ನವದೆಹಲಿ:ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ಸೇನೆ ನಡುವೆ ಸಂಘರ್ಷ ಮುಂದುವರಿದಿದೆ. ಗಡಿ ಪ್ರದೇಶದ ಆಯಕಟ್ಟಿನ ಸ್ಥಳದಿಂದ ಹಿಂದೆ ಸರಿಯಲು ಚೀನಾ ಸೇನೆ ನಿರಾಕರಿಸುತ್ತಿದ್ದು, ನಿರಂತರವಾಗಿ ಭಾರತದ ಪ್ರದೇಶದೊಳಕ್ಕೆ ಒಳನುಗ್ಗುವ ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ವರದಿ ತಿಳಿಸಿದೆ.
ಸೆಪ್ಟೆಂಬರ್ 7ರಂದು ಏನು ನಡೆಯಿತು?
ಸೆಪ್ಟೆಂಬರ್ 7ರಂದು ಸೋಮವಾರ ಲಡಾಖ್ ನ ದಕ್ಷಿಣ ಪ್ಯಾಂಗಾಂಗ್ ಸರೋವರದ ತುದಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ ಎ) ಒಳನುಗ್ಗಲು ಯತ್ನಿಸಿತ್ತು. ಆದರೆ ವಾಸ್ತವ ನಿಯಂತ್ರಣ ರೇಖೆಯಲ್ಲಿ ಬಿಗಿ ಕಾವಲು ಕಾಯುತ್ತಿದ್ದ ಭಾರತೀಯ ಸೇನಾಪಡೆ ಮತ್ತೊಮ್ಮೆ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿತ್ತು. ಇದರೊಂದಿಗೆ ಕಳೆದ 83 ದಿನಗಳಿಂದ ನಡೆಯುತ್ತಿದ್ದ ಗಡಿ ವಿವಾದದಲ್ಲಿ ಚೀನಾ ಸೇನೆಯನ್ನು 3ನೇ ಬಾರಿ ಭಾರತೀಯ ಯೋಧರು ಸಮರ್ಥವಾಗಿ ಸೋಲಿಸಿರುವುದಾಗಿ ವರದಿ ವಿವರಿಸಿದೆ.
ಮೂಲಗಳ ಪ್ರಕಾರ, ಚೀನಾ ಗಾಲ್ವಾನ್ ಘಟನೆಯನ್ನು ಪುನರಾರ್ತಿಸಲು ಬಯಸುತ್ತಿದೆ. ಜೂನ್ 15ರಂದು ನಡೆದಿದ್ದ ಘಟನೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅದೇ ರೀತಿ ಲಡಾಖ್ ನ ದಕ್ಷಿಣ ಪ್ಯಾಂಗಾಂಗ್ ಸರೋವರ ತುದಿಯ ಶೇನ್ ಪಾವೋ ಪರ್ವತ ಪ್ರದೇಶ (ಗಾಡ್ ಪಾವೋ ಹಿಲ್)ದಲ್ಲಿ ಘಟನೆ ನಡೆದಿತ್ತು. ಪರ್ವತ ಶ್ರೇಣಿ ಪ್ರದೇಶದ ಪ್ರಮುಖ ಆಯಕಟ್ಟಿನ ಸ್ಥಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಚೀನಾ ಸೇನೆ ದೊಡ್ಡ ಪ್ರಮಾಣದಲ್ಲಿ ಜಮಾವಣೆಗೊಂಡಿರುವುದಾಗಿ ವರದಿ ವಿವರಿಸಿದೆ.
