Advertisement

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

03:11 PM Apr 26, 2024 | Team Udayavani |

ಸಂದೇಶ ಕಳುಹಿಸುವ ಪ್ಲ್ಯಾಟ್‌ ಫಾರ್ಮ್‌ ಗಳಲ್ಲಿ ಒಂದಾದ ವಾಟ್ಸಾಪ್‌ ಭಾರತದಲ್ಲಿ ತುಂಬಾ ಜನಪ್ರಿಯವಾಗಿದೆ. ಆದರೆ ನಾಗರಿಕರ ಖಾಸಗಿತನದ ಹಕ್ಕು ಮತ್ತು ರಾಷ್ಟ್ರೀಯ ಭದ್ರತೆಯ ಕೇಂದ್ರ ಸರ್ಕಾರದ ಕಾನೂನು ಸಮರದ ಬೆಳವಣಿಗೆಯಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Advertisement

ಏನಿದು ವಿವಾದ:

ವಾಟ್ಸಾಪ್‌ ಎಂಡ್‌ ಟು ಎಂಡ್ ಎನ್‌ ಕ್ರಿಪ್ಶನ್‌ (ಗೂಢಲಿಪೀಕರಣ) ತೆಗೆದುಹಾಕಬೇಕು ಎಂದು ಸೂಚಿಸಿದರೆ ನಾವು ಭಾರತದಲ್ಲಿ ವಾಟ್ಸಾಪ್‌ ಸರ್ವಿಸ್‌ ಅನ್ನು ಸ್ಥಗಿತಗೊಳಿಸುವುದಾಗಿ ದೆಹಲಿ ಹೈಕೋರ್ಟ್‌ ಗೆ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮ 2021ರ ನಿಯಮವನ್ನು ಪ್ರಶ್ನಿಸಿ WhatsApp ಮತ್ತು ಮೆಟಾ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ಹೇಳಿಕೆಯನ್ನು ನೀಡಿದೆ.

ನಿಯಮ 4(2)ರ ಪ್ರಕಾರ, ಸಂದೇಶ ಸೇವೆಗಳನ್ನು ಒದಗಿಸುವ ಸಾಮಾಜಿಕ ಜಾಲತಾಣ ಕಂಪನಿಗಳು ಒಂದು ವೇಳೆ ನ್ಯಾಯಾಲಯ ಅಥವಾ ಸಕ್ಷಮ ಪ್ರಾಧಿಕಾರ ಆದೇಶ ನೀಡಿದಲ್ಲಿ ಯಾರು ಸಂದೇಶವನ್ನು ಕಳುಹಿಸಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಹೇಳುತ್ತದೆ. ಇದನ್ನು ವಾಟ್ಸಾಪ್‌ ಮತ್ತು ಮೆಟಾ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು.

Advertisement

ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ದೈಹಿಕ ದೌರ್ಜನ್ಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಹಿತಿಯನ್ನು ನೀಡಬಹುದಾಗಿದೆ ಎಂದು ವಾಟ್ಸಾಪ್‌ ತಿಳಿಸಿದೆ. ಆದರೆ ಪೂರ್ಣಸ್ವರೂಪದ ಮೂಲ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ವಾಟ್ಸಾಪ್‌ ವಾದವೇನು?

ಕೇಂದ್ರದ ಈ ನಿಯಮವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಮತ್ತು ಈ ನಿಯಮ ಪಾಲಿಸದಿದ್ದಕ್ಕಾಗಿ ಯಾವುದೇ ಕ್ರಿಮಿನಲ್‌ ಹೊಣೆಯನ್ನು ಹೊರಿಸಬಾರದು ಎಂದು ವಾಟ್ಸಾಪ್‌ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ. ಮಾಹಿತಿಯ ಮೂಲ ಪತ್ತೆಹಚ್ಚುವಿಕೆಯ ಅಗತ್ಯತೆ ಕಂಪನಿಯ ಎಂಡ್‌ ಟು ಎಂಡ್‌ ಎನ್‌ ಕ್ರಿಪ್ಶನ್‌ ತೆಗೆದುಹಾಕುವಂತೆ ಒತ್ತಡ ಹೇರಿದಂತೆ ಆಗಲಿದೆ. ಇದು ಲಕ್ಷಾಂತರ ಬಳಕೆದಾರರ ಗೌಪ್ಯತೆ , ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದೆ.

