Advertisement

ವೇತನ ಹೆಚ್ಚಳದಿಂದ ಅಪವಾದ ದೂರ

12:26 PM Mar 03, 2018 | Team Udayavani |

ಬೆಂಗಳೂರು: “ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಸರ್ಕಾರ ಆದೇಶ ಹೊರಡಿಸಿರುವುದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ದೇಶದಲ್ಲೇ ಎಲ್ಲ 30 ರಾಜ್ಯಗಳ ಸರ್ಕಾರಿ ನೌಕರರ ಸಂಬಳಕ್ಕಿಂತಲೂ ಹೆಚ್ಚಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ ಭಾರತದಲ್ಲೇ ನಂ.1 ಸ್ಥಾನದಲ್ಲಿದೆ.

Advertisement

ಹಿಂದೆಂದೂ ಕಂಡರಿಯದಷ್ಟು ಪ್ರಮಾಣದಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಏರಿಕೆಯಾಗಿದ್ದು, ಸಮಸ್ತ ನೌಕರ ಸಿಬ್ಬಂದಿ ಫ‌ುಲ್‌ ಖುಷ್‌ ಆಗಿದ್ದಾರೆ. ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು,’

ಇದು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಮನತುಂಬಿ ಹೇಳಿದ ಮಾತುಗಳು. ರಾಜ್ಯ ಸರ್ಕಾರ ಶೇ.30ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ಅವರು “ಯಾವ ಮುಖ್ಯಮಂತ್ರಿಗಳ ಅವಧಿಯಲ್ಲೂ ಆಗದಷ್ಟು ವೇತನ ಹೆಚ್ಚಳ ಸಿದ್ದರಾಮಯ್ಯ ಅವರ ಅವಧಿಯಲ್ಲಿ,’ ಆಗಿದೆ ಎಂದು ತಿಳಿಸಿದರು.

ಅಪವಾದ ದೂರಾಗಿದೆ: “ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡುವುದಿಲ್ಲವೆನ್ನುವ ಅಪನಂಬಿಕೆ ಎಲ್ಲರಲ್ಲೂ ಇತ್ತು. ಸಿದ್ದರಾಮಯ್ಯ ಸರ್ಕಾರಿ ನೌಕರರ ವಿರೋಧಿ ಎನ್ನುವ ಭಾವನೆ ನೌಕರ ಸಮುದಾಯದಲ್ಲಿತ್ತು. ಆದರೆ ವೇತನ ಆಯೋಗದ ಶಿಫಾರಸಿನಂತೆ ಶೇ.30ರಷ್ಟು ವೇತನ ಹೆಚ್ಚಿಸಿ ಸಿಎಂ ಆದೇಶ ಹೊರಡಿಸಿರುವುದು ಅವರ ಮೇಲಿನ ಅಪವಾದವನ್ನು ದೂರಮಾಡಿದೆ.

ಹಿಂದೆ ಶೇ.7.50ರಷ್ಟು, 22.30ರಷ್ಟು ವೇತನ ಏರಿಕೆಯಾಗಿದೆ. ಆದರೆ ಶೇ.30ರಷ್ಟು ವೇತನ ಹೆಚ್ಚಳ ಸರ್ಕಾರಿ ನೌಕರರ ಇತಿಹಾಸದಲ್ಲೇ ಮೊದಲು. ಈ ಕಾರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಶನಿವಾರ ಅರಮನೆ ಮೈದಾನದಲ್ಲಿ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಸನ್ಮಾನ ಮಾಡಲಾಗುತ್ತದೆ,’ ಎಂದು ಮಂಜೇಗೌಡ ತಿಳಿಸಿದರು.

Advertisement

“ರಾಜ್ಯ ಸರ್ಕಾರಿ ನೌಕರರ ಶೇ.90ರಷ್ಟು ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಸಣ್ಣಪುಟ್ಟ ಬೇಡಿಕೆಗಳು ಬಾಕಿ ಇವೆ ಮುಂದಿನ ದಿನಗಳಲ್ಲಿ ಅವುಗಳನ್ನೂ ಈಡೇರಿಸಲು ಸರ್ಕಾರಿ ನೌಕರರ ಸಂಘದಿಂದ ಪ್ರಯತ್ನ ನಡೆಸಲಾಗುತ್ತಿದೆ,’ ಎಂದಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಸಮಾನಾದ ವೇತನ ನೀಡಬೇಕೆನ್ನುವುದು ನಿಮ್ಮ ಬೇಡಿಕೆಯಾಗಿತ್ತು.

