ಹುಬ್ಬಳ್ಳಿ: ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯವಾಗಿದ್ದು, ಮಕ್ಕಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಂಗೀತ-ವಿವಿಧ ಕ್ರೀಡೆಗಳು ಮುಖ್ಯವಾಗಿವೆ ಎಂದು ಎಸ್‌ಡಿಎಂ ವೈದ್ಯ ಕಾಲೇಜು ಮತ್ತು ಆಸ್ಪತ್ರೆ ರೋಗಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಆದಿತ್ಯ ಅಗ್ನಿಹೋತ್ರಿ ಹೇಳಿದರು.
ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಿದ್ದ ದಾಕ್ಷಾಯಣಿ ಕಲ್ಯಾಣಶೆಟ್ಟರ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿವೆ. ದಾಕ್ಷಾಯಣಿ ಕಲ್ಯಾಣಶೆಟ್ಟರ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಗೀತ, ಈಜು, ಕರಾಟೆ, ತಬಲಾ, ಬ್ಯಾಡ್ಮಿಂಟನ್ ಹೀಗೆ ವಿವಿಧ ತರಬೇತಿಯನ್ನು ಮಕ್ಕಳಿಗೆ ನೀಡುತ್ತಿರುವುದು ಶ್ಲಾಘನಿಯ ಎಂದರು. ಮಕ್ಕಳು ಕಲಿಕೆಯಲ್ಲಿ ಸಹಪಾಠಿಗಳೊಂದಿಗೆ ಬೆರೆತು ಕಲಿಯುವುದು, ಶಿಕ್ಷಕರ ಬೋಧನೆಯೊಂದಿಗೆ ಕಲಿಯುವುದು ಜತೆಗೆ ತನ್ನ ಸ್ನೇಹಿತರು, ಶಿಕ್ಷಕರು, ಪಾಲಕರು, ಸಂಬಂಧಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಮನನ ಅತ್ಯವಶ್ಯವಾಗಿದೆ ಎಂದು ಹೇಳಿದರು.
ಜೆ.ಕೆ. ಸ್ಕೂಲ್, ದಾಕ್ಷಾಯಣಿ ಕಲ್ಯಾಣಶೆಟ್ಟರ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ ಕಲ್ಯಾಣಶೆಟ್ಟರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೆಟ್ರೋ ನಗರಗಳಲ್ಲಿನ ಪ್ರತಿಷ್ಠಿತ ಶಾಲೆಗಳು ನೀಡುವಂತಹ ಗುಣಮಟ್ಟದ ಶಿಕ್ಷಣದ ಜತೆಗೆ, ಹೆಚ್ಚಿನ ಸೌಲಭ್ಯಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಸುಮಾರು 4 ಸಾವಿರ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯಗಳನ್ನು ನೀಡಲಾಗುವುದು ಎಂದರು. ಶಿಕ್ಷಕರ ಶ್ರಮ ಹಾಗೂ ಪಾಲಕರ ಸಹಕಾರದಿಂದ ಇಂತಹ ಸಾಧನೆ-ಸೌಲಭ್ಯಗಳು ಸಾಧ್ಯವಾಗುತ್ತಿವೆ. ಶಾಲಾ ವಾರ್ಷಿಕೋತ್ಸವದಲ್ಲಿ ಬಾಲಿವುಡ್ ಚಿತ್ರಗಳ ಹಾಡುಗಳನ್ನು ಹಾಕಿ ಮಕ್ಕಳನ್ನು ಕುಣಿಸುವ ಬದಲು ಭಾರತೀಯ ಸಂಸ್ಕೃತಿ, ಪರಂಪರೆಗೆ ಪೂರಕ ಹಾಗೂ ಇತಿಹಾಸ ನೆನಪಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳಲ್ಲಿಯೂ ದೇಶಪ್ರೇಮ, ಸಂಸ್ಕೃತಿ-ಪರಂಪರೆ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ದಾಕ್ಷಾಯಣಿ ಕಲ್ಯಾಣಶೆಟ್ಟರ ಪಬ್ಲಿಕ್ ಶಾಲೆ ಉಪಾಧ್ಯಕ್ಷೆ ಸವಿತಾ ಕಲ್ಯಾಣ ಶೆಟ್ಟರ, ಪ್ರಾಂಶುಪಾಲ ವಿ. ಇಂದಿರಾ ಇನ್ನಿತರರು ಇದ್ದರು. ಕಳೆದ ವರ್ಷ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಹಾಗೂ ಈ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಿಬ್ಬರಿಗೆ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.