Advertisement

ತ್ಯಾಜ್ಯ ಘಟಕಕ್ಕೆ ಪ್ಲಾಸ್ಟಿಕ್‌ ಬಾಟಲಿಗಳ ಆವರಣ ಗೋಡೆ!

10:04 AM Dec 03, 2019 | Sriram |

ಸುಬ್ರಹ್ಮಣ್ಯ: ದೇಶಾದ್ಯಂತ ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್‌ ನಿಷೇಧ ಚರ್ಚೆಯಲ್ಲಿದ್ದರೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ಇದರ ಪುನರ್‌ಬಳಕೆಯ ವಿನೂತನ ಪ್ರಯೋಗ ನಡೆಸುತ್ತಿದೆ. ಇಲ್ಲಿನ ತ್ಯಾಜ್ಯ ಘಟಕಕ್ಕೆ ತ್ಯಾಜ್ಯ ಪ್ಲಾಸ್ಟಿಕ್‌ ಬಾಟಲಿಗಳಿಂದಲೇ ಆವರಣ ಗೋಡೆ ನಿರ್ಮಾಣವಾಗುತ್ತಿದ್ದು, ಮಾದರಿಯಾಗಿದೆ.

Advertisement

ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿತ್ಯವೂ ಸಹಸ್ರಾರು ಮಂದಿ ಬಂದು ಹೋಗುತ್ತಾರೆ. ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲು. ಸಂಗ್ರಹವಾಗುವ ಟನ್‌ಗಟ್ಟಲೆ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳೇ ಅಧಿಕ. ಅವುಗಳನ್ನೇ ಆವರಣ ಗೋಡೆಯಾಗಿ ಮರು ಬಳಸುವ ಪ್ರಯತ್ನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.

ನಿರ್ಮಾಣ ಹೇಗೆ?
ಸಂಗ್ರಹವಾದ ಒಂದು ಲೀಟರ್‌ನ ಪ್ಲಾಸ್ಟಿಕ್‌ ಬಾಟಲಿಗಳಿಗೆ ಮರಳು, ಚರಳುಕಲ್ಲು, ಸಣ್ಣ ಜಲ್ಲಿ ತುಂಬಲಾಗುತ್ತದೆ. ಸಿಮೆಂಟ್‌ ಮಿಶ್ರಣ ಉಪಯೋಗಿಸಿ ಇಟ್ಟಿಗೆಯಂತೆಯೇ ಜೋಡಿಸಿ ಗೋಡೆ ನಿರ್ಮಿಸಲಾಗುತ್ತಿದೆ.

ಗೋಡೆ ನಿರ್ಮಾಣವಾಗುತ್ತಿರುವುದು ಇಂಜಾಡಿ ಬಳಿ ಇರುವ ಸುಬ್ರಹ್ಮಣ್ಯ ಗ್ರಾ.ಪಂ.ನ ತ್ಯಾಜ್ಯ ಘಟಕದಲ್ಲಿ.4 ಅಡಿ ಎತ್ತರ ಮತ್ತು 20 ಮೀ. ಉದ್ದದ ಗೋಡೆಗೆ 2,500 ಬಾಟಲಿಗಳು ಬಳಕೆಯಾಗುತ್ತವೆ. ಪ್ರತೀ 20 ಮೀ. ಬಳಿಕ ಒಂದರಂತೆ ಕಲ್ಲಿನ ಆಧಾರಸ್ತಂಭ ನಿರ್ಮಿಸಲಾಗುತ್ತದೆ. ಓರ್ವ ನುರಿತ ಮೇಸಿŒಯ ಸಹಾಯದಿಂದ ಘನತ್ಯಾಜ್ಯ ಘಟಕದ ಸಿಬಂದಿಯೇ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಪಂಚಾಯತ್‌ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರಯೋಗಕ್ಕೆ ಮೆಚ್ಚುಗೆ
ಗೋಡೆಯಿಂದ ಬಾಟಲಿಗಳನ್ನು ಬೇರ್ಪಡಿಸಿ ಮರುಬಳಕೆಗೂ ಅವಕಾಶವಿದೆ. ಇಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಗೋಡೆ ನಿರ್ಮಿಸಲಾಗುತ್ತಿದ್ದು, ಎಂಜಿನಿಯರ್‌ಗಳು ತಾಂತ್ರಿಕ ಮತ್ತು ಗುಣಮಟ್ಟದ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ್ದಾರೆ.

