ಬೆಳ್ತಂಗಡಿ: ಲೋಕಸಭಾ ಚುನಾವಣೆ ಪೂರ್ವಸಿದ್ಧತೆ ವೀಕ್ಷಿ ಸುವ ಸಲುವಾಗಿ ಗುರುವಾರ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ರುವ ಎಸ್‌ಡಿಎಂ ಪ.ಪೂ. ಕಾಲೇಜಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಪೋಸ್ಟಲ್ ಮತದಾನದ ಬಗ್ಗೆ ವಿಚಾರಣೆ ನಡೆಸಿ ಸಮಗ್ರ ಮಾಹಿತಿ ಪಡೆದರು. ಬಳಿಕ ಮಸ್ಟರಿಂಗ್ ಸಿದ್ಧತಾ ಕೊಠಡಿ, ಸ್ಟ್ರಾಂಗ್ ರೂಮ್ ಪರಿಶೀಲಿ ಸಿದರು. ಮೊದಲ ಬಾರಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಯ ಮಾಹಿತಿ ಪಡೆದರು. ಎಳನೀರು ಗುತ್ಯಡ್ಕ ಮತಗಟ್ಟೆ ಸಿಬಂದಿ ಜತೆಗೆ ಮಾತುಕತೆ ನಡೆಸಿ, ಅಲ್ಲಿನ ಗುಡ್ಡಗಾಡು ಪ್ರದೇಶದ ಬಗ್ಗೆ ಎಚ್ಚರಿಕೆ ವಹಿಸಿ, ಆರೋಗ್ಯ ವಿಚಾರವಾಗಿ ಸೂಕ್ತ ಔಷಧದ ಜತೆಗೆ ತೆರಳುವಂತೆ ಸಲಹೆ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತ ನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಮತದಾನ ಸುಸೂತ್ರವಾಗಿ ನಡೆಸುವ ಸಲುವಾಗಿ ಬೆಳ್ತಂಗಡಿ ತಾಲೂಕಿನ 200ನೇ ವಿಧಾನ ಸಭಾ ಕ್ಷೇತ್ರದಿಂದ ಪೂರ್ವತಯಾರಿ ಪರಿಶೀಲಿಸಿದ್ದೇನೆ. ಇಲ್ಲಿ 241 ಮತಗಟ್ಟೆಗಳಿದ್ದು ಪ್ರಮುಖವಾಗಿ ನಕ್ಸಲ್ ಭೀತಿಯುಳ್ಳ ಮತಗಟ್ಟೆ ಸಹಿತ ತೀರಾ ಹಳ್ಳಿಗಾಡು ಪ್ರದೇಶವಾದ ಬಾಂಜಾರು ಮಲೆ ಎಳನೀರು ಪ್ರದೇಶಗಳ ಮತಗಟ್ಟೆ ಕೇಂದ್ರಗಳಿಗೆ ಪ್ರತ್ಯೇಕ ಸೆಕ್ಟರ್ ಅಧಿಕಾರಿ ಸಹಿತ ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಮಹಿಳಾ ಮತದಾರರು ಹೆಚ್ಚಿರುವ ಕ್ಷೇತ್ರ ವಾಗಿರುವುದರಿಂದ ವಿಶೇಷ ಮುತು ವರ್ಜಿ ವಹಿಸಿ ಸವಲತ್ತು ಸಹಿತ ಸಖೀ ಮತಗಟ್ಟೆ ರಚಿಸಲಾಗಿದೆ ಎಂದರು.
ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ ಎಚ್., ತಹಶೀಲ್ದಾರ್ ಪೃಥ್ವಿ ಸಾನಿಕಮ್, ಎಆರ್‌ಇಒ ಸಹಾಯಕ ಸುಭಾಷ್ ಜಾದವ್, ಮಾಸ್ಟರ್ ಟ್ರೇನರ್‌ಗಳಾದ ಧರಣೇಂದ್ರ ಜೈನ್, ಮಹೇಶ್ ಬೆಳಾಲು, ಅಜಿತ್ ಕೊಕ್ರಾಡಿ ಜತೆಗಿದ್ದರು.
ಮಜ್ಜಿಗೆ ಸವಿದ ಡಿಸಿ
ಬೆಳ್ತಂಗಡಿ ತಾಲೂಕಿನಲ್ಲಿ ನಿಯೋಜಿತ ಸಿಬಂದಿಗೆ ಪ್ರತೀ ಬಾರಿ ಆಹಾರದಲ್ಲಿ ಕೊರತೆ ಅನುಭವಿಸುತ್ತಿರುವ ಕುರಿತು ಸಿಬಂದಿ ಅಸಮಧಾನ ಹೊರಹಾಕುತ್ತಿದ್ದರು. ಕಳೆದ ವಾರ ನಡೆದ ತರಬೇತಿ ಅವಧಿಯಲ್ಲಿ ಈ ವಿಚಾರ ಗಂಭೀರ ಸ್ವರೂಪ ಪಡೆದಿತ್ತು. ಈ ಕುರಿತು ಉದಯವಾಣಿ ಗಮನ ಚೆಲ್ಲಿದ್ದರಿಂದ ಜಿಲ್ಲಾಧಿಕಾರಿಗಳ ಗಮನಕ್ಕೂ ತಲುಪಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಭೋಜನದ ವ್ಯವಸ್ಥೆ ಕುರಿತು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮಜ್ಜಿಗೆ ಸವಿದು ಆಹಾರ ಗುಣಮಟ್ಟ ಪರಿಶೀಲಸಿದರು.