ಕೇಂದ್ರದ 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ತಮಗೂ ನೀಡುವಂತೆ ನೌಕರರ ಸಂಘ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಅದು ಈಡೇರಲಿಲ್ಲವಲ್ಲವೆಂದು ಕೇಳಿದ ಪ್ರಶ್ನೆಗೆ, “ಹೌದು ಆ ಬೇಡಿಕೆ ಈಗಲೂ ಇದೆ. ಆದರೆ ಈಗ ಮಾಡಿರುವ ವೇತನ ಹೆಚ್ಚಳದ ಬಗ್ಗೆ ಸಂಪೂರ್ಣ ತೃಪ್ತಿಯಿದೆ. ನಾವು ಇಷ್ಟೊಂದು ಪ್ರಮಾಣದ ವೇತನ ಹೆಚ್ಚಳ ನಿರೀಕ್ಷೆ ಮಾಡಿರಲಿಲ್ಲ,’ ಎಂದರು.

ಮನೆ ಬಾಡಿಗೆ ಭತ್ಯೆಯನ್ನು ಶೇ.30ರಿಂದ ಶೇ.24ಕ್ಕೆ ಇಳಿಸಿರುವ ಬಗ್ಗೆ ಬಹಳಷ್ಟು ನೌಕರರಲ್ಲಿ ಅಸಮಾಧಾನವಿದೆ. ನೀವು ಹರ್ಷ ವ್ಯಕ್ತಪಡಿಸುತ್ತಿದ್ದೀರಲ್ಲಾ ಎನ್ನುವ  ಪ್ರಶ್ನೆಗೆ ಮಂಜೇಗೌಡ ಅವರು, “ಮನೆಬಾಡಿಗೆ ಭತ್ಯೆ ಇಳಿಕೆಯಿಂದ ನೌಕರರಿಗೆ ನಷ್ಟಕ್ಕಿಂತ ಹೆಚ್ಚು ಲಾಭವಿದೆ. ಸರಿಯಾಗಿ ವಿಚಾರ ತಿಳಿಯದೇ ಇರುವವರು ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಹಾಗೂ ತಪ್ಪು ಮಾಹಿತಿ ಪಸರಿಸಿ ಗೊಂದಲ ಸೃಷ್ಟಿಮಾಡುತ್ತಿದ್ದಾರೆ,’ ಎಂದು ಆಪಾದಿಸಿದರು.

ಕೇಂದ್ರ ನೌಕರರಿಗಿಂತಾ ಹೆಚ್ಚಾಗುತ್ತದೆ: “ಮೂಲ ವೇತನದಲ್ಲಿ ತುಟ್ಟಿಭತ್ಯೆ ಸೇರಿಸಿರುವುದರಿಂದ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನ ಏರಿಸಿದರೂ ಒಟ್ಟಾರೆಯಾಗಿ ಶೇ.40ರಿಂದ 45ರಷ್ಟು ವೇತನ ಹೆಚ್ಚಳವಾದಂತಾಗುತ್ತದೆ. ಅಲ್ಲದೆ, ಪ್ರತಿ ವರ್ಷ ನೀಡುವ ಇನ್‌ಕ್ರೀಮೆಂಟ್‌ (ವಾರ್ಷಿಕ ವೇತನ ಹೆಚ್ಚಳ) ಕೂಡ ದ್ವಿಗುಣಗೊಳಿಸಲಾಗಿದೆ.

200 ರೂ. ಇರುವ ವಾರ್ಷಿಕ ವೇತನ ಹೆಚ್ಚಳ 400ರೂ.ಗೆ, 500 ರೂ ಇದ್ದರೆ 1000 ರೂ. ಏರಿಕೆಯಾಗಲಿದೆ. ರಾಜ್ಯದಲ್ಲಿ ಪ್ರತಿ 5 ವರ್ಷಕೊಮ್ಮೆ ವೇತನ ಆಯೋಗ ರಚನೆಯಾಗುವುದರಿಂದ ಇನ್ನೈದು ವರ್ಷಗಳಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಕೇಂದ್ರ ಸರ್ಕಾರಿ ನೌಕರರಿಗಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ,’ ಎಂದು ಮಂಜೇಗೌಡ ಎಂದು ತಿಳಿಸಿದರು.

ಬಾಡಿಗೆ ಭತ್ಯೆ ಇಳಿಕೆಯಿಂದ ಲಾಭ: “ಮನೆಬಾಡಿಗೆ ಭತ್ಯೆ ಇಳಿಕೆಯಿಂದ ಹೇಗೆ ಲಾಭವಾಗುತ್ತದೆ..? ಎಂಬ ಪ್ರರ್ಶನೆಗೆ ಪ್ರತಿಕ್ರಿಯಿಸಿದ ಅವರು, “ಒಬ್ಬ ಡಿ ಗ್ರೂಪ್‌ ನೌಕರನಿಗೆ ಮೊದಲಿದ್ದ 9600 ರೂ. ಮೂಲವೇತನಕ್ಕೆ ಶೇ.30ರಷ್ಟು ಮನೆಬಾಡಿಗೆ ಭತ್ಯೆ 2880 ರೂ. ಆಗುತ್ತಿತ್ತು.