ಇಂತಹ ನಿಯಮ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಬ್ರೆಜಿಲ್‌ ನಲ್ಲೂ ಇಲ್ಲ. ಈ ನಿಯಮ ಎನ್‌ ಕ್ರಿಪ್ಶನ್‌ ಮತ್ತು ಬಳಕೆದಾರರ ಗೌಪ್ಯತೆಯನ್ನು ದುರ್ಬಲಗೊಳಿಸುತ್ತದೆ. ಇದು ಭಾರತದ ಸಂವಿಧಾನದ 14,19 ಮತ್ತು 21ನೇ ವಿಧಿಗಳ ಅಡಿಯಲ್ಲಿ ಬಳಕೆದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದಂತೆ ಎಂದು ವಾಟ್ಸಾಪ್‌ ಪ್ರತಿಪಾದಿಸಿದೆ.

ಯಾವುದೇ ಚರ್ಚೆ, ಸಂವಹನ ಇಲ್ಲದೇ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ವಾಟ್ಸಾಪ್‌ ಪರವಾಗಿ ಹಾಜರಾದ ವಕೀಲ ತೇಜಸ್‌ ಕರಿಯಾ ಅವರು ದೆಹಲಿ ಹೈಕೋರ್ಟ್‌ ನಲ್ಲಿ ವಾದ ಮಂಡಿಸುತ್ತಾ ತಿಳಿಸಿದ್ದು, ಬಳಕೆದಾರರು ಗೌಪ್ಯತೆಯ ನಂಬಿಕೆಯಿಂದ ವಾಟ್ಸಾಪ್‌ ಅನ್ನು ಬಳಸುತ್ತಾರೆ. ಒಂದು ವೇಳೆ ನೀವು ಎಂಡ್‌ ಟು ಎಂಡ್‌ ಎನ್‌ ಕ್ರಿಪ್ಶನ್‌ ತೆಗೆದುಹಾಕಬೇಕು ಎಂದು ಹೇಳಿದರೆ, ವಾಟ್ಸಾಪ್‌ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಮತ್ತು ಜಸ್ಟೀಸ್‌ ಪ್ರೀತಮ್‌ ಸಿಂಗ್‌ ಅರೋರಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದ್ದರು.

ಸಮತೋಲನ ಅಗತ್ಯ:

ಗೌಪ್ಯತೆ ಹಕ್ಕುಗಳು ಸಂಪೂರ್ಣವಲ್ಲ, ಈ ಬಗ್ಗೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಪೀಠ ಹೇಳಿದೆ. ಈ ಸಂದರ್ಭದಲ್ಲಿ ಕೇಂದ್ರದ ಪರವಾಗಿ ಹಾಜರಾಗಿದ್ದ ವಕೀಲರು, ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿನ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ನಿಯಮದ ಅಗತ್ಯವಿದೆ ಎಂದು ವಾದಿಸಿದರು.

ಕೇಂದ್ರದ ವಾದವೇನು?

ವಾಟ್ಸಾಪ್‌ ಮತ್ತು ಫೇಸ್‌ ಬುಕ್‌ ಬಳಕೆದಾರರ ಮಾಹಿತಿಯಿಂದ ಹಣಗಳಿಸುತ್ತಿದೆ. ಹೀಗಾಗಿ ಅದು ಗೌಪ್ಯತೆಯನ್ನು ರಕ್ಷಿಸುತ್ತದೆ ಎಂದು ಹೇಳಲು ಕಾನೂನುಬದ್ಧವಾಗಿ ಅರ್ಹತೆ ಹೊಂದಿಲ್ಲ. ಫೇಸ್‌ ಬುಕ್‌ ಮೇಲೆ ಹೆಚ್ಚಿನ ನಿಯಂತ್ರಣ ಹೇರುವ ಕಾರ್ಯ ವಿವಿಧ ದೇಶಗಳಲ್ಲಿ ನಡೆಯುತ್ತಿದೆ ಎಂದು ಕೇಂದ್ರ ವಾದ ಮಂಡಿಸಿದೆ.

ಎನ್‌ ಕ್ರಿಪ್ಶನ್‌ ತೆಗೆದುಹಾಕದೇ ಸಂದೇಶದ ಮೂಲವನ್ನು ಕಂಡುಹಿಡಿಯಲು ಸಾಧ್ಯವಿಲ್ಲ ಎಂದಾದರೆ, ವಾಟ್ಸಾಪ್‌ ಇದಕ್ಕೆ ಪರ್ಯಾಯವಾದ ಕಾರ್ಯವಿಧಾನದ ಬಗ್ಗೆ ಪರಿಹಾರ ತಿಳಿಸಬೇಕು ಎಂದು ಕೇಂದ್ರ ಸರ್ಕಾರ ಈ ಮೊದಲು ವಾದ ಮಂಡಿಸಿದ ವೇಳೆ ತಿಳಿಸಿತ್ತು. ಪ್ರಕರಣದ ಕುರಿತು ವಾದ, ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್‌ ಆಗಸ್ಟ್‌ 14ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next