Advertisement

ಯೋಜನೆಗೆ ಪ್ರಾಯೋಗಿಕ ಚಾಲನೆ ಇಂದು

01:05 PM Dec 16, 2017 | |

ವಿಜಯಪುರ: ಏಷ್ಯಾ ಖಂಡದಲ್ಲಿಯೇ ಬೃಹತ್‌ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಜಿಲ್ಲೆಯ ಜನರ ಬಹುದಿನಗಳ ಕನಸಾಗಿರುವ ಮುಳವಾಡ ಏತ ನೀರಾವರಿ 4ನೇ ಹಂತದ ಯೋಜನೆ ಕನಸು ಶನಿವಾರ ನನಸಾಗಲಿದೆ.

Advertisement

ಮುಳವಾಡ ಏತ ನೀರಾವರಿ ಯೋಜನೆಯ 4ನೇ ಹಂತದ, ಮುಳವಾಡ ಗ್ರಾಮದ ಹತ್ತಿರ ನಿರ್ಮಿಸಿರುವ 4ಎ ಲಿಫ್ಟ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ಬೆಳಗ್ಗೆ ಬಬಲೇಶ್ವರ ಶಾಖಾ ಕಾಲುವೆಗೆ ನೀರು ಹರಿಸಲು ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತದೆ.

ಮುಳವಾಡ ಏತ ನೀರಾವರಿ ಯೋಜನೆ ಬಬಲೇಶ್ವರ ಶಾಖಾ ಕಾಲುವೆಯ ರಾಷ್ಟ್ರೀಯ ಹೆದ್ದಾರಿ-218 ಕ್ರಾಸಿಂಗ್‌ ಕಾಮಗಾರಿ ಹಾಗೂ ಮುಳವಾಡ-ಕಾರಜೋಳ ಹತ್ತಿರ ವಿವಿಧ ಕಾಲುವೆಗಳ ಪರಿವೀಕ್ಷಣೆ ನಡೆಸಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಮಾತನಾಡಿ, ಬ್ರಿಟಿಷರ ಕಾಲದಲ್ಲಿಯೇ ಸರ್ವೇಯಾಗಿ ಇದುವರೆಗೂ ನನೆಗುದಿಗೆ ಬಿದ್ದಿದ್ದ ಮುಳವಾಡ ಏತ ನೀರಾವರಿ ಯೋಜನೆ ಅಂತಿಮ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ. ಇದೀಗ ಹಂತ-4ರ ಕಾಮಗಾರಿಗಳು ಪೂರ್ಣಗೊಂಡಿದ್ದು, ನಾಳೆಯಿಂದಲೇ ಕಾಲುವೆಗಳಿಗೆ ನೀರು ಹರಿಸಲು ಚಾಲನೆ ನೀಡಲಾಗುವುದು ಎಂದು ಪ್ರಕಟಿಸಿದರು. 

ಮುಳವಾಡ 4ಎ ಲಿಫ್ಟ್‌ನಲ್ಲಿ ಬೃಹತ್‌ ಮೋಟಾರ್‌ಗಳನ್ನು ಚಾಲನೆಗೊಳಿಸಲು 220 ಕೆವ್ಹಿ ವಿದ್ಯುತ್‌ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದು, ಮಸೂತಿಯಿಂದ 12.5 ಕಿ.ಮೀ. ವಿದ್ಯುತ್‌ ಲೈನ್‌ ಸಂಪರ್ಕ ಪೂರ್ಣಗೊಂಡಿದೆ. ಸುಮಾರು ಇಂತಹ ಯೋಜನೆಗಳು ಪೂರ್ಣಗೊಳ್ಳಲು ಕನಿಷ್ಠ 10 ರಿಂದ 15 ವರ್ಷ ಸಮಯ ತೆಗೆದುಕೊಳ್ಳುತ್ತವೆ. ಆದರೆ ಮುಳವಾಡದಲ್ಲಿ ಕಾಮಗಾರಿ ಆರಂಭಿಸಿದ 18 ತಿಂಗಳಲ್ಲಿಯೇ ಈ ಬೃಹತ್‌ ಯೋಜನೆಯನ್ನು ಪೂರ್ಣಗೊಳಿಸಿದ ಹೆಮ್ಮೆ ನಮ್ಮ ಇಲಾಖೆಗೆ ಸಲ್ಲುತ್ತದೆ ಎಂದು ಸಚಿವ ಪಾಟೀಲ ಹರ್ಷ ವ್ಯಕ್ತಪಡಿಸಿದರು.

