Advertisement

ಭಾರತದ ಆರ್ಥಿಕತೆಗೆ ಧಕ್ಕೆಯಾಗಲು ಬಿಡೆವು

06:00 AM Sep 30, 2018 | Team Udayavani |

ನ್ಯೂಯಾರ್ಕ್‌: “ಇರಾನ್‌ ಮೇಲೆ ನಾವು ಹೇರಿರುವ ನಿರ್ಬಂಧದಿಂದ ನಮ್ಮ ಸ್ನೇಹಿತನಾದ ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನಾವು ನೋಡಿ ಕೊಳ್ಳುತ್ತೇವೆ.’  ಇದು ಭಾರತಕ್ಕೆ ಅಮೆರಿಕ ನೀಡಿರುವ ಭರವಸೆ. ಭಾರತದ ತೈಲ ಆಮದಿನ ಅಗತ್ಯತೆಯು ನಮಗೆ ತಿಳಿದಿದ್ದು, ಅದರ ಆರ್ಥಿಕತೆಗೆ ಧಕ್ಕೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಮಾತುಕತೆ ನಡೆಸಲಾಗುತ್ತದೆ ಎಂದು ಟ್ರಂಪ್‌ ಆಡಳಿತದ ಉನ್ನತ ಅಧಿಕಾರಿಯೊಬ್ಬರು ಶನಿವಾರ ನ್ಯೂಯಾರ್ಕ್‌ನಲ್ಲಿ ತಿಳಿಸಿದ್ದಾರೆ. ಇರಾನ್‌ ಮೇಲೆ ಅಮೆರಿಕ ಹೇರಿರುವ ಕಠಿಣ ನಿರ್ಬಂಧವು ನವೆಂಬರ್‌ 4ರಿಂದ ಜಾರಿಯಾಗಲಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

Advertisement

ಈಗಾಗಲೇ ಇರಾನ್‌ ಮೇಲಿನ ಮೊದಲ ಹಂತದ ನಿರ್ಬಂಧ ಜಾರಿಯಾ ಗಿದ್ದು, ನ.4ರಿಂದ ಅದು ಪೂರ್ಣಪ್ರಮಾಣ ದಲ್ಲಿ ಅನುಷ್ಠಾನಕ್ಕೆ ಬರಲಿದೆ. ನ.4ರ ವೇಳೆಗೆ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎನ್ನುವುದು ಟ್ರಂಪ್‌ ಆಡಳಿತದ ಇಂಗಿತವಾಗಿದೆ. ಅದರಂತೆ, ಎಲ್ಲ ದೇಶಗಳಿಗೂ ಈಗಾಗಲೇ ಎಚ್ಚರಿಕೆ ಸಂದೇಶವನ್ನೂ ಅಮೆರಿಕ ಅಧ್ಯಕ್ಷ ಟ್ರಂಪ್‌ ರವಾನಿಸಿದ್ದಾರೆ. ಆದರೆ, ಅಮೆರಿಕದ ಈ ನಿರ್ಬಂಧಕ್ಕೆ ವಿಶ್ವಸಂಸ್ಥೆ ಅನುಮೋದನೆ ನೀಡಿಲ್ಲ. ಅಲ್ಲದೆ, ಭಾರತವು ಈವರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇರುವ ನಿರ್ಬಂಧವನ್ನಷ್ಟೇ ಪಾಲಿಸುತ್ತಾ ಬಂದಿದೆ.

ಪರ್ಯಾಯ ವ್ಯವಸ್ಥೆ: ನಿರ್ಬಂಧವನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ನಮ್ಮ ಎಲ್ಲ ಮಿತ್ರರಾಷ್ಟ್ರಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಭಾರತಕ್ಕೆ ಅತಿ ಹೆಚ್ಚು ತೈಲ ಆಮದಿನ ಅಗತ್ಯವಿದೆ ಎಂಬುದು ನಮಗೆ ಗೊತ್ತು. ಹಾಗಾಗಿ, ಭಾರತಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ, ಭಾರತದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳುವ ಕುರಿತು ಚರ್ಚಿಸುತ್ತಿ ದ್ದೇವೆ ಎಂದೂ ಟ್ರಂಪ್‌ ಆಡಳಿತದ ಅಧಿಕಾರಿ ತಿಳಿಸಿದ್ದಾರೆ. 

ಕಚೇರಿಗೆ ಬೀಗ
ಇರಾಕ್‌ನ ಬಸ್ರಾ ನಗರದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚುತ್ತಿರುವುದಾಗಿ ಶನಿವಾರ ಅಮೆ ರಿಕ ಘೋಷಿಸಿದೆ. ಅಷ್ಟೇ ಅಲ್ಲದೆ, ಅಲ್ಲಿರುವ ರಾಜತಾಂತ್ರಿಕ ಅಧಿಕಾರಿ ಗಳನ್ನೂ ಸ್ಥಳಾಂತರಿಸಲಾ ಗಿದೆ. ಇರಾನ್‌ ಮತ್ತು ಇರಾನ್‌ ಮೂಲದ ಬಂಡುಕೋರರ ಬೆದರಿಕೆ ಹಾಗೂ ರಾಕೆಟ್‌ ದಾಳಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅಮೆರಿಕ ಹೇಳಿದೆ. ಅಷ್ಟೇ ಅಲ್ಲದೆ, ನಮ್ಮ ರಾಜತಾಂತ್ರಿಕ ಕಟ್ಟಡಗಳು ಅಥವಾ ನಾಗರಿಕರ ಮೇಲೆ ಯಾವುದೇ ದಾಳಿ ಆದರೂ, ಅದಕ್ಕೆ ಇರಾನೇ ಹೊಣೆ ಎಂದೂ ಅಮೆರಿಕದ ವಿದೇಶಾಂಗ ಸಚಿವ ಪೋಂಪೊ ಎಚ್ಚರಿಸಿದ್ದಾರೆ. ಇದು ಈಗಾಗಲೇ ಹದಗೆಟ್ಟಿರುವ ಅಮೆ ರಿಕ- ಇರಾನ್‌ ಸಂಬಂಧವನ್ನು ಮತ್ತಷ್ಟು ಹಳಸುವಂತೆ ಮಾಡಿದೆ. ಇತ್ತೀಚೆಗಷ್ಟೇ ಬಸ್ರಾದಲ್ಲಿ ನಡೆದ ರಾಕೆಟ್‌ ದಾಳಿಯು ತಮ್ಮ ರಾಯಭಾರ ಕಚೇರಿ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಾಗಿತ್ತು ಎನ್ನುವುದು ಅಮೆರಿ ಕದ ವಾದ.

Advertisement

Udayavani is now on Telegram. Click here to join our channel and stay updated with the latest news.

Next