ಬೆಂಗಳೂರು: ಲಾಕ್‌ಡೌನ್ ಪರಿಣಾಮ ವಾಗಿ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾಕರ (ತೃತೀಯ ಲಿಂಗಿಗಳ) ಸಮುದಾಯದ ಎಲ್ಲ ಅರ್ಹ ಸದಸ್ಯರಿಗೂ ಮೈತ್ರಿ ಯೋಜನೆಯ ಸೌಲಭ್ಯ ವಿಸ್ತರಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್
ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸರಕಾರದ ಪರ ವಕೀಲರು ವಾದ ಮಂಡಿಸಿ, ಸದ್ಯ ಮೈತ್ರಿ ಯೋಜನೆಯಡಿ ರಾಜ್ಯಾದ್ಯಂತ 1,657 ತೃತೀಯ ಲಿಂಗಿಗಳು ತಲಾ ಮಾಸಿಕ 600 ರೂ. ಪಿಂಚಣಿ ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಕೋವಿಡ್-19 ಹಿನ್ನೆಲೆಯಲ್ಲಿ ಎರಡು ತಿಂಗಳ ಪಿಂಚಣಿಯನ್ನು ಏಕಕಾಲಕ್ಕೆ ನೀಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಮೈತ್ರಿ ಯೋಜನೆಯಡಿ ಪಿಂಚಣಿಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸರಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರ ತತ್‌ಕ್ಷಣ ವಿಲೇವಾರಿ ಮಾಡಬೇಕು. ಅಲ್ಲದೆ ತೃತೀಯ ಲಿಂಗಿಗಳ ಸಮುದಾಯದ ಎಲ್ಲ ಅರ್ಹ ಸದಸ್ಯರಿಗೂ ಮೈತ್ರಿ ಯೋಜನೆ ವಿಸ್ತರಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು.