ಕೆಜಿಎಫ್: ಇತ್ತೀಚೆಗೆ ಹವಾಮಾನದಲ್ಲಿ ಇದ್ದಕ್ಕಿದ್ದಂತೆ ಆಗುತ್ತಿರುವ ವೈಪರೀತ್ಯದಿಂದಾಗಿ ಎಲ್ಲೆಡೆ ವೈರಲ್ ಫೀವರ್ ತೀವ್ರವಾಗ ತೊಡಗಿದ್ದು, ಮನೆ ಮನೆಯಲ್ಲಿ ಒಂದಿಬ್ಬರು ಕೆಮ್ಮು, ನೆಗಡಿ, ಶೀತ, ತಲೆನೋವು ಸೇರಿದಂತೆ ಜ್ವರದಿಂದ ಬಳಲುತ್ತಿರುವುದು ಕಳವಳಕಾರಿಯಾಗಿದ್ದು, ಕೊರೊನಾ ಮಹಾಮಾರಿ ಮತ್ತೆ ಆವರಿಸುವುದೇ ಎಂಬ ಭಯ ಕಾಡ ತೊಡಗಿದೆ.
ಕೋವಿಡ್ ವೈರಾಣುವಿನ ಸಹೋದರ ಎನ್ನು ವಂತಿರುವ ಎಚ್9 ಎನ್2 ವೈರಸ್ ಸೋಂಕು ಸಹ ಹೆಚ್ಚುತ್ತಿರುವುದು ಜನರನ್ನು ಹೈರಾಣಾಗಿಸಿದೆ. ಕೋವಿಡ್-19, ವೈರಲ್ ಫೀವರ್‌ಮತ್ತು ಎಚ್9 ಎನ್2 ಲಕ್ಷಣಗಳು ಬಹುತೇಕ ಒಂದೇ ಆಗಿರುವುದ ರಿಂದ ಜನರು ತಮಗೆ ಆಗಿರುವ ಸೋಂಕು ಯಾವುದೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದಾರೆ.
ಜ್ವರಕ್ಕೆ ತುತ್ತಾಗುತ್ತಿರುವ ಮಕ್ಕಳು: ಮನೆ ಮನೆಯಲ್ಲೂ ಒಂದಿಬ್ಬರು ಜ್ವರದಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳು ಹಾಗೂ ವಯಸ್ಕರು ಬಹುಬೇಗ ವೈರಾಣು ಜ್ವರಕ್ಕೆ ತುತ್ತಾಗುತ್ತಿದ್ದಾರೆ. ವೈರಾಣು ಜ್ವರ ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುವುದರಿಂದ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಮೂರ್ನಾಲ್ಕು ದಿನ ವಿಪರೀತ ಚಳಿ, ಜ್ವರ, ನೆಗಡಿ, ಕೆಮ್ಮು, ತಲೆಭಾರ, ಮೈ-ಕೈ ನೋವು, ಕೆಲವರಲ್ಲಿ ಉಸಿರಾಟದ ತೊಂದರೆ, ವಾಂತಿ, ಬೇ ಧಿ, ಹೊಟ್ಟೆ ನೋವು, ಕಣ್ಣು ಕೆಂಪಾಗುವುದು, ಡೆಂಘಿ , ಚಿಕೂನ್ ಗುನ್ಯಾ ಸೇರಿದಂತೆ ಹಲವು ವೈರಲ್ ಜ್ವರಗಳ ಕಾಮನ್ ಲಕ್ಷಣಗಳಾಗಿವೆ.
ಆತಂಕ ಬೇಡ, ಅಂತರ ಕಾಪಾಡಿಕೊಳ್ಳಿ: ಕೋವಿಡ್ ಲಕ್ಷಣ ಮತ್ತು ವೈರಲ್ ಜ್ವರದ ಲಕ್ಷಣಗಳು ಒಂದೇ ಆಗಿದ್ದರೂ ಆತಂಕ ಪಡಬೇಕಿಲ್ಲ. ನಿರಂತರ ಮೂರು ದಿನ ಜ್ವರವಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ವೈದ್ಯರ ಸಲಹೆಯಂತೆ ಪ್ಯಾರಸೆಟಮಾಲ್ ಮತ್ತು ಇತರ ಗುಳಿಗೆಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಸೋಪಿನಿಂದ ಕೈಗಳನ್ನು ನಿರಂತರವಾಗಿ ತೊಳೆಯಬೇಕು. ಜನಜಂಗುಳಿಯ ನಡುವೆ ಇರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಧ್ಯವಾದಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ದೇಹ ಶುಷ್ಕವಾಗಲು ಆಸ್ಪದ ನೀಡದೆ ಸಾಕಷ್ಟು ನೀರು ಕುಡಿಯಬೇಕು ಎಂಬಿತ್ಯಾದಿ ಸಲಹೆಗಳನ್ನು ವೈದ್ಯರು ನೀಡಿದ್ದಾರೆ.
ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ ವಿವಿಧ ರೋಗಗಳಿಗೆ ಹೊರ ರೋಗಿಗಳಾಗಿ ಬಂದು ಚಿಕಿತ್ಸೆ ಪಡೆಯುವವರ ಸಂಖ್ಯೆ ಸುಮಾರು 800 ರಿಂದ 1200 ರಷ್ಟಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಜ್ವರ, ಶೀತ, ನೆಗಡಿ ಮತ್ತು ಕೆಮ್ಮಿಗಾಗಿ ಬರುವವರೇ ಆಗಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಈ ಸೋಂಕಿನ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುತ್ತಿದ್ದು, ಈ ಸೋಂಕಿನ ಬಗ್ಗೆ ಜಾಗೃತಿ ವಹಿಸುವಂತೆ ತಿಳಿಸಿದೆ. ರಾಜ್ಯದಲ್ಲಿ ಯಾವುದೇ ಆತಂಕದ ಸ್ಥಿತಿ ಇಲ್ಲ. ಆದರೂ, ವೈದ್ಯಕೀಯ ಸಿಬ್ಬಂದಿ ಜಾಗರೂಕರಾಗಿರುವಂತೆ ಆರೋಗ್ಯ ಇಲಾಖೆ ಸುತ್ತೋಲೆಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸಿದೆ ಎನ್ನಲಾಗಿದೆ.
ಸೆಪ್ಟಂಬರ್‌ನಿಂದ ಡಿಸೆಂಬರ್‌ವರೆಗೆ ವೈರಲ್ ಫೀವರ್ ಹೆಚ್ಚಾಗಲಿದ್ದು, ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿಯ ರೂಪದಲ್ಲಿ ಇದು ಕಂಡು ಬರುತ್ತದೆ. ಆರ್‌ಎಸ್‌ವಿ(ರೆಸ್ಪಿರೇಟರಿ ಸೆನ್ಸಿಟಿಯಲ್ ವೈರಸ್) ಈ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಯಿಲೆ ಉಲ್ಬಣಿಸಿದರೆ ವೈರಲ್ ಫೀವರ್‌ನ್ಯುಮೋನಿಯಾಗೆ ತಿರುಗುತ್ತದೆ. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ, ಮೂರ್‍ನಾಲ್ಕು ದಿನ ನಿರಂತರವಾಗಿ ಜ್ವರ ಮತ್ತು ನೆಗಡಿಯಿದ್ದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರನ್ನು ಭೇಟಿ ಮಾಡಿ ನೀಡುವ ಮಾತ್ರೆ ತೆಗೆದುಕೊಳ್ಳಬೇಕು
. – ಡಾ.ಸುರೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ, ಸಾರ್ವಜನಿಕ ಆಸ್ಪತ್ರೆ, ಕೆಜಿಎಫ್
ಸಾಮಾನ್ಯ ಜ್ವರ, ನೆಗಡಿ, ಶೀತದ ಬಗ್ಗೆ ಜನರಿಗಿ ರುವ ಭಯವನ್ನು ಹೋಗಲಾ ಡಿಸಲು ವೈದ್ಯರು ತಿಳಿವಳಿಕೆ ನೀಡಬೇಕು. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಸಹಜವಾ ಗಿಯೇ ಹೆಚ್ಚಾಗಿರುವುದರಿಂದ ಮತ್ತೆ ಕೊರೊನಾ ಹರಡುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. ಜನರು ಧೈರ್ಯವಾಗಿರಬೇಕು.
● ರೂಪಕಲಾ ಶಶಿಧರ್, ಶಾಸಕಿ, ಕೆಜಿಎಫ್
– ನಾಗೇಂದ್ರ ಕೆ.