ಈಗ ಪರಿಷ್ಕೃತ ವೇತನ ಪ್ರಕಾರ ಡಿ ಗ್ರೂಪ್‌ ನೌಕರನಿಗೆ ಮೂಲವೇತನ 17 ಸಾವಿರ ಆಗಲಿದೆ ಇದಕ್ಕೆ ಶೇ.24ರಷ್ಟು ಮನೆ ಬಾಡಿಗೆ ಭತ್ಯೆ, ಅಂದರೆ 4080 ರೂ ಆಗಲಿದೆ. ಹೆಚ್ಚಳವಾದ ವೇತನಕ್ಕೆ ಸೇರಿಸಿ ಮನೆಬಾಡಿಗೆ ಭತ್ಯೆ ಲೆಕ್ಕಹಾಕುವುದರಿಂದ ಜಾಸ್ತಿ ಮನೆ ಬಾಡಿಗೆ ಭತ್ಯೆ ದೊರೆಯಲಿದೆ. ಪರ್ಸೆಂಟೇಜ್‌ ವಾರು ಕಡಿಮೆ ಅನಿಸಿದರೂ ಏರಿಕೆ ಮಾಡಿದ ವೇತನಕ್ಕೆ ಕಡಿಮೆ ಪ್ರಮಾಣದ ಎಚ್‌ಆರ್‌ಎ ನೀಡಿದರೂ ನಷ್ಟವಾಗುವುದಿಲ್ಲ ,’ಎಂದು ಮಂಜೇಗೌಡ ಸ್ಪಷ್ಟನೆ ನೀಡಿದರು.

ಸಮಾನ ವೇತನ ಬೇಡಿಕೆಯಲ್ಲಿ ರಾಜಿಯಿಲ್ಲ: “ಸರ್ಕಾರ ಶೇ.30ರಷ್ಟು ವೇತನ ಪರಿಷ್ಕರಣೆ ಮಾಡಿದ್ದಕ್ಕೆ ಸಂತಸವಿದೆ. ಹಾಗಂತ ಕೇಂದ್ರ ಸರ್ಕಾರಿ ನೌಕರರಿಗೆ ಸಮನಾದ ವೇತನ ಬೇಕೆಂಬ ಬೇಡಿಕೆಯಲ್ಲಿ ರಾಜಿಯಿಲ್ಲ ಅದಕ್ಕಾಗಿ ಸರ್ಕಾರಿ ನೌಕರರ ಸಂಘದಿಂದ ಹೋರಾಟ ಮುಂದುವರಿಯಲಿದೆ. ಶೇ.30ರ ಜತೆಗೆ ಶೇ.15ರಷ್ಟು ವೇತನ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿ ಒತ್ತಾಯಿಸಲಾಗುತ್ತದೆ.

ಸದಾ ಒತ್ತಡದಲ್ಲೇ ಕೆಲಸ ಮಾಡುವ ನೌಕರರಿಗೆ ವಾರದಲ್ಲಿ ಎರಡು ದಿನ ಇಲ್ಲವೇ ಪ್ರತಿ ತಿಂಗಳ 4ನೇ ಶನಿವಾರ ರಜೆ ನೀಡುವಂತೆ ಕೋರಲಾಗುವುದು. ರಾಜ್ಯದ ಜನಸಂಖ್ಯೆ 3.50 ಕೋಟಿ ಇದ್ದಾಗ 7.90 ಲಕ್ಷ ಸರ್ಕಾರಿ ನೈಕರರ ಹುದ್ದೆ ಮಂಜಜೂರಾಗಿತ್ತು. ಈಗ ಜನಸಂಖ್ಯೆ 6.50 ಕೋಟಿ ತಲುಪಿದರೂ ಸರ್ಕಾರಿ ನೌಕರರ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ. ಬದಲಿಗೆ 2.87 ಲಕ್ಷ ನೌಕರರ ಕೊರತೆಯಿದೆ. ಖಾಲಿಯಿರುವ ಹುದ್ದೆ ಭರ್ತಿಗೆ ಗಮನ ನೀಡುವಂತೆ ರಾಜ್ಯ ಸರ್ಕಾರ ಮತ್ತು ವೇತನ ಆಯೋಗಕ್ಕೆ ಆಗ್ರಹಿಸಲಾಗುತ್ತದೆ,’ ಎಂದು ಮಂಜೇಗೌಡ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next