ಚೀನಾ ಪಡೆ ಕಬ್ಬಿಣದ ರಾಡ್ ಹಾಗೂ ಬ್ಯಾಟ್ ಗಳನ್ನು ಹಿಡಿದುಕೊಂಡು ಬಂದಿದ್ದು, ಈ ಸಂದರ್ಭದಲ್ಲಿ ಪರ್ವತ ಶ್ರೇಣಿಯಲ್ಲಿದ್ದ ಭಾರತೀಯ ಸೇನಾ ಪಡೆ ಕೂಡಲೇ ಚೀನಾ ಪಡೆಗೆ ಹಿಂದೆ ಸರಿಯಲು ಸೂಚನೆ ನೀಡಿತ್ತು. ಆದರೂ ಚೀನಾ ಪಡೆ ಮುನ್ನುಗ್ಗಿ ಬಂದ ವೇಳೆ ಭಾರತೀಯ ಸೇನೆ “ ಎಚ್ಚರಿಕೆಯ ದಾಳಿ (ವಾರ್ನಿಂಗ್ ಶಾಟ್) ನಡೆಸಿರುವುದಾಗಿ ತಿಳಿಸಿದೆ.
ಸುಳ್ಳು ಬುರುಕ ಚೀನಾ!
ಸೋಮವಾರ (ಸೆಪ್ಟೆಂಬರ್ 7, 2020) ರಾತ್ರಿ ನಡೆದ ಗುಂಡಿನ ಚಕಮಕಿಯ ಘಟನೆಯನ್ನು ಚೀನಾ ತಿರುಚಿ ಹೇಳಿಕೆ ನೀಡತೊಡಗಿದೆ. ಚೀನಾ ಪಡೆ ಮುನ್ನುಗ್ಗಿ ಬಂದಾಗ ಭಾರತೀಯ ಸೇನೆ ಎಚ್ಚರಿಕೆಯ ದಾಳಿ ನಡೆಸಿತ್ತು. ಆದರೆ ಚೀನಾ, ಭಾರತೀಯ ಸೇನೆ ಎಲ್ ಎಸಿ ದಾಟಿ ನಡೆಸಿದ ಎಚ್ಚರಿಕೆ ದಾಳಿಗೆ ಪ್ರತಿಯಾಗಿ ಕ್ರಮ ಕೈಗೊಂಡಿರುವುದಾಗಿ ತನ್ನ ತಪ್ಪನ್ನು ಮುಚ್ಚಿಹಾಕಲು ಯತ್ನಿಸಿರುವುದಾಗಿ ವರದಿ ತಿಳಿಸಿದೆ.
ಚೀನಾದ ವೆಸ್ಟರ್ನ್ ಕಮಾಂಡ್, ಕರ್ನಲ್ ಝಾಂಗ್ ಶಿಯುಲಿ, ಭಾರತೀಯ ಸೇನಾ ಪಡೆ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಪ್ರದೇಶದ ಶೇನ್ ಪಾವೋ ಪ್ರರ್ವತ ಸಮೀಪ ವಾಸ್ತವ ನಿಯಂತ್ರಣ ರೇಖೆ ದಾಳಿ ನಡೆಸಿ ಪ್ರಚೋದನಕಾರಿ ನಡವಳಿಕೆ ತೋರಿರುವುದಾಗಿ ಆರೋಪಿಸಿದ್ದಾರೆ.
ಭಾರತೀಯ ಸೇನೆಯ ಈ ಕ್ರಮ ಉಭಯ ದೇಶಗಳ ಒಪ್ಪಂದದ ಉಲ್ಲಂಘನೆಯಾಗಿದೆ. ಇದರಿಂದಾಗಿ ಎರಡು ದೇಶಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ. ಅಲ್ಲದೇ ಅಪಾರ್ಥಕ್ಕೆ ಕಾರಣವಾಗಲಿದೆ ಎಂದು ಚೀನಾ ಪ್ರತಿಕ್ರಿಯೆ ನೀಡಿದೆ.
ಚೀನಾದ ಆರೋಪ ಅಲ್ಲಗಳೆದ ಭಾರತ:
ವಾಸ್ತವ ನಿಯಂತ್ರಣ ರೇಖೆಯಲ್ಲಿ ಭಾರತ ಯಾವುದೇ ಪ್ರಚೋದನಕಾರಿ ನಡವಳಿಕೆ ತೋರಿಲ್ಲ ಎಂದು ಪ್ರತಿಕ್ರಿಯೆ ನೀಡಿರುವ ಭಾರತ, ಚೀನಾದ ಆರೋಪವನ್ನು ಅಲ್ಲಗಳೆದಿರುವುದಾಗಿ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ.