Advertisement

ನಿಮ್ಮ ಮನೆಗೆ ನಮ್ಮ ಪುಸ್ತಕ ಅಭಿಯಾನ ವಿಸ್ತರಣೆ

12:03 PM Sep 25, 2018 | Team Udayavani |

ಬೆಂಗಳೂರು: ಪುಸ್ತಕ ಪ್ರೀತಿ ಬೆಳೆಸುವ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಅಭಿಯಾನವನ್ನು ರಾಜ್ಯಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ತಿಳಿಸಿದ್ದಾರೆ. 

Advertisement

ಕನ್ನಡ ಪುಸ್ತಕ ಪ್ರಾಧಿಕಾರವು ನಗರದ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಅಭಿಯಾನದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು, ತಂತ್ರಜ್ಞಾನದ ಭರಾಟೆಯಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೊರಗು ಇದೆ. ಇಂತಹ ಸಂದರ್ಭದಲ್ಲಿ ಹೊಸ ಭರವಸೆ ಮೂಡಿಸಬಹುದು ಎಂಬ ವಿಶ್ವಾಸದೊಂದಿಗೆ ಈ ಅಭಿಯಾನವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು. 

ಪ್ರೀತಿ ಅಲ್ಲ – ಹುಚ್ಚು: ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಮಾತನಾಡಿ, “ನನಗೆ ಪುಸ್ತಕ ಪ್ರೀತಿಗಿಂತ ಹೆಚ್ಚಾಗಿ ಪುಸ್ತಕದ ಹುಚ್ಚು ಹಿಡಿದಿತ್ತು. ಇದರಿಂದಾಗಿಯೇ ನಾನು ಅಲ್ಪಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಯಿತು’ ಎಂದರು. 

ಮೈಸೂರಿನಲ್ಲಿದ್ದಾಗ, ಪ್ರತಿ ಭಾನುವಾರ ಬೆಳಗ್ಗೆ ಎದ್ದ ತಕ್ಷಣ ನಾನು ಮಾಡುತ್ತಿದ್ದ ಮೊದಲ ಕೆಲಸವೆಂದರೆ ಅಲ್ಲಿನ ಅರಮನೆ ಹಿಂಭಾಗದಲ್ಲಿದ್ದ ಪುಸ್ತಕ ಮಳಿಗೆಗೆ ಭೇಟಿ ನೀಡಿ, ಹಳೆಯ ಪುಸ್ತಕಗಳನ್ನು ಹುಡುಕಿ ಖರೀದಿಸುವುದಾಗಿತ್ತು. ಹೀಗೆ ಹಳೆಯ ಪುಸ್ತಕಗಳನ್ನು ಹುಡುಕುವಾಗ ರವೀಂದ್ರನಾಥ ಟ್ಯಾಗೋರ್‌ ಅವರ ಹಸ್ತಾಕ್ಷರವಿದ್ದ ಪುಸ್ತಕ ಸಿಕ್ಕಿತು. ಅದು ನನಗೆ ಅಪಾರ ಖುಷಿ ಕೊಟ್ಟಿತು. ನಂತರ ಅದು ನನಗೆ ಪ್ರೇರಣೆಯಾಯಿತು ಎಂದರು.

ಲೇಖಕಿ ಪ್ರೇಮಾ ಭಟ್‌ ಮಾತನಾಡಿ, ಐಟಿ-ಬಿಟಿ ಉದ್ಯೋಗಿಗಳು ನಿತ್ಯ ಒತ್ತಡದಲ್ಲಿ ಇರುತ್ತಾರೆ. ಅಂತಹವರು ಪುಸ್ತಕ ಓದುವುದನ್ನು ರೂಢಿಸಿಕೊಂಡರೆ, ಆ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ಹಣ ಖರ್ಚು ಮಾಡಿ, ಪುಸ್ತಕಗಳನ್ನು ಪ್ರಕಟಿಸಿದರೂ, ಅದಕ್ಕೆ ಸರಿಯಾದ ಮಾರುಕಟ್ಟೆ ಸೌಲಭ್ಯ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದರು.

Advertisement

ಜ್ಞಾನದ ಜತೆಗೆ ಬದಕಿನ ಆಸರೆ: ಲೇಖಕಿ ಡಾ.ಎಲ್‌.ಜಿ.ಮೀರಾ ಮಾತನಾಡಿ, ಪುಸ್ತಕಗಳು ಜ್ಞಾನ ಮಾತ್ರವಲ್ಲ; ಬದುಕಿಗೆ ಆಸರೆಯೂ ಆಗುತ್ತವೆ. ಹೊಸ ಸಂಬಂಧಗಳನ್ನು ಕಟ್ಟಿಕೊಡುತ್ತವೆ. ಅದು ರಕ್ತ ಸಂಬಂಧ ಆಗಿಲ್ಲದೇ ಇರಬಹುದು, ಆದರೆ ಆತ್ಮದ ಸಂಬಂಧ ಬೆಳೆಸುತ್ತದೆ. ಅದೇ ರೀತಿ, ನಾವು ಕೂಡ ಓದುವ ಮೂಲಕ ಪುಸ್ತಕಗಳ ಸಂಸ್ಕೃತಿಗೆ ಹೊಸ ಜೀವ ಕೊಡೋಣ ಎಂದರು.  

ಲೇಖಕಿ ಮಂಗಳಾ ಪ್ರಿಯದರ್ಶಿನಿ ಮಾತನಾಡಿ, ಪುಸ್ತಕ ಪ್ರೀತಿ ಎಂಬುದು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಆದರೆ, ಅದಕ್ಕೆ ತಕ್ಕಂತೆ ನಮ್ಮ ಸುತ್ತಮುತ್ತ ಓದುವ ವಾತಾವರಣವನ್ನು ಸೃಷ್ಟಿಸಬೇಕು. ಪ್ರೇಮ ಎಂಬುದು ಹುಚ್ಚಾದರೆ ಪುಸ್ತಕ ಓದುವ ಹವ್ಯಾಸ ಹೆಚ್ಚಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next