Advertisement
ಸುಬ್ರಹ್ಮಣ್ಯ ನಿಲ್ದಾಣ-ದೋಣಿಗಲ್ ನಿಲ್ದಾಣದ ನಡುವಣ 11.05 ಕಿ.ಮೀ. ಮಾರ್ಗದಲ್ಲಿ ಕೀ ಮ್ಯಾನ್ ಮತ್ತು ಗ್ಯಾಂಗ್‌ಮೆನ್‌ಗಳ ಜತೆ ಹೆಚ್ಚುವರಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿ ಸುರಕ್ಷತೆಗೆ ಆದ್ಯತೆಯನ್ನು ರೈಲ್ವೇ ಇಲಾಖೆ ನೀಡುತ್ತಿದೆ. ಓರ್ವ ಕೀ ಮ್ಯಾನ್ 6 ಕಿ.ಮೀ. ದೂರದ ಹಳಿಯ ಮೇಲೆ ನಿಗಾ ವಹಿಸುತ್ತಿದ್ದಾರೆ. ಹಿಂದೆ 100 ಮೀ.ಗೆ ಓರ್ವ ಗ್ಯಾಂಗ್‌ಮೆನ್ ಇದ್ದಲ್ಲಿ ಈಗ ಹೆಚ್ಚುವರಿ ಸೇರಿ ಮೂವರು ಸಿಬಂದಿಯನ್ನು ನೇಮಕ ಮಾಡಲಾಗಿದೆ.ಭೂಕುಸಿತ ನಡೆದ ಸ್ಥಳಗಳು ಮತ್ತೆ ಬಾಯ್ದೆರೆದುಕೊಂಡಿರುವುದು ಮತ್ತು ಕೆಲವೆಡೆ ಅಪಾಯದ ಸನ್ನಿವೇಶಗಳು ಇರುವ ಕಾರಣ ಸಂಭವನೀಯ ಅವಘಡ ತಪ್ಪಿಸಲು ಇಲಾಖೆ ಕಟ್ಟೆಚ್ಚರ ವಹಿಸಿದೆ. ಅರಣ್ಯದ ನಡುವೆ ಮಾರ್ಗ ಹಾದುಹೋಗಿರುವ ಕಾರಣ ವನ್ಯಜೀವಿಗಳು ಹಳಿ ದಾಟಿ ಓಡಾಡುತ್ತಿರುತ್ತವೆ. ಕಳೆದ ವರ್ಷ ರೈಲು ಢಿಕ್ಕಿ ಹೊಡೆದು ಮರಿಯಾನೆ ಸಹಿತ ಎರಡು ಆನೆಗಳು ಮೃತಪಟ್ಟಿದ್ದವು.
ಈ ಮಾರ್ಗದಲ್ಲಿ ಅತ್ಯಂತ ಕಡಿದಾದ 50:1 ಪರಿಣಾಮದ ಇಳಿಜಾರಿನ ಉದ್ದ 8.89 ಕಿ.ಮೀ. ಇದೆ. ಈ ಅಪಾಯಕಾರಿ ಮಾರ್ಗದಲ್ಲಿ ರೈಲು ಗರಿಷ್ಠ ತಾಸಿಗೆ 30 ಕಿ. ಮೀ. ವೇಗದಲ್ಲಿ ಮಾತ್ರ ಸಂಚರಿಸಲು ಸಾಧ್ಯ. ರೈಲು ಓಡಾಟಕ್ಕೆ ಮುನ್ನ ಮತ್ತು ಅನಂತರ ನಿಯೋಜನೆಗೊಂಡ ಕೀ ಮ್ಯಾನ್ ಮತ್ತು ಗ್ಯಾಂಗ್‌ಮೆನ್‌ಗಳು ಹಾಗೂ ಹೆಚ್ಚುವರಿ ನಿಯೋಜಿತ ತಾತ್ಕಾಲಿಕ ಗುತ್ತಿಗೆ ಸಿಬಂದಿ ಮಾಹಿತಿಯನ್ನು ರವಾನಿಸುತ್ತಿರಬೇಕು. ಸುಮಾರು 75ರಷ್ಟು ಮಂದಿಯ ಒಂದು ತಂಡ ವಿವಿಧ ವಿಭಾಗಗಳಲ್ಲಿ ರಾತ್ರಿ – ಹಗಲು ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಹಳಿ ವೀಕ್ಷಣೆ, ಸಡಿಲಗೊಂಡ ಹಳಿಯ ಕ್ಲಿಪ್ಪಿಂಗ್ ಅನ್ನು ಬಿಗಿಗೊಳಿಸುವುದು, ಆಯಿಲ್ ಹಚ್ಚುವುದು ಇತ್ಯಾದಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹೊರಗಿನ ಸಿಬಂದಿಯಲ್ಲದೆ ಸ್ಥಳಿಯ ಅನುಭವಿ ಸಿಬಂದಿಯನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ರೈಲ್ವೇ ಮೂಲಗಳಿಂದ ಮಾಹಿತಿ ಲಭಿಸಿದೆ.
Related Articles
Advertisement
ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಯಾನದ ವೇಳೆ ಯಾವುದೇ ತೊಂದರೆ, ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಲಾಗುತ್ತಿದೆ. ಕರ್ತವ್ಯ ನಿರತ ಸಿಬಂದಿ ಜತೆ ಹೆಚ್ಚುವರಿ ಸಿಬಂದಿಯನ್ನು ಕರೆಸಿಕೊಂಡು ಕಟ್ಟೆಚ್ಚರ ವಹಿಸಲಾಗಿದೆ. ಸಿಬಂದಿಗೆ ಮಳೆಗೆ ರೈನ್ ಕೋಟ್, ಸುತ್ತಿಗೆ, ಟಾರ್ಚ್ ಎಲ್ಲವನ್ನೂ ಒದಗಿಸಲಾಗಿದೆ.-ನಾಗಪ್ಪ ದಾವಣಗೆರೆ ರೈಲ್ವೇ ಸೆಕ್ಷನ್ ಎಂಜಿನಿಯರ್ ಹಳಿ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಗುರುವಾರಕ್ಕೆ ಪೂರ್ಣಗೊಂಡಿದೆ. ಸಂಚಾರಕ್ಕೆ ಮಾರ್ಗ ತೆರೆದುಕೊಂಡಿದೆ. ಗುರುವಾರ ರಾತ್ರಿಯಿಂದ ರೈಲು ಓಡಾಟ ನಡೆಸಲಿದೆ. ಆದಾಗ್ಯೂ ಈ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. – ಗೋಪಾಲಕೃಷ್ಣ ಪಿಆರ್‌ಒ ದಕ್ಷಿಣ ರೈಲು