Advertisement

ನಿಲ್ದಾಣದ ಭದ್ರತಾ ವೈಫ‌ಲ್ಯಗಳ “ಸ್ಫೋಟ’!

01:18 AM Jun 01, 2019 | Team Udayavani |

ಬೆಂಗಳೂರು: ಕಾರ್ಯನಿರ್ವಹಿಸದ ಸಿಸಿ ಕ್ಯಾಮೆರಾಗಳು, ನಿರ್ವಹಣೆ ಇಲ್ಲದ ಮೆಟಲ್‌ ಡಿಟೆಕ್ಟರ್‌, ಅನಧಿಕೃತ ಪ್ರವೇಶ ದ್ವಾರಗಳು, ಇರುವುದೊಂದೇ ಬ್ಯಾಗ್‌ ಸ್ಕ್ಯಾನರ್‌…. ಇದು ನಿತ್ಯ ಲಕ್ಷಾಂತರ ಪ್ರಯಾಣಿಕರು ಓಡಾಡುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಭದ್ರತಾ ಸ್ಥಿತಿಗತಿ.

Advertisement

ಶುಕ್ರವಾರ ಬೆಳಗ್ಗೆ ನಿಲ್ದಾಣದಲ್ಲಿ ಪತ್ತೆಯಾದ ಸಂಶಯಾಸ್ಪದ ಗ್ರೆನೇಡ್‌ ಮಾದರಿ ವಸ್ತು ನಿಲ್ದಾಣದ ಭದ್ರತಾ ಲೋಪವನ್ನು ಬಹಿರಂಗ ಪಡಿಸಿದೆ. ಶ್ರೀಲಂಕಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ನಗರ ಪೊಲೀಸ್‌ ಆಯುಕ್ತರು ಹೈಅಲರ್ಟ್‌ ಘೋಷಿಸಿದ್ದರೂ, ಸಿಟಿ ರೈಲು ನಿಲ್ದಾಣದಲ್ಲಿ ಮಾತ್ರ ಯಾವುದೇ ಭದ್ರತಾ ಕ್ರಮ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಶಯಾಸ್ಪದ ವಸ್ತು ಪತ್ತೆಯಾದ ಕೂಡಲೇ 1ನೇ ಪ್ಲಾಟ್‌ಫಾರಂನ ಸಿಸಿ ಕ್ಯಾಮೆರಾ ಪರಿಶೀಲನೆಗೆ ಸೂಚಿಸಲಾಯಿತು. ಆದರೆ, ಅಲ್ಲಿದ್ದ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಎಂದು ಪೊಲೀಸ್‌ ಅಧಿಕಾರಿಗಳಿಗೆ ನಿಲ್ದಾಣ ಅಧಿಕಾರಿಗಳು ಉತ್ತರಿಸಿದರು.

ನಂತರ ರೈಲ್ವೆ ಪೊಲೀಸ್‌ ಅಧೀಕ್ಷಕ ಡಾ.ಭೀಮಾಶಂಕರ್‌ ಗುಳೇದ್‌ ಅವರು ನಿಲ್ದಾಣದ ಎಲ್ಲಾ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ನಿಲ್ದಾಣದಲ್ಲಿ ಅಳವಡಿಸಿರುವ 70 ಸಿಸಿ ಕ್ಯಾಮೆರಾಗಳ ಪೈಕಿ 20 ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ಈ ಕುರಿತು ರೈಲು ನಿಲ್ದಾಣದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹೊಸ 150 ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸುತ್ತಾರೆ.

ಹೆಸರಿಗಷ್ಟೇ ಮೆಟಲ್‌ ಡಿಟೆಕ್ಟರ್‌: ನಿಲ್ದಾಣದಲ್ಲಿ ಎರಡು ಕಡೆ ಮೆಟಲ್‌ ಡಿಟೆಕ್ಟರ್‌ಗಳಿವೆ. ಆದರೆ, ಅವೆರಡೂ ಹೆಸರಿಗೆ ಮಾತ್ರವಿದ್ದು, ಅವುಗಳ ಮೂಲಕ ಯಾರೇ ಹೋದರು, ಬಂದರೂ ಅವು ಬೀಪ್‌ ಸೌಂಡ್‌ ಮಾಡುತ್ತವೆ. ಅವುಗಳ ನಿರ್ವಹಣೆಗೆ ಅಥವಾ ಅವುಗಳ ಬಳಿ ಯಾವುದೇ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಹೀಗಾಗಿ, ನಿಲ್ದಾಣದ ಪ್ರವೇಶ ದ್ವಾರದ ಮೂಲಕವೇ ಬಾಂಬ್‌ ಅಥವಾ ಸ್ಫೋಟಕವನ್ನು ಕೊಂಡೊಯ್ದರೂ ಅವು ಕಂಡು ಹಿಡಿಯುವುದಿಲ್ಲ.

Advertisement

ಇನ್ನು ರೈಲು ನಿಲ್ದಾಣದ ಎಲ್ಲಾ ಪ್ರವೇಶ ದ್ವಾರಗಳ ಬಳಿಯು ಮೆಟಲ್‌ ಡಿಟೆಕ್ಟರ್‌ ಅಳವಡಿಸಿಲ್ಲ. ಬ್ಯಾಗ್‌ ಸ್ಕ್ಯಾನರ್‌ಗಳಂತೂ ಇಲ್ಲವೇ ಇಲ್ಲ. ಇದಲ್ಲದೇ ರೈಲು ನಿಲ್ದಾಣಕ್ಕೆ ಮೆಜೆಸ್ಟಿಕ್‌ ಮುಂಭಾಗ, ನಿಲ್ದಾಣದ ಹಿಂಭಾಗ, ಓಕಳಿಪುರ ಬಳಿಯ ದ್ವಾರ ಹೊರತುಪಡಿಸಿ ಕೆಲ ಅನಧಿಕೃತ ಪ್ರವೇಶ ದ್ವಾರಗಳಿವೆ. ಈ ಯಾವ ಅಂಶಗಳ ಬಗ್ಗೆಯೂ ನಿಲ್ದಾಣದ ಅಧಿಕಾರಿಗಳು ಗಮನಹರಿಸಿಲ್ಲ.

ಬಾಂಬ್‌ ಮಾದರಿ ವಸ್ತು ಪತ್ತೆಯಾಗಿದೆ ಎಂದಾಗ ರೈಲ್ವೆ ಪೊಲೀಸರು ಎಲ್ಲರನ್ನೂ ತಪಾಸಣೆ ಮಾಡುತ್ತಾರೆ. ನಂತರ ಯಾವುದೇ ತಪಾಸಣೆ ಇರುವುದಿಲ್ಲ. ಮೆಟ್ರೋ ರೀತಿ ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವ ವ್ಯವಸ್ಥೆ ರೈಲು ನಿಲ್ದಾಣದಲ್ಲೂ ಬರಬೇಕು.
-ಆನಂದ್‌, ಪ್ರಯಾಣಿಕ

ನಿಲ್ದಾಣದಲ್ಲಿ ಅಳವಡಿಸಿರುವ ಮೆಟಲ್‌ ಡಿಟೆಕ್ಟರ್‌ ಬಳಿ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಅವುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ. ಮೂಲ ಸೌಕರ್ಯ ಮಾತ್ರವಲ್ಲ ಭದ್ರತೆಯ ವಿಚಾರದಲ್ಲೂ ನಗರ ಕೇಂದ್ರ ರೈಲು ನಿಲ್ದಾಣ ಸಾಕಷ್ಟು ಹಿಂದುಳಿದಿದೆ.
-ಆಕಾಶ್‌, ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next