Advertisement

ಜಿಲ್ಲಾಡಳಿತ ಕೂಡ ಮೆಚ್ಚಿದೆ.
ಇಂಜಾಡಿಯ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ನಿತ್ಯ 5ರಿಂದ 10 ಟನ್‌ ಕಸ ನಿತ್ಯ ಸಂಗ್ರಹವಾಗುತ್ತದೆ. ತ್ಯಾಜ್ಯ ಬೇರ್ಪಡಿಸುವ ವೇಳೆ 500ಕ್ಕೂ ಅಧಿಕ ಬಾಟಲಿಗಳು ದೊರಕುತ್ತವೆ. ಕಸದಿಂದ ರಸ ಎಂಬ ನೀತಿಯನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಂಡಿದ್ದು, ಪ್ರಯೋಗ ಕೈ ಹಿಡಿದಿದೆ. ಹಸಿ ತ್ಯಾಜ್ಯದಿಂದ ಶುದ್ಧವಾದ ಸಾವಯವ ಕಾಂಪೋಸ್ಟ್‌ ಗೊಬ್ಬರ ತಯಾರಿ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಮೊದಲು
ಕುಕ್ಕೆ ಸುಬ್ರಹ್ಮಣ್ಯ ಗ್ರಾ.ಪಂ.ನ ಈ ಕಾರ್ಯಕ್ಕೆ ಸಾರ್ವತ್ರಿಕ ಮೆಚ್ಚುಗೆ ಲಭಿಸುತ್ತಿದೆ. ಪ್ಲಾಸ್ಟಿಕ್‌ ಬಾಟಲಿ ಬಳಸಿ ಗೋಡೆ ನಿರ್ಮಾಣ ಪ್ರಾಯಃ ರಾಜ್ಯದಲ್ಲೇ ಇದೇ ಮೊದಲು.

ಇದೊಂದು ಒಳ್ಳೆಯ ಪ್ರಯೋಗ. 6 ತಿಂಗಳ ಹಿಂದೆಯೇ ಇಂತಹ ಚಿಂತನೆ ನಮ್ಮಲ್ಲಿ ಹುಟ್ಟಿಕೊಂಡಿತ್ತು. ಈಗ ಕುಕ್ಕೆಯಲ್ಲಿ ಅನುಷ್ಠಾನ ಆಗುತ್ತಿದೆ. ಒಂದೇ ವಿಧವಾದ ಬಾಟಲಿಗಳು ಅಲ್ಲಿ ಸಾಕಷ್ಟು ಸಿಗುವುದರಿಂದ ಯೋಜನೆ ಯಶಸ್ವಿಯಾಗಲಿದೆ. ತಾಜ್ಯವನ್ನು ಸದುಪಯೋಗಪಡಿಸಿಕೊಂಡಲ್ಲಿ ಎಲ್ಲ ರೀತಿಯಿಂದಲೂ ಅನುಕೂಲ.
ಆರ್‌. ಸೆಲ್ವಮಣಿ
ದ.ಕ. ಜಿ.ಪಂ. ಸಿಇಒ

ವಿದೇಶದಲ್ಲಿ ಪ್ಲಾಸ್ಟಿಕ್‌ ಬಾಟಲಿ ಬಳಸಿ ಮನೆ ಶೌಚಾಲಯ ನಿರ್ಮಿಸುವುದನ್ನು ಯೂಟ್ಯೂಬ್‌ ವೀಡಿಯೋ ಒಂದರಲ್ಲಿ ಕಂಡಿದ್ದೆ. ಪ್ರೇರಣೆಗೊಂಡು ಇಲ್ಲಿಯೂ ಅನುಸರಿಸಲು ಮುಂದಾದೆ. ಪಂಚಾಯತ್‌ ಆಡಳಿತ ಮಂಡಳಿ, ಸಿಬಂದಿ ಸಹಕಾರ ನೀಡಿದರು. ಮೇಲಧಿಕಾರಿಗಳು ಒಪ್ಪಿಗೆ ಸೂಚಿಸಿದರು. ನಿರುಪಯುಕ್ತ ಬಾಟಲಿ ಸದ್ಬಳಕೆಯಿಂದ ಕಸ ಸಂಗ್ರಹಕ್ಕಿದ್ದ ಜಾಗದ ಕೊರತೆಯೂ ನಿವಾರಣೆಯಾಗುತ್ತಿದೆ.
– ಮುತ್ತಪ್ಪ, ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next