ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ದಾಳಿಗೊಳಗಾಗಿದ್ದ ಮೂವರು ಸರ್ಕಾರಿ ಅಧಿಕಾರಿಗಳು ಲಕ್ಷಾಂತರ ರೂ. ನಗದು, ಚಿನ್ನಾಭರಣ, ಆಸ್ತಿ ಹೊಂದಿರುವುದು ಬಯಲಾಗಿದೆ.
ಎಸಿಬಿ ದಾಳಿಗೊಳಗಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾ ಯಕ ಅಭಿಯಂತರ ಮಹದೇವಪ್ಪ, ಧಾರವಾಡದ ಕರ್ನಾಟಕ ವಿವಿ ಮಾಜಿ ಕುಲಸಚಿವ ಪ್ರೊ.ಕಲ್ಲಪ್ಪ ಎಸ್‌ಹೊಸ ಮಾಯಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ( ಜೋಯಿಡಾ ಉಪವಿಭಾಗ) ಉದಯ್ ಡಿ ಚಬ್ಬಿ ಎಕರೆಗಟ್ಟಲೆ ಜಮೀನು, ಬ್ಯಾಂಕ್‌ಗಳಲ್ಲಿ ಅಪಾರ ಪ್ರಮಾಣದ ಹಣ, ವಿದೇಶಿ ಕರೆನ್ಸಿ ಹೊಂದಿರುವುದು ಪತ್ತೆಯಾಗಿದೆ.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹದೇವಪ್ಪ ಹಾಗೂ ಅವರ ಕುಟುಂಬಸ್ಥರ ಹೆಸರಿನಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ 1 ಮನೆ, 1 ನಿವೇಶನ, ಹೆಸರಘಟ್ಟ ಹೋಬಳಿಯಲ್ಲಿ 1 ನಿವೇಶನ, ಚಿಕ್ಕಮಗಳೂರಿನಲ್ಲಿ 15 ಎಕರೆ ಹಾಗೂ ಚಿತ್ರದುರ್ಗದಲ್ಲಿ 3 ಎಕರೆ ಕೃಷಿ ಜಮೀನು, 112 ಗ್ರಾಂ ಚಿನ್ನ, 4.4 ಕೆ. ಜಿ 148 ಗ್ರಾಂ ಬೆಳ್ಳಿ 1 ಕಾರು, 1 ಬೈಕ್, 3.11 ಲಕ್ಷ ರೂ.ನಗದು ಬ್ಯಾಂಕ್ ಖಾತೆಯಲ್ಲಿ 6.49 ಲಕ್ಷ ರೂ. 12 ಲಕ್ಷ ಠೇವಣಿಗಳು, 2150 ಯು.ಎಸ್ ಡಾಲರ್‌ಗಳು, 4800 ಹಾಂಗ್‌ಕಾಂಗ್ ಡಾಲರ್ ಹಾಗೂ 5 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಕಂಡುಬಂದಿವೆ. ಪ್ರೊಫೆಸರ್ ಕಲ್ಲಪ್ಪ ಎಸ್ ಹೊಸಮಾಯಿ ಕುಟುಂಬಸ್ಥರ ಹೆಸರಿನಲ್ಲಿ ಧಾರವಾಡದಲ್ಲಿ 1 ಮನೆ, 1 ನಿವೇಶನ, ವಿವಿಧೆಡೆ 40 ಎಕರೆ ಕೃಷಿ ಜಮೀನು, 200 ಗ್ರಾಂ ಚಿನ್ನ, 1 ಕೆಜಿ 148 ಗ್ರಾಂ ಬೆಳ್ಳಿ, 2 ಕಾರು, ಎರಡು ಬೈಕ್, 1 ಟ್ರ್ಯಾಕ್ಟರ್, ವಿವಿಧ ಬ್ಯಾಂಕ್‌ಗಳಲ್ಲಿ 15 ಲಕ್ಷ ಠೇವಣಿ ಹಾಗೂ ಪಾಲಿಸಿಗಳು, 17 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಅದೇ ರೀತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉದಯ ಡಿ ಚಬ್ಬಿ, ಅವರ ಕುಟುಂಬಸ್ಥರ ಹೆಸರಿನಲ್ಲಿ 3 ಮನೆ, 300 ಗ್ರಾಂ ಚಿನ್ನ, ಒಂದು ಕಾರು, ಒಂದು ಬೈಕ್, 11 ಲಕ್ಷ ರೂ.ನಗದು, ಬ್ಯಾಂಕ್‌ಗಳಲ್ಲಿ 31.43 ಲಕ್ಷ ರೂ. ಠೇವಣಿ, 2 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂವರು ಅಧಿಕಾರಿಗಳು ಆದಾಯ ಮೀರಿ ಆಸ್ತಿ ಗಳಿಸಿರುವ ಬಗ್ಗೆ ಬಂದ ದೂರು ಆಧರಿಸಿ ದಾಳಿ ನಡೆಸಲಾಗಿದ್ದು, ಅವರ ನಿವಾಸಗಳು, ಕಚೇರಿಗಳಲ್ಲಿ ದೊರೆತ ದಾಖಲೆಗಳು ಹಾಗೂ ವಸ್ತುಗಳನ್ನು ಪರಿಶೀಲಿಸಲಾಗುತ್ತಿದ್ದು ತನಿಖೆ ಮುಂದುವರಿಸಿರುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.