Advertisement

ಮಲೆನಾಡಿನ ಸೆರಗು ಈಗ ಚಳಿಗಾವಿ

12:40 PM Feb 01, 2020 | Suhan S |

ಬೆಳಗಾವಿ: ಮಲೆನಾಡಿನ ಸೆರಗು, ದಕ್ಷಿಣ ಕಾಶಿ ಕುಂದಾನಗರಿ ಮೈ ಕೊರೆಯುವ ಚಳಿಗೆ ನಲುಗಿದ್ದು, ಉತ್ತರ ಭಾರತದಲ್ಲಿ ದಾಖಲೆಯ ಚಳಿ ಸುದ್ದಿ ಕೇಳಿದ್ದ ಬೆಳಗಾವಿ ಮಂದಿಗೂ ಈ ವರ್ಷದಲ್ಲಿ ಅತ್ಯಂತ ದಾಖಲೆ ಪ್ರಮಾಣದ ತಾಪಮಾನ ಕುಸಿತದ ಅನುಭವವಾಗಿದೆ. ಶುಕ್ರವಾರ ಕುಸಿದ ತಾಪಮಾನ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಆಗಿತ್ತು.

Advertisement

ಬೆಳಗ್ಗೆ 9 ಗಂಟೆಯಾದರೂ ಸೂರ್ಯನ ದರ್ಶನವಿಲ್ಲ, ಎಲ್ಲೆಡೆ ಮಂಜು ಮುಸುಕಿದ ವಾತಾವರಣ, ಇಡೀ ಬೆಳಗಾವಿ ನಗರ ಕೊರೆಯುವ ಚಳಿಯಿಂದ ಸುಸ್ತಾಗಿತ್ತು. 31.8- 12 ಡಿಗ್ರಿ ಸೆಲ್ಸಿಯಸ್‌ ವರೆಗೆ ತಾಪಮಾನ ಇತ್ತು.12 ಡಿಗ್ರಿ ಸೆಲ್ಸಿಯಸ್‌ ಎನ್ನುವುದು ಕರ್ನಾಟಕ ರಾಜ್ಯದಲ್ಲಿ ಶುಕ್ರವಾರ ಬೆಳಗಾವಿಯಲ್ಲಿ ಅತಿ ಕಡಿಮೆ ತಾಪಮಾನಕ್ಕೆ ಕುಸಿದಿತ್ತು. ಶುಕ್ರವಾರ ಬೆಳಗ್ಗೆ 9 ಗಂಟೆಯಾದರೂ ಸೂರ್ಯ ಕಂಡು ಬರಲಿಲ್ಲ. ಬೆಳಗಾವಿ ನಗರ ಸೇರಿದಂತೆ ತಾಲೂಕಿನ ಸುತ್ತಲಿನ ಹಳ್ಳಿಗಳಲ್ಲಿ ಮೈ ಕೊರೆಯುವ ಚಳಿಯಿಂದ ಜನರು ಹೈರಾಣಾಗಿದ್ದಾರೆ. ಮಂಜಿನ ಹೊದಿಕೆಯಲ್ಲಿ ಹೊದ್ದು ಮಲಗಿದ ಜನರಿಗೆ ಚಳಿ ಆವರಿಸಿಕೊಂಡಿತ್ತು. ಮಂಜು ಮುಸುಕಿದ ವಾತಾವರಣದಿಂದ ಇಬ್ಬನಿ ಜಾಸ್ತಿಯಾಗಿ ತುಂತುರು ಮಳೆಯ ಅನುಭವವೂ ಆಗಿದೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಿನ ಹೊತ್ತಿಗೆ ಅತಿ ಹೆಚ್ಚು ಮಂಜು ಇದ್ದಿದ್ದು ಗೋಚರವಾಯಿತು.

ಗಡಿಯಾರ ನೋಡಿ ಅವಕ್ಕಾದ ಜನ: ಕಂಡಲ್ಲೆಲ್ಲ ಹೊಗೆಯಂಥ ಮಂಜಿನಲ್ಲಿ ಇಡೀ ಪರಿಸರ ಆವರಿಸಿಕೊಂಡಿತ್ತು. ಪ್ರಕೃತಿಯ ಸೊಬಗು ನೋಡುಗರನ್ನು ಆಕರ್ಷಿಸಿದರೂ ನಡುಗುತ್ತ, ಬಡಬಡಿಸುತ್ತ ಚಳಿಯ ಅನುಭವ ಆಸ್ವಾದಿಸುತ್ತಿರುವುದುಕಂಡು ಬಂತು. ಸೂರ್ಯೋದಯವಾದರೂ ಕಿರಣಗಳು ಭೂಮಿಗೆ ತಾಕಿರಲಿಲ್ಲ. ಸೂರ್ಯನತ್ತ ದೃಷ್ಟಿ ನೆಟ್ಟ ಜನರು ಗಲಿಬಿಲಿಗೊಂಡು ಇನ್ನೂ ಆರು ಗಂಟೆ ಆಗಿಲ್ಲವೆಂದು ಒಂದು ಗಡಿಯಾರ ಕ್ಷಣ ನೋಡಿ ಅವಕ್ಕಾದರು. ಭರ್ಜರಿ ಮಂಜಿನ ಅಬ್ಬರಕ್ಕೆ ವಾಹನಗಳ ಹೆಡ್‌ ಲೈಟ್‌ಗಳ ಪ್ರಖರ ಬೆಳಕು ಹೆಚ್ಚಾದರೂ ರಸ್ತೆ ಮಾತ್ರ ಕಾಣುತ್ತಿರಲಿಲ್ಲ. ಬಹುತೇಕ ಎಲ್ಲ ಕಡೆಗೂ ವಾಹನಗಳು ಲೈಟ್‌ ಹಚ್ಚಿಕೊಂಡೇ ಸಂಚರಿಸುತ್ತಿದ್ದವು. ಚಳಿ ಹೆಚ್ಚಾಗಿದ್ದರಿಂದ ಜನರ ಓಡಾಟ ಅಷ್ಟೊಂದು ಹೆಚ್ಚಾಗಿ ಕಂಡು ಬರಲಿಲ್ಲ. ಬೆಳ್ಳಂಬೆಳಗ್ಗೆ ಬೆಚ್ಚಗಿನ ದಿರಿಸು ಧರಿಸಿ ಜನರು ಓಡಾಡುತ್ತಿರುವುದು ಕಂಡು ಬಂತು. ಬೆಳ್ಳಂಬೆಳಗ್ಗೆ ಹೊಲಕ್ಕೆ ಹೋಗಬೇಕಿದ್ದ ಕೃಷಿಕರು ಎಲ್ಲಿಯೂ ಕಂಡು ಬರಲಿಲ್ಲ.

ಮಂಜು ಗಡ್ಡೆಯಂತಾಗಿದ್ದ ಕೋಟೆ ಕೆರೆ: ನಗರದ ಯಳ್ಳೂರು ಸಮೀಪದ ರಾಜಹಂಸಗಡ ಕೋಟೆ ಮೇಲೆ ನಿಂತು ನೋಡಿದರೆ ಇಡೀ ಬೆಳಗಾವಿ ನಗರದ ಮೇಲೆ ಮೋಡಗಳ ಹೊದಿಕೆ ಹಾಕಿದಂತೆ ಕಂಡು ಬಂತು. ಮಂಜು ಸೃಷ್ಟಿಸಿದ ಅವಾಂತರಕ್ಕೆ ಜನರು ಕೆಲವು ಗಂಟೆಗಳ ಕಾಲ ಸಿಮ್ಲಾ, ಮಡಿಕೇರಿ, ಕೊಡೈಕೆನಾಲ್‌ನ ದೃಶ್ಯಗಳನ್ನು ನೆಪಿಸಿಕೊಂಡರು. ಉತ್ತರ ಭಾರತ ಇಲ್ಲಿಗೆ ಇಳಿದು ಬಂದಂತೆ ಭಾಸವಾದಂತಿತ್ತು. ಕೋಟೆ ಕೆರೆಯ ಪಕ್ಕದ ಕಟ್ಟಡಗಳ ಮೆಲೆ ನಿಂತು ನೋಡಿದಾಗ ಕೆರೆ ಮಂಜು ಗಡ್ಡೆಯಂತೆ ಕಂಡು ಬರುತ್ತಿತ್ತು. ಸೂರ್ಯನನ್ನು ದಿಟ್ಟಿಸಿ ನೋಡುತ್ತಿದ್ದ ಜನರಿಗೆ ಸೂರ್ಯ ಮಾತ್ರ ಕಾಣಿಸುತ್ತಿರಲಿಲ್ಲ.

ಬೆಳಗಾವಿ ತಾಲೂಕಿನ ಕಣಬರ್ಗಿ ಗುಡ್ಡ, ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಶಿನೋಳಿ ರಸ್ತೆ, ದೂರದ ಗುಡ್ಡದ ಅಂಚಿನಲ್ಲಿರುವ ವೈಜನಾಥ ಮಂದಿರ, ಖಾನಾಪುರಕ್ಕೆ ಹೋಗುವ ರಸ್ತೆ ಮಾರ್ಗಗಳೆಲ್ಲವೂ ಸಂಪೂರ್ಣವಾಗಿ ಮಂಜಿನಿಂದ ಕೂಡಿದ ದೃಶ್ಯಗಳು ಮನಮೋಹಕವಾಗಿದ್ದವು. ವಾಯು ವಿವಾಹರಕ್ಕೆ ಬಂದಿದ್ದ ಜನರ ಮನಸ್ಸು ಈ ದೃಶ್ಯ ಕಂಡು ಪುಳಕಿತಗೊಂಡಿತು.

Advertisement

ಹೊರಗೆ ಬರಲು ಹೆದರಿದ ಜನ :  ಮೈ ಕೊರೆಯುವ ಚಳಿಯಿಂದ ಕುಂದಾನಗರಿಯ ಜನ ಹೈರಾಣಾದರು. ಶುಕ್ರವಾರ ದಾಖಲೆ ಕುಸಿತದ ಚಳಿಯಿಂದಾಗಿ ಜನರು ದಿನಿತ್ಯದ ಕೆಲಸಕ್ಕೆ ಬರಲು ಹಿಂದೆ ಮುಂದೆ ನೋಡಿದರು. ಎಲ್ಲೆಡೆಯೂ ಮಂಜು ಮುಸುಕಿದ ವಾತಾವರಣದಿಂದಾಗಿ ದಿನಿದತ್ಯದ ಕೆಲಸಕ್ಕೆ ತೊಡಕಾಯಿತು. ಬೆಚ್ಚಗಿನ ಟೋಪಿ, ಸ್ವೇಟರ್‌,ಜಾಕೆಟ್‌ ಹಾಕಿಕೊಂಡು ಹೊರ ಬಂದಿದ್ದರು. ಇದೇನೋ ಶಿಮ್ಲಾನೋ, ಮಹಾಬಳೇಶ್ವರನೋ ಎಂಬಂತೆ ಉದ್ಘಾರ ತೆಗೆದರು.

 

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next