ಬೆಂಗಳೂರು: ವೈಯಾಲಿಕಾವಲ್‌ನಲ್ಲಿರುವ ಶಾಸಕ ಮುನಿರತ್ನ ಅವರ ನಿವಾಸದ ಮುಂಭಾಗ ಭಾನುವಾರ ಬೆಳಿಗ್ಗೆ ಅವಧಿ ಮುಗಿದ ರಾಸಾಯನಿಕ ಸ್ಫೋಟಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಾಸಕ ಮುನಿರತ್ನ ಅವರ ಕಚೇರಿ ಹಾಗೂ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ (45) ಮೃತರು.
ಭಾನುವಾರ ಬೆಳಗ್ಗೆ 9.15ರ ಸುಮಾರಿಗೆ ಎಂದಿನಂತೆ ಕೆಲಸಕ್ಕೆ ಆಗಮಿಸಿದ್ದ ವೆಂಕಟೇಶ್ ಶಾಸಕರ ಕಚೇರಿ ಪಕ್ಕದಲ್ಲಿರುವ ಗೋಡಾನ್‌ನ ಮುಂಭಾಗದ ರಸ್ತೆಯಲ್ಲಿ ರಾಸಾಯನಿಕದ ಕ್ಯಾನ್ ಮುಚ್ಚಳ ತೆರೆಯುವಾಗ ಸ್ಫೋಟ ಸಂಭವಿಸಿತು. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸ್ಫೋಟದ ಸದ್ದು ಕೇಳುತ್ತಲೇ ಆತಂಕಗೊಂಡು ಹೊರಗಡೆ ಬಂದ ಸೆಕ್ಯೂರಿಟಿ ಗಾರ್ಡ್ ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಫೋಟಗೊಂಡ ಕ್ಯಾನ್‌ನಲ್ಲಿ ಈಥೇನ್, ಮಿಥೇನ್ ಹಾಗೂ ಇನ್ನಿತರ ರಾಸಾಯನಿಕಗಳ ಮಿಶ್ರಣವಿತ್ತು.
ಎರಡು ವರ್ಷಗಳ ಹಿಂದೆ ಜಿಂಕೆ ಪಾರ್ಕ್‌ನಲ್ಲಿ ಪ್ರತಿಮೆಗಳು ಹಾಗೂ ಪ್ರಾಣಿಗಳ ಮೂರ್ತಿಗಳನ್ನು ನಿರ್ಮಾಣ ಮಾಡಲು ಆಂಧ್ರಪ್ರದೇಶದಿಂದ 30 ಕ್ಯಾನ್‌ಗಳನ್ನು ತರಿಸಲಾಗಿದ್ದು, 29 ಕ್ಯಾನ್‌ಗಳನ್ನು ಬಳಸಲಾಗಿತ್ತು. ಒಂದು ಕ್ಯಾನ್ ಉಳಿದುಕೊಂಡಿದೆ. ಅವಧಿ ಪೂರ್ಣಗೊಂಡ ಬಳಿಕ ಅದನ್ನು ನಾಶಗೊಳಿಸಬೇಕಿತ್ತು. ಹೀಗಾಗಿ ಅದು ಗೋಡಾನ್‌ನಲ್ಲಿ ಉಳಿದುಕೊಂಡಿತ್ತು.
ಅದೇ ಕ್ಯಾನ್‌ನ್ನು ವೆಂಕಟೇಶ್ ಮೈದಾನಕ್ಕೆ ಎಸೆಯಲು ತೆಗೆದುಕೊಂಡು ಹೋಗಲು ಮಚ್ಚಳ ತೆಗೆದಾಗ ರಾಸಾಯನಿಕ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
ಸ್ಫೋಟದ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಎಫ್ಎಸ್‌ಎಲ್ ತಜ್ಞರಿಂದ ವರದಿ ಪಡೆಯಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಇರಿಸಿದ್ದ ವಸ್ತು ಸ್ಫೋಟಗೊಂಡಿದೆ.
-ಎಂ.ಬಿ.ಪಾಟೀಲ, ಗೃಹ ಸಚಿವ.