ಬೀದರ: ಜಿಲ್ಲೆಯಲ್ಲಿ ಕೋವಿಡ್ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ಕಲಂ 144ರ ನಿಷೇಧಾಜ್ಞೆ ಕಂಟೇನ್ಮೆಂಟ್ ವಲಯ ಹೊರತುಪಡಿಸಿ ಉಳಿದ ಪ್ರದೇಶಗಳು, ಕೆಲವು ಷರತ್ತುಗಳಿಗೆ ಒಳಪಟ್ಟು ಮೇ 31ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಮೇ 31ರ ಮಧ್ಯರಾತ್ರಿ 12ರ ವರೆಗೆ ಜಾರಿಯಲ್ಲಿರಲಿದ್ದು, ಕಂಟೇನ್ಮೆಂಟ್ ಝೋನ್ ವಲಯಕ್ಕೆ ಈ ಆದೇಶವು ಅನ್ವಯಿಸುವುದಿಲ್ಲ. ನಿಷೇಧಾಜ್ಞೆ ನಿಯಮ ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವಲಸೆ ಕಾರ್ಮಿಕರಿಗೆ ಪಡಿತರ: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ನೀಡಿರುವ ಹಂಚಿಕೆಯಂತೆ ಪ್ರತಿ ವಲಸಿಗ ಫಲಾನುಭವಿಗೆ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ಸದಸ್ಯರು 5 ಕೆ.ಜಿ ಅಕ್ಕಿ ಪಡೆಯಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಮೇ ತಿಂಗಳಿಗಾಗಿ ಮೇ 26ರಿಂದ 31ರ ವರೆಗೆ ಪ್ರತಿ ವಲಸೆ ಕಾರ್ಮಿಕ ಸದಸ್ಯರಿಗೆ 5 ಕೆ.ಜಿ ಅಕ್ಕಿ ನೀಡಲಾಗುವುದು. ಜೂನ್ ತಿಂಗಳಲ್ಲಿ 1ರಿಂದ 10ರ ವರೆಗೆ ಪ್ರತಿ ವಲಸೆ ಕಾರ್ಮಿಕ ಸದಸ್ಯರಿಗೆ 5 ಕೆ.ಜಿ ಅಕ್ಕಿ ನೀಡಲಾಗುವುದು. ವಲಸೆ ಕಾರ್ಮಿಕರು ಆಧಾರ್ ಜೊತೆಗೆ ನಮೂದಾದ ಮೊಬೈಲ್ ಸಂಖ್ಯೆಗೆ ಬಂದ ಓಟಿಪಿ ಅಥವಾ ಮೊಬೈಲ್ ಸಂಖ್ಯೆ ಹೇಳಿ ನಂತರ ಮೊಬೈಲ್‌ಗೆ ಬಂದ ಓಟಿಪಿ ನೀಡುವ ಅಥವಾ ಆಧಾರ್ ದೃಢೀಕೃತ ಬಯೋಮೆಟ್ರಿಕ್ ಮೂಲಕ ಪಡಿತರ ಪಡೆಯಬಹುದು.
ವಲಸಿಗ ಫಲಾನುಭವಿಗಳು ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರಬಾರದು. ಸ್ವಂತ ಮನೆ ಹೊಂದಿರತಕ್ಕದ್ದಲ್ಲ ಮತ್ತು ಆದಾಯ ತೆರಿಗೆ ಪಾವತಿಸುತ್ತಿರಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.