ಸರಕಾರಿ ಹುದ್ದೆಗಳ ನೇಮಕಾತಿ ವೇಳೆಯಲ್ಲಿ ಸದ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಮಾತ್ರ ಶೇ.2ರಷ್ಟು ಮೀಸಲಾತಿ ಲಭ್ಯವಿದ್ದು ಇದನ್ನು ಎಲ್ಲ ಇಲಾಖೆಗಳಿಗೆ ವಿಸ್ತರಣೆ ಮಾಡುವ ನಿರ್ಧಾರ ಸ್ವಾಗತಾರ್ಹವಾಗಿದೆ.
ಮಂಗಳವಾರವಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂಥದ್ದೊಂದು ಘೋಷಣೆ ಮಾಡಿದ್ದಾರೆ.
ಅಂದರೆ, ಪೊಲೀಸ್ ನೇಮಕಾತಿ ಮತ್ತು ಅರಣ್ಯ ಇಲಾಖೆ ನೇಮಕಾತಿ ವೇಳೆಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಶೇ.2ರಷ್ಟು ಮೀಸಲಾತಿ ನೀಡಿ ತುಂಬಿಕೊಳ್ಳಲಾಗುತ್ತಿತ್ತು. ಇದರಿಂದ ಬಹಳಷ್ಟು ಕ್ರೀಡಾಪಟುಗಳು ಈ ಇಲಾಖೆಗಳಿಗೆ ಸರಳವಾಗಿ ಆಯ್ಕೆಯಾಗುವ ಅವಕಾಶವಿದೆ. ಈಗ ಎಲ್ಲ ಇಲಾಖೆ ವ್ಯಾಪ್ತಿಯಲ್ಲಿಯೂ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲು ನೀಡುವುದರಿಂದ ನಿರುದ್ಯೋಗ ಸಮಸ್ಯೆಯೂ ನಿವಾರಣೆ ಯಾಗುತ್ತದೆ. ಹಾಗೆಯೇ, ಕ್ರೀಡಾ ಸಾಧಕರನ್ನು ಗುರುತಿಸಿದಂತೆಯೂ ಆಗಲಿದೆ.
ಇತ್ತೀಚೆಗಷ್ಟೇ ನಡೆದ ಕಾಮನ್ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್ ವಿಭಾಗ ದಲ್ಲಿ ಕಂಚಿನ ಪದಕ ಗೆದ್ದಿದ್ದ ಕುಂದಾಪುರ ಮೂಲದ ಗುರುರಾಜ್ ಪೂಜಾರಿ ಅವರು, ಕ್ರೀಡಾಪಟುಗಳಿಗೆ ಹೆಚ್ಚಿನ ಬೆಂಬಲ ಬೇಕು. ಹಾಗೆಯೇ ಪ್ರೋತ್ಸಾಹ ಧನವನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದರು. ಪತ್ರಿಕೆಗೆ ಸಂದರ್ಶನ ನೀಡಿದ್ದ ವೇಳೆಯಲ್ಲಿ ಅವರು ವ್ಯಕ್ತಪಡಿಸಿದ್ದ ನೋವು ಇದೇ ಆಗಿತ್ತು. ಹಾಗೆಯೇ, ಮಂಗಳವಾರ ಸಿಎಂ ಜತೆ ನಡೆದ ಸಂವಾದ ದಲ್ಲಿಯೂ ಈ ಬಗ್ಗೆ ಪ್ರಸ್ತಾವಿಸಿದ್ದರು. ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಧನ ಮತ್ತು ಕ್ರೀಡಾಪಟುಗಳಿಗೆ ಉತ್ತಮ ಬೆಂಬಲವನ್ನು ನೀಡಲಾಗುತ್ತಿದೆ. ಇಲ್ಲಿಯೂ ಇದೇ ವಾತಾವರಣ ಸೃಷ್ಟಿಯಾಗಲಿ ಎಂದು ಹೇಳಿದ್ದರು. ಈ ಸಂದರ್ಭ ಸಿಎಂ ಬೊಮ್ಮಾಯಿ ಅವರು, ಮೀಸಲಾತಿ ಕುರಿತಂತೆ ಘೋಷಣೆ ಮಾಡಿದ್ದು ಸಕಾಲಿಕವಾದ ನಿರ್ಧಾರವೇ ಆಗಿದೆ.
ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕ್ರೀಡಾ ಪಟುಗಳ ತರಬೇತಿ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ತೋರಿಸುತ್ತಿವೆ. ಈ ವರ್ಷ 75 ಕ್ರೀಡಾಪಟುಗಳನ್ನು ಗುರುತಿಸಿ, ಕಾಮನ್ವೆಲ್ತ್ ಮತ್ತು ಒಲಿಂಪಿಕ್ಸ್ ಸೇರಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೂಟಗಳಿಗೆ ತಯಾರು ಮಾಡಲಾಗುತ್ತಿದೆ. ಇದರ ಜತೆಯಲ್ಲಿಯೇ ಪದಕ ಗೆದ್ದ ಮೇಲೆ ಅಥವಾ ಕೂಟಗಳಲ್ಲಿ ಸ್ಪರ್ಧಿಸಿ ವಾಪಸ್ ಬಂದ ಮೇಲೆ ಅನಂತರದ ಜೀವನಕ್ಕೆ ಏನು ಮಾಡುವುದು ಎಂಬ ಚಿಂತೆಯೂ ಕ್ರೀಡಾಪಟುಗಳಲ್ಲಿ ಇದೆ.
ಏಕೆಂದರೆ, ತಮ್ಮ ಜೀವನದ ಬಹುಪಾಲು ಸಮಯವನ್ನು ಕ್ರೀಡಾ ತರಬೇತಿಯಲ್ಲೇ ಕಳೆಯುವ ಕ್ರೀಡಾಪಟುಗಳು ಜೀವನ ರೂಪಿಸಿಕೊಳ್ಳುವ ವಿಚಾರದಲ್ಲಿ ಹಿಂದೆ ಬೀಳುತ್ತಾರೆ. ಇಂಥವರಿಗೆ ಮೀಸಲಾತಿ ಮೂಲಕ ಸರಕಾರಿ ಉದ್ಯೋಗಗಳಲ್ಲಿ ಅವಕಾಶ ಮಾಡಿಕೊಟ್ಟರೆ, ಅವರ ಜೀವನಕ್ಕೆ ಒಂದು ದಾರಿ ರೂಪಿಸಿದಂತೆ ಆಗುತ್ತದೆ. ಇತ್ತೀಚೆಗಷ್ಟೇ ಮುಗಿದ ಕಾಮ ನ್ವೆಲ್ತ್‌ನಲ್ಲಿ ಭಾರತದಿಂದ 215 ಕ್ರೀಡಾಪಟುಗಳು ಭಾಗಿಯಾಗಿದ್ದರು. ಇದರಲ್ಲಿ ಹರಿಯಾಣದ ಶೇ.18.1 ಮತ್ತು ಪಂಜಾಬ್‌ನಿಂದ ಶೇ.12.1ರಷ್ಟು ಕ್ರೀಡಾಪಟುಗಳು ಭಾಗಿಯಾಗಿದ್ದರು.
ಕರ್ನಾಟಕದವರ ಪಾಲು ಶೇ.5.1 ಮಾತ್ರ. ಹೀಗಾಗಿ, ಆ ರಾಜ್ಯಗಳಲ್ಲಿ ಹೆಚ್ಚು ಬೆಂಬಲ ನೀಡುತ್ತಿರುವುದರಿಂದಲೇ ಅಲ್ಲಿಂದ ಹೆಚ್ಚು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾಗಿಯಾಗಿದ್ದಾರೆ ಎಂಬ ವಿಶ್ಲೇಷಣೆ ಇದೆ. ನಮ್ಮಲ್ಲಿಯೂ ಹೆಚ್ಚು ಪ್ರೋತ್ಸಾಹ ನೀಡಿದರೆ, ಹೆಚ್ಚು ಮಂದಿ ಪಾಲ್ಗೊಂಡಂತೆ ಆಗುತ್ತದೆ.