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡದಿದ್ದಲ್ಲಿ ಜಿಲ್ಲೆಯಲ್ಲಿ ಇದರ ವಿರುದ್ಧ ಉಗ್ರ ಹೋರಾಟವನ್ನು ನಡೆಸುವುದಾಗಿ ಜಿಲ್ಲಾ ವಕ್ತಾರ ಜಿತೇಂದ್ರ ಎಸ್‌. ಕೊಟ್ಟಾರಿ ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ.

ಜಿಲ್ಲಾ ಮಡಿವಾಳರ ಸಂಘ, ರಜಕ ಯೂತ್‌ ಮಂಗಳೂರು ಖಂಡನೆ
ಲಾಂಡ್ರಿ ಅಂಗಡಿಯಲ್ಲಿ ಕೆಲಸದಲ್ಲಿ ನಿರತನಾಗಿದ್ದ ಅಮಾಯಕ ಯುವಕ ಶರತ್‌ ಮಡಿವಾಳರ ಮೇಲೆ ದುಷ್ಕರ್ಮಿಗಳು ನಡೆಸಿರುವ ಮಾರಣಾಂತಿಕ ಹಲ್ಲೆಯನ್ನು ದ.ಕ. ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಹಾಗೂ ರಜಕ ಯೂತ್‌ ಮಂಗಳೂರು ತೀವ್ರವಾಗಿ ಖಂಡಿಸಿದೆ.

ಸರಳ ವ್ಯಕ್ತಿತ್ವದ ಶ್ರಮಜೀವಿ ಯುವಕ ಶರತ್‌ ಮಡಿವಾಳ ಅವರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ, ಕಠಿನ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೆ ಒಳಪಡಿಸಬೇಕೆಂದು ದ.ಕ. ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಹಾಗೂ ರಜಕ ಯೂತ್‌ ಮಂಗಳೂರು, ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next