ಮಂಗಳೂರು: ಪೊಲೀಸ್ ಎಂದು ಹೇಳಿಕೊಂಡು ಮಹಿಳೆಯನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪದಲ್ಲಿ ಈಶ್ವರನಗರ ಸರಕಾರಿಗುಡ್ಡೆಯ ಶಿವರಾಜ್ ದೇವಾಡಿಗ (28) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಈತ ಪೊಲೀಸರ ಸಮವಸ್ತ್ರ ಹೋಲುವ ಬಟ್ಟೆ ಧರಿಸಿ ಸವಿತಾ ಎಂಬವರ ಬಳಿ ತೆರಳಿ “ನಿಮ್ಮ ಮಸಾಜ್ ಪಾರ್ಲರ್ ಬಗ್ಗೆ ಹಾಗೂ ಹೆಚ್ಚು ಬಂಗಾರ ಮತ್ತು ಹಣ ಇಟ್ಟುಕೊಂಡಿರುವ ಬಗ್ಗೆ ದೂರು ಬಂದಿದೆ. ಅದನ್ನು ಮುಚ್ಚಿ ಹಾಕಲು ಹಣ ನೀಡಬೇಕು. ಇಲ್ಲದಿದ್ದರೆ ದಾಳಿ ನಡೆಸುತ್ತೇವೆ” ಎಂದು ಬೆದರಿಸಿ 38,000 ರೂ. ಪಡೆದು ವಂಚಿಸಿದ್ದ. ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಮಹಿಳೆ ಕಾವೂರು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಯು ಸುಮಾರು 8 ತಿಂಗಳುಗಳ ಹಿಂದೆ ಗೃಹರಕ್ಷಕನಾಗಿದ್ದು, ಪಾಂಡೇಶ್ವರ ಅಗ್ನಿಶಾಮಕ ದಳದೊಂದಿಗೆ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಕಿ ಪ್ಯಾಂಟ್, ಹೆಲ್ಮೆಟ್ ಧರಿಸಿದ್ದ
ಆರೋಪಿಯು ಮಹಿಳೆಯ ಮನೆಗೆ ತೆರಳುವಾಗ ಖಾಕಿ ಪ್ಯಾಂಟ್ ಹಾಗೂ ಹೆಲ್ಮೆಟ್ ಧರಿಸಿದ್ದ. ಈತ ಎರಡು ಬಾರಿ ಗೂಗಲ್ ಪೇ ಮೂಲಕ ಹಣ ಪಡೆದುಕೊಂಡಿದ್ದ. ಮಹಿಳೆಗೆ ಸಂಶಯ ಬಂದು ತನ್ನ ಸಂಬಂಧಿಕರೋರ್ವರಿಗೆ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದರು.
Related Articles
ಪೊಲೀಸರಿಗೆ ಮಾಹಿತಿ ನೀಡಿ
ಈ ರೀತಿ ಯಾರಾದರೂ ವರ್ತಿಸಿದರೆ ಸಾರ್ವಜನಿಕರು 112 ತುರ್ತು ಸಹಾಯವಾಣಿಗೆ ಕರೆ ಮಾಡಬೇಕು. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.
ಸೇವೆಯಿಂದ ಅಮಾನತು
ಆರೋಪಿಯು ಗೃಹರಕ್ಷಕದಳದ ಕರ್ತವ್ಯಕ್ಕೆ ನಿಯಮಿತವಾಗಿ ಹಾಜರಾಗುತ್ತಿರಲಿಲ್ಲ. ಹಾಗಾಗಿ ಕೆಲವು ತಿಂಗಳುಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಈತನನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಲಾಗುವುದು. ಪೊಲೀಸರಿಂದ ಅಧಿಕೃತ ಮಾಹಿತಿ ಪಡೆದು ಗೃಹರಕ್ಷಕ ಇಲಾಖೆಯ ನಿಯಮಾವಳಿಯಂತೆ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಗೃಹರಕ್ಷಕ ದಳದ ದ.ಕ ಜಿಲ್ಲಾ ಕಮಾಂಡೆಂಟ್ ಡಾ| ಮುರಲಿ ಮೋಹನ್ ಚೂಂತಾರು ತಿಳಿಸಿದ್ದಾರೆ.