ಮುಳವಾಡ 4ಎ ಲಿಫ್ಟ್‌ದಿಂದ 2 ಕಾಲುವೆಗಳು ಆರಂಭಗೊಂಡಿದ್ದು, 41 ಕಿ.ಮೀ. ಉದ್ದದ ಬಬಲೇಶ್ವರ ಶಾಖಾ ಕಾಲುವೆ 39 ಕಿ.ಮೀ. ಪೂರ್ಣಗೊಂಡಿದೆ. ಮುಳವಾಡ, ಕಾರಜೋಳ, ಕಾಖಂಡಕಿ, ಬಬಲೇಶ್ವರ, ನಿಡೋಣಿ, ತೊನಶ್ಯಾಳ, ಕುಬಕಡ್ಡಿ, ಸಾರವಾಡ, ದೂಡಿಹಾಳ, ಮದಗುಣಕಿ, ಶೇಗುಣಸಿ, ಕಂಬಾಗಿ, ಹಲಗಣಿ, ಯಕ್ಕುಂಡಿ, ಕನಮುಚನಾಳ, ದಾಶ್ಯಾಳ, ತಿಗಣಿಬಿದರಿ, ನಾಗರಾಳ, ಕುಮಠೆ, ಅರ್ಜುಣಗಿ, ಹೊಕ್ಕುಂಡಿ, ಜಮಖಂಡಿ ತಾಲೂಕಿನ ಖಾಜಿಬೀಳಗಿ, ಗೋಠೆ, ತೊದಲಬಾಗಿ, ಕಲಬೀಳಗಿ, ಗದ್ಯಾಳ ಗ್ರಾಮಗಳ 64,210 ಎಕರೆ ಭೂಮಿ ನೀರಾವರಿಗೊಳಪಡಲಿದೆ.

Advertisement

ಯೋಜನೆಯಡಿಯಲ್ಲಿ ಹಲವಾರು ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. ಮುಳವಾಡದಲ್ಲಿ 2690 ಎಚ್‌.ಪಿ.ಯ 3 ಮೋಟರ್‌ಗಳು ಪ್ರತಿ ಸೆಕೆಂಡಿಗೆ 19,500 ಲೀ. ನೀರು ಕಾಲುವೆಗೆ ಹರಿಸಲಿವೆ. ಮನಗೂಳಿ ಶಾಖಾ ಕಾಲುವೆಗೆ 2590 ಎಚ್‌.ಪಿ.ಯ 5 ಮೋಟರ್‌ ಗಳನ್ನು ಅಳವಡಿಸಲಾಗುತ್ತಿದ್ದು, ಮುಂದಿನ ವಾರ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಮೋಟಾರ್‌ಗಳು ಪ್ರತಿ ಸೆಕೆಂಡಿಗೆ 10,482 ಲೀ. ನೀರು ಹರಿಸಲಿದೆ. 32.16 ಕಿ.ಮೀ. ಉದ್ದವಿರುವ ಕಲಗುರ್ಕಿ, ಹಿಟ್ನಳ್ಳಿ, ತಳೇವಾಡ, ಮಸೂತಿ, ಕೂಡಗಿ, ಮಲಘಾಣ, ಮುತ್ತಗಿ, ಯರನಾಳ, ಹತ್ತರಕಿಹಾಳ, ಉಕ್ಕಲಿ, ಕತ್ನಳ್ಳಿ, ಹೆಗಡಿಹಾಳ, ಉತ್ನಾಳ ಗ್ರಾಮಗಳ 45,512 ಎಕರೆ ಭೂಮಿ ಹಾಗೂ ಮುಳವಾಡ ಗ್ರಾಮದ 5 ಸಾವಿರ ಎಕರೆ ಭೂಮಿ ನೀರಾವರಿಗೊಳಪಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next