Advertisement

ಕುಮಟಾದಲ್ಲಿ ಪ್ರಾಯೋಗಿಕ ಯೋಜನೆ: ಎಂ.ಸುಂದರೇಶ

10:15 AM Feb 11, 2020 | Suhan S |

ಹುಬ್ಬಳ್ಳಿ: ವಿದ್ಯುತ್‌ ಮೀಟರ್‌ಗಳಿಗೆ ಸೀಲ್‌ ಅಳವಡಿಸುವ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಕುಮಟಾದಲ್ಲಿ ಪ್ರಾಯೋಗಿಕ ಯೋಜನೆ ಕೈಗೊಳ್ಳುವಂತೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ. ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನವನಗರದ ಹೆಸ್ಕಾಂ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಹಕರ ಸಭೆಯಲ್ಲಿ ಕುಮಟಾದ ಗ್ರಾಹಕ ಅರವಿಂದ ಪೈ ಅವರ ಪ್ರಶ್ನೆಗೆ ಉತ್ತರಿಸಿ, ವಿದ್ಯುತ್‌ ಮೀಟರ್‌ಗಳಿಗೆ ಸೀಲ್‌ ಅಳವಡಿಸುವುದು ಅವಶ್ಯಕವಾಗಿದೆ. ಕುಮಟಾದಲ್ಲಿ ಪೈಲೆಟ್‌ ಪ್ರಾಜೆಕ್ಟ್ ಕೈಗೊಂಡು ಮುಂದೆ ಇದನ್ನು ಇತರ ಕಡೆಗಳಲ್ಲಿ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಸಿಬ್ಬಂದಿ ಕೊರತೆಯಿದ್ದರೂ ಸಮರ್ಪಕ ಸೇವೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ. 425 ಜೆಎಲ್‌ ಎಂಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.ನೇಮಕದ ನಂತರ ಗ್ರಾಹಕರ ದೂರುಗಳಿಗೆ ತ್ವರಿತ ಗತಿಯಲ್ಲಿ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹೆಸ್ಕಾಂ ಕಚೇರಿಗಳಲ್ಲಿಯೇ ವಿದ್ಯುತ್‌ ಬಿಲ್‌ ಪಾವತಿಸುವ ಎಟಿಪಿಗಳನ್ನು ಅಳವಡಿಸುವ ಬದಲು ಜನಸಂದಣಿ ಹೆಚ್ಚಾಗಿರುವ ಬೇರೆ ಪ್ರದೇಶದಲ್ಲಿ ಎಟಿಪಿ ಅಳವಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಅಧಿಕಾರಿಗಳು ಪ್ರಸ್ತಾವನೆ ಕಳಿಸಿದರೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಸ್ಕಾಂ ಕೆಇಆರ್‌ಸಿಗೆ ಯುನಿಟ್‌ಗೆ ಕೇವಲ 45 ಪೈಸೆ ದರ ಹೆಚ್ಚಳ ಮಾಡಲು ತಿಳಿಸಲಾಗಿದೆ. ಇದು ಇತರ ವಿದ್ಯುತ್‌ ಸಂಸ್ಥೆಗಳಿಗೆ ಹೋಲಿಕೆಮಾಡಿದರೆ ಕಡಿಮೆಯದ್ದಾಗಿದೆ. ವಿಚಕ್ಷಣ ದಳದವರು ಅನಗತ್ಯವಾಗಿ ಗ್ರಾಹಕರಿಗೆ ತೊಂದರೆ ನೀಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಧಾರವಾಡ ತಾಲೂಕಿನ ಕ್ಯಾರಕೊಪ್ಪದ ಮಲ್ಲಪ್ಪ ಲಕಮಾಪುರ, ಪಂಪ್‌ಸೆಟ್‌ಗೆ ಕಳೆದ ಒಂದೂವರೆ ವರ್ಷದಿಂದ ವಿದ್ಯುತ್‌ ಸಂಪರ್ಕ ನೀಡಿಲ್ಲ. ಅದನ್ನು ಕೂಡಲೇ ನೀಡಬೇಕು ಎಂದು ಮನವಿ ಮಾಡಿದರು. ಕಲಘಟಗಿ ತಾಲೂಕು ಹುಲಕೊಪ್ಪದ ಬಸವರಾಜ ಹೂಗಾರ, ಪಂಪ್‌ ಸೆಟ್‌ಗೆ ವಿದ್ಯುತ್‌ ಸಂಪರ್ಕ ನೀಡುವಂತೆ ಕಳೆದ 3 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಸಂಪರ್ಕ ನೀಡುತ್ತಿಲ್ಲ ಎಂದು ಹೇಳಿಕೊಂಡರು.

ಆಗ ವ್ಯವಸ್ಥಾಪಕ ನಿರ್ದೇಶಕರು, ಈ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಹಳೇ ಗಬ್ಬೂರಿನ ಶಿವಾನಂದ ಹೊಸೂರ, ಸದ್ಯಕ್ಕಿರುವ ವಿದ್ಯುತ್‌ ಲೈನ್‌ ತುಂಬಾ ಹಳೆಯದಾಗಿದ್ದು, ಹೊಸ ಲೈನ್‌ ಹಾಕಬೇಕು. ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಉದ್ಯಮಿ ವಿಜಯ ಚಂದರಗಿ, ವಿದ್ಯುತ್‌ ಬಿಲ್‌ನಲ್ಲಿ ಹೆಸ್ಕಾಂ ಜಿಎಸ್‌ಟಿ ಮುದ್ರಿತವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಎಂ. ಸುಂದರೇಶ ಬಾಬು, ಸಾಫ್ಟವೇರ್‌ನಲ್ಲಿ ಜಿಎಸ್‌ಟಿ ಸಂಖ್ಯೆ ಬರುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next