ಸಕಲೇಶಪುರ: ಹಾಸನ- ಯಶವಂತಪುರ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ ಮಲೆ ನಾಡಿಗರಿಂದ ಬೇಡಿಕೆ ಕೇಳಿ ಬರುತ್ತಿದೆ.
ಹಾಸನದಿಂದ ಬೆಳಿಗ್ಗೆ 7 ಗಂಟೆಗೆ ಹೊರಟು 10.10ಕ್ಕೆ ಬೆಂಗಳೂರಿನ ಯಶವಂತಪುರಕ್ಕೆ ಬರುವ ಹಾಗೂ ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಡುವ ಇದೇ ರೈಲು ರಾತ್ರಿ 9.10ಕ್ಕೆ ಹಾಸನ ನಿಲ್ದಾಣಕ್ಕೆ ಬರುತ್ತದೆ.ಈ ಹಿನ್ನೆಲೆ ಇಂಟರ್ ಸಿಟಿ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸ ಬೇಕೆಂಬ ಬೇಡಿಕೆ ವ್ಯಾಪಕವಾಗಿ ಮಲೆನಾಡಿಗರಿಂದ ಕೇಳಿ ಬರುತ್ತಿದೆ. ಬೆಳಗ್ಗೆ 6 ಗಂಟೆಗೆ ಸಕಲೇಶಪುರ ರೈಲು ನಿಲ್ದಾಣದಿಂದ ಈ ರೈಲು ಹೊರಡುವಂತೆ ಮಾಡಿದರೆ ಬೆಂಗಳೂರಿಗೆ 10.10ಕ್ಕೆ ಹೋಗಿ ಕೆಲಸಗಳನ್ನು ಮುಗಿಸಿಕೊಂಡು ಇದೇ ರೈಲಿನಲ್ಲಿ ಸಂಜೆ 6 ಗಂಟೆಗೆ ಹೊರಟು ರಾತ್ರಿ 10.10ರವೇಳೆಗೆ ಸಕಲೇಶಪುರಕ್ಕೆ ಹಿಂತಿರುಗಿ ಬರಬಹುದಾಗಿದೆ. ಇದರಿಂದ ಮಲೆನಾಡಿನ ಜನಸಾಮಾನ್ಯರಿಗೆ ಹಾಗೂ ವರ್ತಕರಿಗೆ ಬಹಳ ಅನುಕೂಲವಾಗುತ್ತದೆ.
ರೈಲು ಸೇವೆಯಿಂದ ಅನುಕೂಲಕರ: ಕಾಫಿ, ಮೆಣಸು, ಏಲಕ್ಕಿ, ಜೇನುತುಪ್ಪದಂತಹ ಮಲೆನಾಡಿನ ಉತ್ಪನ್ನಗಳನ್ನು ಸಹ ಬೆಂಗಳೂರಿಗೆ ಕೊಂಡೊಯ್ದು ಮಾರಾಟ ಮಾಡಲು ಅನುಕೂಲ ವಾಗುತ್ತದೆ. ಪ್ರಸ್ತುತ ಇಂಟರ್ ಸಿಟಿ ರೈಲು ಹಾಸನದಲ್ಲಿ ನಿಲುಗಡೆ ಯಾಗುವುದರಿಂದ ಈ ರೈಲಿನಲ್ಲಿ ಬೆಳೆಗ್ಗೆ ಬೆಂಗಳೂರಿಗೆ ಹೋಗಬೇಕಾದವರು ಬೆಳಗ್ಗೆ 4.75ಕ್ಕೆ ಸಕಲೇಶಪು ರದಿಂದ ಹಾಸನಕ್ಕೆ ಬಸ್‌ನಲ್ಲಿ ದುಬಾರಿ ದರ ತೆತ್ತು ಮತ್ತೆ ಆಟೋ ಮೂಲಕ ಅಧಿಕ ಹಣ ಕೊಟ್ಟು ರೈಲು ನಿಲ್ದಾಣಕ್ಕೆ ಹೋಗಬೇಕಾಗಿದೆ. ಇನ್ನು ಬೆಂಗಳೂರು ಕಡೆಯಿಂದ ಸಕಲೇಶಪುರಕ್ಕೆ ಬರುವವರು ರಾತ್ರಿ ವೇಳೆ ಹಾಸನ ರೈಲು ನಿಲ್ದಾಣಕ್ಕೆ ಹೊಸ ಬಸ್ ನಿಲ್ದಾಣಕ್ಕೆ ಬಂದು ಬಸ್ ಮೂಲಕ ಸಕಲೇಶಪುರಕ್ಕೆ ಬರಬೇಕಾಗಿರುತ್ತದೆ. ಈ ಹಿನ್ನೆಲೆ ಕೂಡಲೆ ಈ ರೈಲನ್ನು ಹಾಸನದಿಂದ ಸಕಲೇಶಪುರದವರೆಗೆ ವಿಸ್ತರಿಸಿದರೇ ಮಲೆನಾಡಿಗರಿಗೆ ಬಹಳ ಅನುಕೂಲವಾಗುತ್ತದೆ.
ಹಾಸನ ಯಶವಂತಪುರ ಇಂಟರ್ ಸಿಟಿ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ ಆಗ್ರಹಿಸಿ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸುತ್ತೇನೆ.
– ಸಿಮೆಂಟ್ ಮಂಜು, ಸಕಲೇಶಪುರ ಶಾಸಕ
ಹಾಸನ ಯಶವಂತಪುರ ಇಂಟರ್ ಸಿಟಿ ರೈಲನ್ನು ಸಕಲೇಶಪುರ ದವರೆಗೆ ವಿಸ್ತರಿಸುವಂತೆ ಹಲವು ಬಾರಿ ಉನ್ನತ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ .
-ನಾರಾಯಣ ಆಳ್ವ, ಅಧ್ಯಕ್ಷರು, ರೈಲು,ಪ್ರಯಾಣಿಕರ ಹಿತ ರಕ್ಷಣಾ ವೇದಿಕೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆ
ಬದುಕಿಗಾಗಿ ನಾನು ಬೆಂಗಳೂರಿನಲ್ಲಿ ವಾಸವಿದ್ದರು ಸಹ ನಿರಂತರವಾಗಿ ಊರ ಕಡೆ ಹೋಗುತ್ತೇನೆ. ಯಶವಂತಪುರ ಹಾಸನ ಇಂಟರ್ ಸಿಟಿ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಿದರೆ ನಮ್ಮಂತಹವರಿಗೆ ಬಹಳ ಅನುಕೂಲವಾಗುತ್ತದೆ.
– ಚಿದನ್, ಬೆಂಗಳೂರು ವರ್ತಕ
-ಸುಧೀರ್ ಎಸ್.ಎಲ್