ಕನಕಪುರ: ಭಾರತೀಯ ಯುವ ಜನತೆಗೆ ವಿವಿಧೆಡೆಗಳಲ್ಲಿ ವಿಫುಲ ಅವಕಾಶಗಳು ದೊರೆಯಲಿದೆ ಎಂದು ವಾಸ್ತುಶಿಲ್ಪ ತಜ್ಞೆ ಪ್ರಣೋಂತಿ ನಾಗರಾಜ್ ತಿಳಿಸಿದರು. ಸೋಮನಹಳ್ಳಿಯ ಎಪಿಎಸ್ ಕಾಲೇಜಿನಲ್ಲಿ ನಡೆದ ಸೃಷ್ಟಿ ವಾಸ್ತುಶಿಲ್ಪ ಹಬ್ಬ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ಯುವಕರು ಒಮ್ಮೆ ಅವಕಾಶಗಳು ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಆಗ ನಾವು ಸಮಾಜದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾವು ನಮ್ಮ ಕೆಲಸದಲ್ಲಿ ಮೊದಲು ಬದ್ಧತೆ ತೋರಬೇಕು. ವಾಸ್ತುಶಿಲ್ಪ ವಿಭಾಗದಲ್ಲಿ ಇಂದು ಅವಕಾಶಗಳು ಸಾಗರದೋಪಾದಿಯಲ್ಲಿದ್ದು, ನಾವು ನೈಪುಣ್ಯತೆಯಿಂದ ಕೆಲಸ ಮಾಡಿದರೆ, ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು.
ಕಠಿಣ ಪರಿಶ್ರಮದಿಂದ ಸಾಧನೆ: ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್‌ನ ಉಪಾಧ್ಯಕ್ಷ ಎ.ಪಿ.ಆಚಾರ್ಯ ಮಾತನಾಡಿ, ಸಮಾಜದಲ್ಲಿ ಉನ್ನತ ಹಂತಕ್ಕೆ ತಲುಪಲು ಸಾಧನೆ ಮಾಡಬೇಕಾಗಿದೆ. ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಾಸ್ತು ಶಿಲ್ಪದಲ್ಲಿ ಮಾಡುವ ಒಂದು ಉತ್ತಮ ಕಲಾಕೃತಿ ಭವಿಷ್ಯವನ್ನು ನಿರ್ಧರಿಸಲಿದ್ದು, ಉತ್ತಮ ವಾಸ್ತುಶಿಲ್ಪಗಳನ್ನು ಮಾಡುವತ್ತ ಗಮನಹರಿಸಿ ಎಂದು ಮನವಿ ಮಾಡಿದರು.
ವಿಶಿಷ್ಟ ವ್ಯಕ್ತಿತ್ವ ಬೆಳೆಸಿಕೊಳ್ಳಿ: ಎಪಿಎಸ್ ಎಜುಕೇಷನಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ನರಸಿಂಹಮೂರ್ತಿ ಮಾತನಾಡಿ, ನಿಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಕೆಲಸ ಮಾಡಬೇಕು. ಎಲ್ಲರನ್ನೂ ಆಕರ್ಷಣೆ ಮಾಡುವ ಒಂದು ವಿಶಿಷ್ಟ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಮನದಲ್ಲಿ ಮೂಡುವ ಭಾವನೆಗಳನ್ನು ಪರಿಕಲ್ಪನೆಯನ್ನು ಚಿತ್ರರೂಪದಲ್ಲಿ ಬೆಳೆಸಬೇಕು. ಇದಕ್ಕಾಗಿ ನಿರಂತರ ಪ್ರಯತ್ನವನ್ನು ಮಾಡಬೇಕು. ನಮ್ಮ ಕರ್ತವ್ಯ ಏನು ಎಂಬುದನ್ನು ಅರಿತು ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಆಸಕ್ತಿಯಿಂದ ಮುಂದೆಸಾಗಿ: ಎಪಿಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಕೆ.ಜಿ.ಶಿವಪ್ರಕಾಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದಲ್ಲಿ ನಾವು ಹೇಗೆ ಸಾಗಬೇಕು ಎಂಬುದನ್ನು ಕಲಿಸುವುದು ನಮ್ಮ ಉದ್ದೇಶವಾಗಿದೆ. ಎಲ್ಲಾ ವಿಭಾಗಗಳಲ್ಲಿಯೂ ಇಂದು ಸ್ಪರ್ಧೆ ಏರ್ಪಟ್ಟಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಮುಂದೆಸಾಗಬೇಕು ಎಂದು ಹೇಳಿದರು.
ಸೃಷ್ಟಿ ವಾಸ್ತುಶಿಲ್ಪ ಹಬ್ಬ ಕಾರ್ಯಕ್ರಮದಲ್ಲಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳ ಕಾಲೇಜಿನಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರಿ. ಈ ವೇಳೆ ಎಪಿಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉಪಪ್ರಾಂಶುಪಾಲ ವಿದ್ಯಾಶಂಕರ್, ಉಪನ್ಯಾಸಕಿ ವೀಣಾ ಸೇರಿದಂತೆ ಅನೇಕರು ಹಾಜರಿದ್ದರು.