ರಾಯಚೂರು: ಹೈದರಾಬಾದ್‌ನಿಂದ ನಗರಕ್ಕೆ ಬರುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಸೊಧಿ#àಟಕ ಪತ್ತೆಯಾಗಿದೆ. ಎರಡು ಬ್ಯಾಗ್‌ಗಳಲ್ಲಿ ಇದ್ದ ಸ್ಫೋಟಕವನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿದೆ. ಕಾರ್ಡ್‌ಬೋರ್ಡ್ ಬಾಕ್ಸ್‌ಗಳಲ್ಲಿ ಸ್ಫೋಟಕಗಳನ್ನು ಅಳವಡಿಸಲಾಗಿತ್ತು. ಟೈಮಿಂಗ್ ಫಿಕ್ಸ್ ಮಾಡಿರಲಿಲ್ಲ. ಸ್ಫೋಟಕಕ್ಕೆ ಬಳಸಿದ ವಸ್ತುಗಳ ಪತ್ತೆಗಾಗಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 3.50ಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಪೊಲೀಸ್ ಕಂಟ್ರೋಲ್ ರೂಮ್ ಹಾಗೂ ಶಕ್ತಿನಗರ ಠಾಣೆ ಎಎಸ್‌ಐಗೆ ವ್ಯಕ್ತಿ ಕರೆ ಮಾಡಿದ್ದ. ಆತ ಹೈದ್ರಾಬಾದ್‌ನಿಂದ ರಾಯಚೂರಿಗೆ ಹೊರಟಿರುವ ಕೆಎ 36, ಎಫ್1256 ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಎರಡು ಬ್ಯಾಗ್‌ಗಳಲ್ಲಿ 2000 ಮುಖಬೆಲೆಯ ನೋಟು ಸಾಗಿಸಲಾಗುತ್ತಿದೆ ಎಂದು ತಿಳಿಸಿದ್ದ. ಶಕ್ತಿನಗರ ಚೆಕ್‌ಪೋಸ್ಟ್‌ಗೆ ಈ ಬಸ್ ಸಂಜೆ 6ರ ಸುಮಾರಿಗೆ ಬಂದಿದೆ. ಅದನ್ನು ತಪಾಸಣೆಗೊಳಪಡಿಸಿದಾಗ ವಾರಸುದಾರರಿಲ್ಲದ ಕಪ್ಪುಬಣ್ಣದ ಎರಡು ಶೋಲ್ಡರ್ ಬ್ಯಾಗ್‌ಗಳು ಸಿಕ್ಕಿವೆ. ಅವುಗಳಲ್ಲಿ ಎರಡು ರಟ್ಟಿನ ಬಾಕ್ಸ್‌ಗಳಿದ್ದು, ಅವುಗಳಿಗೆ ವೈರ್ ಮತ್ತು ಟೈಮರ್ ಜೋಡಿಸಿದ್ದು ಕಂಡು ಬಂದಿದೆ. ಆದರೆ ಟೈಮರ್‌ನಲ್ಲಿ ಟೈಮಿಂಗ್ ಫಿಕ್ಸ್ ಮಾಡಿರಲಿಲ್ಲ. ಬಾಕ್ಸ್‌ನಲ್ಲಿ 300ಗ್ರಾಂ ಸೆಮಿ ಲಿಕ್ವಿಡ್ (ಪೇಸ್ಟ್) ಇತ್ತು. ಇದನ್ನು ತಯಾರಿಸಿದ್ದು ಯಾವ ವಸ್ತುವಿನಿಂದ ಎಂಬುದು ಗೊತ್ತಾಗಿಲ್ಲ. ಅವುಗಳನ್ನು ನಿರ್ಜನ ಪ್ರದೇಶದಲ್ಲಿ ಪರಿಶೀಲಿಸಿದಾಗ ಸ್ಫೋಟಕ ವಸ್ತುಗಳಿರುವುದು ಖಚಿತಗೊಂಡಿದೆ.
ಸ್ಫೋಟಕಗಳ ನಿಷ್ಕ್ರಿಯ:ಕಲಬುರಗಿಯಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯದಳ ಸೊಧಿ#àಟಕಗಳನ್ನು ನಿಷ್ಕ್ರಿಯಗೊಳಿಸಿತು. ಇದಕ್ಕೆ ಬಳಸಿದ ಸಾಮಗ್ರಿಗಳು ಯಾವ್ಯಾವು? ಎಂಬ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಹೆಚ್ಚಿನ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ್‌ಸಿಂಗ್ ರಾಠೊಡ್ ತಿಳಿಸಿದ್ದಾರೆ.
ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ 3ವಿಶೇಷ ತಂಡಗಳನ್ನು ರಚಿಸಲಾಗಿದೆ. ಬಸ್‌ನಲ್ಲಿ ಹೈದ್ರಾಬಾದ್‌ನಿಂದ 53 ಪ್ರಯಾಣಿಕರು ಬಂದಿದ್ದು, ಮೆಹಬೂಬ್ ನಗರದಲ್ಲಿ ಇಬ್ಬರು ಇಳಿದಿದ್ದಾರೆ. ಅವರ ಮುಖಚರ್ಯೆ ನೆನಪಾಗುತ್ತಿಲ್ಲ ಎಂದು ಬಸ್ ನಿರ್ವಾಹಕ ತಿಳಿಸಿದ್ದಾರೆ. ಪೊಲೀಸರಿಗೆ ಕರೆ ಮಾಡಿದ ಸಿಮ್ ಕರ್ನಾಟಕದ್ದಾಗಿದ್ದು, ವಿಳಾಸ ಪತ್ತೆಯಾಗಿಲ್ಲ.ಸ್ಫೋಟಕ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲೆಯಲ್ಲಿ ಇಂಥ ಪ್ರಕರಣ ಇದೇ ಮೊದಲು. ಇದರ ಹಿಂದೆ ನಕ್ಸಲ್ ಕೈವಾಡ ಇರುವುದನ್ನು ಖಚಿತವಾಗಿ ಹೇಳಲಾಗದು. ಈ ಬಗ್ಗೆ ಹೈದ್ರಾಬಾದ್ ಪೊಲೀಸರೊಂದಿಗೆ ಚರ್ಚಿಸಿ ತನಿಖೆ ಕೈಗೊಳ್ಳಲಾಗುವುದು.
-ಡಾ| ಚೇತನ್‌ಸಿಂಗ್ ರಾಠೊಡ್, ಎಸ್‌ಪಿ ರಾಯಚೂರು