Advertisement
ಒಟ್ಟು 1 ಲಕ್ಷ ಚ.ಅಡಿ ವಿಸ್ತಾರದ ಸುಸಜ್ಜಿತ ಕಟ್ಟಡದಲ್ಲಿ ಸುಮಾರು 3.5 ಕೋ. ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಲಾದ ಈ ವಸ್ತು ಸಂಗ್ರಹಾಲಯವು ವಿಶ್ವದರ್ಜೆಯ ಗುಣಮಟ್ಟದೊಂದಿಗೆ ಕಂಗೊಳಿಸುತ್ತಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಜೂಷಾವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಕ್ಷೇತ್ರದಲ್ಲಿ ಭಕ್ತರಿಗೆ ಧಾರ್ಮಿಕತೆಯ ಜತೆಗೆ ಜ್ಞಾನವನ್ನೂ ನೀಡಬೇಕು ಎಂಬ ನಿಟ್ಟಿನಲ್ಲಿ ಈ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಡಾ| ಹೆಗ್ಗಡೆಯವರು ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿನ ಪುರಾತನ ವಸ್ತುಗಳ ಕುರಿತು ಮಾಹಿತಿ ಪಡೆದು ಅದನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಜತೆಗೆ ತುಳುನಾಡಿನಲ್ಲೂ ಪೂರ್ವಜರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಕ್ಷೇತ್ರದಲ್ಲೂ ಸಾಕಷ್ಟು ವಸ್ತುಗಳು ಪಾಳು ಬಿದ್ದುಕೊಂಡಿದ್ದವು. ಅವುಗಳೆಲ್ಲವನ್ನೂ ಒಟ್ಟು ಸೇರಿಸಿ, 1998ರಲ್ಲಿ ಅಂದಿನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶ ಇ.ಎಸ್. ವೆಂಕಟರಾಮಯ್ಯ ಅವರು ಮಂಜೂಷಾ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದ್ದರು. ಪ್ರಸ್ತುತ ಅದನ್ನು ವಿಸ್ತೃತ ಕಟ್ಟಡಕ್ಕೆ ಸ್ಥಳಾಂತರಿಸಿ, ಉದ್ಘಾಟಿಸಲಾಗುತ್ತಿದೆ. ಆಟೋಮೊಬೈಲ್ ಸೆಕ್ಷನ್ ಹಿಂದಿನಂತೆ ಪ್ರತ್ಯೇಕವಾಗಿದೆ. ಸುಮಾರು 200 ವರ್ಷಗಳ ಹಿಂದಿನ ವಸ್ತುಗಳು ಇಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಇಲ್ಲಿರುವ ಬಹುತೇಕ ಕಾರುಗಳು ದೇಣಿಗೆಯ ಮೂಲಕ ಲಭ್ಯವಾಗಿವೆ. ಹಿಂದೆ ಕ್ಷೇತ್ರಕ್ಕೆ ಆಗಮಿಸಿ ಸಿ.ವಿ. ರಾಮನ್ ಕುಟುಂಬಸ್ಥರು ಇಲ್ಲಿನ ಸಂಗ್ರಹವನ್ನು ಕಂಡು 2 ಕಾರುಗಳನ್ನು ದೇಣಿಗೆಯಾಗಿ ನೀಡಿದ್ದರು. 15 ದಿನಗಳ ಹಿಂದೆಯೂ ಕ್ಷೇತ್ರಕ್ಕೆ 1948ರ ಮಾಡೆಲ್‌ನ ಫಿಯೆಟ್ ಕಾರೊಂದು ದೇಣಿಗೆಯಾಗಿ ಬಂದಿದೆ. ಸುಮಾರು 5,000ಕ್ಕೂ ಅಧಿಕ ತಾಳೆಗ್ರಂಥಗಳು, ಕಾಗದ ದಾಖಲಾತಿಗಳ ಸಂಗ್ರಹವಿದೆ. ಜತೆಗೆ ಪಿನ್‌ಹೋಲ್ ಕೆಮರಾದಿಂದ ಹಿಡಿದು 500ಕ್ಕೂ ಅಧಿಕ ಕೆಮರಾಗಳ ಸಂಗ್ರಹವಿದೆ ಎಂದು ಡಾ| ಹೆಗ್ಗಡೆ ಅವರು ವಿವರಿಸಿದ್ದಾರೆ.
Related Articles
ಅ. 24ರಂದು ಸಿಎಂ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರೂ ವಸ್ತುಗಳ ಸ್ಥಳಾಂತರ ಕಾರ್ಯನಡೆಯಬೇಕಿರುವುದರಿಂದ ನ. 15ರ ಬಳಿಕ ಜನತೆಗೆ ವೀಕ್ಷಣೆಗೆ ಲಭ್ಯವಾಗಲಿದೆ. ಮುಂದಿನ ಬದಲಾವಣೆಗಳನ್ನು ಗಮನಿಸಿಕೊಂಡು ಇತರ ವಸ್ತುಸಂಗ್ರಹಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಂಗ್ರಹಗಳ ಬದಲಾವಣೆಗೂ ಚಿಂತನೆ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
Advertisement