Advertisement

Expert’s Opinion: ಗ್ಯಾರಂಟಿ ಭಾರ ಇಲ್ಲದಿದ್ದರೆ ಇನ್ನೂ ಉತ್ತಮ ಆಗಿರುತ್ತಿತ್ತು

11:44 PM Feb 16, 2024 | Team Udayavani |

14 ಬಜೆಟ್‌ ಮಂಡಿಸಿದ ಅನುಭವ ವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 15ನೇ ಬಜೆಟನ್ನೂ ಮೇಲ್ನೋಟಕ್ಕೆ ಹೊಸ ತೆರಿಗೆಗಳ ಪ್ರಸ್ತಾಪವಿಲ್ಲದೆ ಸರಿದೂಗಿಸುವ ಪ್ರಯತ್ನ ಮಾಡಿದ್ದಾರೆ. ಆರ್ಥಿಕತೆಯ ಬಗ್ಗೆ ಅಪಾರ ಜ್ಞಾನವುಳ್ಳ ಅವರಿಗೆ ಗ್ಯಾರಂಟಿ ಎಂಬ ‘ರಾಜಕೀಯ ಭಾರ’ ಇಲ್ಲದಿದ್ದರೆ ಮತ್ತಷ್ಟು ಪ್ರಗತಿಪರ ಬಜೆಟ್‌ ಮಂಡಿಸಿರುತ್ತಿದ್ದರೇನೋ.

Advertisement

ಗ್ಯಾರಂಟಿಯೂ ಸೇರಿದಂತೆ ಕಲ್ಯಾಣ ಕಾರ್ಯಕ್ರಮಗಳಿಗೆ 1.20 ಲಕ್ಷ ಕೋಟಿ ರೂ. ಗಳನ್ನು ತೊಡಗಿಸುವ ಪ್ರಸ್ತಾಪ ಮಾಡುವ ಮೂಲಕ ಒಟ್ಟಾರೆ ಬಜೆಟ್‌ನ ಶೇ.32.60ರಷ್ಟನ್ನು ಬಳಕೆ ಮಾಡುತ್ತಿದ್ದಾರೆ. ರಾಜ್ಯವನ್ನು ಹೆಚ್ಚು ಅಭಿವೃದ್ಧಿಯತ್ತ ಕೊಂಡೊಯ್ಯಬಹುದಾದ ಬಂಡವಾಳ ವೆಚ್ಚಕ್ಕಾಗಿ 55877 ಕೋಟಿ ರೂ. ಅಂದರೆ ಶೇ.15.15 ರಷ್ಟನ್ನು ಮಾತ್ರ ತೆಗೆದಿರಿಸಿದ್ದು, ಬಜೆಟ್‌ನ 1.05 ಲಕ್ಷ ಕೋಟಿ ರೂ. (ಶೇ.28.57) ಸಾಲ ಪಡೆಯುತ್ತಿದ್ದಾರೆ. ಹಳೆ ಸಾಲ ಮರುಪಾವತಿಗೆ 24974 ಕೋಟಿ ರೂ. ಮೀಸಲಿಟ್ಟಿದೆ. ಇದೆಲ್ಲವೂ ಗ್ಯಾರಂಟಿಸಹಿತ ಇತರೆ ಕಲ್ಯಾಣ ಕಾರ್ಯಕ್ರಮಗಳ ತೆಗೆದುಕೊಂಡಿರುವ ಸವಾಲನ್ನು ತೋರಿಸುತ್ತಿದೆ. ಎಲ್ಲ ಸವಾಲುಗಳ ನಡುವೆ ಕರ್ನಾಟಕವು ಜಿಎಸ್‌ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ. ಜನವರಿ ಅಂತ್ಯದವರೆಗೆ 58180 ಕೋಟಿ ರೂ. ಎಸ್‌ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ಸಾಲಿಗಿಂತ ಜಿಎಸ್‌ಟಿ ಸಂಗ್ರಹಣೆಯ ಬೆಳವಣಿಗೆ ದರವು ಶೇ.14 ರಷ್ಟಾಗಿದೆ. ಬರಗಾಲದಿಂದ 35 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಹಾಗೂ ಕೇಂದ್ರ ಸರ್ಕಾರಕ್ಕೆ 18 ಸಾವಿರ ಕೋಟಿ ರೂ.ಗಳ ಪರಿಹಾರ ಕೇಳಿರುವುದಾಗಿ ಅವರೇ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ನಿಂದ ಬರ ಪರಿಹಾರ ಸಿಕ್ಕರೆ ರಾಜ್ಯ ಸರ್ಕಾರ ಕೊಂಚ ಉಸಿರಾಡಬಹುದು.

ಜಿಎಸ್‌ಟಿ ನ್ಯಾಯಮಂಡಳಿಯಿಂದ ನಿಟ್ಟುಸಿರು: ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯ 2 ರಾಜ್ಯಪೀಠ ಸ್ಥಾಪನೆ ಮಾಡುವುದರಿಂದ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಹಾಯ ಆಗಲಿದೆ.

ದಾರಿ ಸುಲಭದ್ದಲ್ಲ: ವಾಣಿಜ್ಯ ತೆರಿಗೆ ಸಂಗ್ರಹಣೆ 1.10 ಲಕ್ಷ ಕೋಟಿ ರೂ. ಗುರಿ ನಿಗದಿಪಡಿಸಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವು ಜನವರಿ ಅಂತ್ಯದವರೆಗೆ 15,692 ಕೋಟಿ ರೂ. ಸಂಗ್ರಹವಾಗಿದ್ದು ,ಶೇ.10 ರಷ್ಟು ಬೆಳವಣಿಗೆ ಆಗಿರುವ ಧೈರ್ಯದಿಂದ 2024-25 ರಲ್ಲಿ 26 ಸಾವಿರ ಕೋಟಿ ರೂ. ಸಂಗ್ರಹಣೆ ಗುರಿ ಕೊಡಲಾಗಿದೆ. ಅಬಕಾರಿಯಿಂದ 28,181 ಕೊಟಿ ರೂ. ಸ್ವೀಕೃತವಾಗಿದ್ದು, ಐಎಂಎಲ್‌, ಬಿಯರ್‌ ಸ್ಲಾಬ್‌ ಪರಿಷ್ಕರಣೆಯೂ ಸೇರಿದಂತೆ 38,225 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಂಡಿದ್ದಾರೆ. ಸಾರಿಗೆಯಲ್ಲೂ ಶೇ.19 ರಷ್ಟು ಬೆಳವಣಿಯಾಗಿದ್ದು, 13 ಸಾವಿರ ಕೋಟಿ ರೂ. ಸಂಗ್ರಹಣೆ ಗುರಿ ಕೊಟ್ಟಿದೆ. ಇದನ್ನು ಸಾಧಿಸುವ ದಾರಿಯಂತೂ ಸುಲಭದ್ದಲ್ಲ.

ಎಸ್‌.ನಂಜುಂಡ ಪ್ರಸಾದ್‌ , ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next