ಭಟ್ಕಳ: ಕೋವಿಡ್ 19 ಪೀಡಿತರಾಗಿ ಭಟ್ಕಳ ಹಾಗೂ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದವರು ಪಟ್ಟಣದಲ್ಲಿ ಕ್ವಾರಂಟೈನ್‌ನಲ್ಲಿದ್ದು, ತಮ್ಮ ಅನುಭವವನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ. ವೈದ್ಯಕೀಯ ಸಿಬ್ಬಂದಿ ಸೇವೆ ಕೊಂಡಾಡಿದ್ದಲ್ಲದೆ, ಮಹಾಮಾರಿ ತಡೆಗೆ ಯಾರೂ ಮನೆಯಿಂದ ಹೊರಬರಬೇಡಿ ಎಂಬ ಸಂದೇಶ ನೀಡಿದ್ದಾರೆ.
ಚಿಕಿತ್ಸೆ ಕುರಿತು ಆತಂಕವಿತ್ತು: ಕೋವಿಡ್ 19 ಸೋಂಕಿದೆ ಎಂದ ತಕ್ಷಣ ಭಯವಾಗಿಲ್ಲ, ಆದರೆ ಮುಂದಿನ ಚಿಕಿತ್ಸೆ ಕುರಿತು ಆತಂಕವಿತ್ತು. ಆಸ್ಪತ್ರೆಯಲ್ಲಿರುವಷ್ಟೂ ದಿನ ಅತ್ಯಂತ ಚೆನ್ನಾಗಿ ನಡೆಸಿಕೊಳ್ಳಲಾಗಿದ್ದು ಉತ್ತಮ ಚಿಕಿತ್ಸೆ ನೀಡಲಾಗಿದೆ. ಕಾರವಾರದ ಪತಂಜಲಿ ಆಸ್ಪತ್ರೆ ವೈದ್ಯರು, ದಾದಿಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ 19 ದಿಂದ ದೂರ ಇರಲು ಪ್ರತಿಯೊಬ್ಬರೂ ಮನೆಯಲ್ಲಿಯೇ ಇರಬೇಕು. ದಿಲ್ಲಿಯಲ್ಲಿ ಮಹಿಳೆಯೊಬ್ಬಳು ಸೌದಿ ಅರೇಬಿಯಾದಿಂದ ಬಂದು 17 ಜನರಿಗೆ ಕೋವಿಡ್ 19 ಹಬ್ಬುವಂತೆ ಮಾಡಿದ್ದಾರೆ. ಆ ರೀತಿಯಲ್ಲಿ ಯಾವುದೇ ಕಾರಣಕ್ಕೂ ಆಗಬಾರದು ಎಂದು ಕೋವಿಡ್ 19 ಗೆದ್ದವರೊಬ್ಬರು ಹೇಳಿದರು.
ಭಯ ಬೇಡ: ಇನ್ನೊಬ್ಬ ಯುವಕ ಮಾತನಾಡಿ, ಕೋವಿಡ್ 19 ಯಾರಿಗೂ ಬರಬಾರದು. ಬಂದರೂ ಭಯ ಪಡದೇ ಧೈರ್ಯವಾಗಿರಬೇಕು. ಸ್ವಯಂ ತಪಾಸಣೆಗೆ ಒಳಗಾಗುವುದರಿಂದ ನಾವು ನಮ್ಮ ಕುಟುಂಬಕ್ಕೆ, ಸಮಾಜಕ್ಕೆ ಹರಡುವುದನ್ನು ತಪ್ಪಿಸಬಹುದು. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಹೋಗಬೇಕು ಎಂದರು.
ಜಿಲ್ಲಾಡಳಿತಕ್ಕೆ ಅಭಿನಂದನೆ: ಇನ್ನೋರ್ವ ಮಾತನಾಡಿ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ಎಲ್ಲರೂ ಗುಣಮುಖರಾಗಿದ್ದೇವೆ. ವೈದ್ಯರು ನಮ್ಮೊಂದಿಗೆ ತುಂಬಾ ಚೆನ್ನಾಗಿ ನಡೆದುಕೊಂಡಿದ್ದಾರೆ. ಗುಣಮುಖವಾಗಿ ಭಟ್ಕಳಕ್ಕೆ ಬಂದಾಗ ಇಲ್ಲಿನ ತಂಝೀಂ ಸಂಸ್ಥೆಯವರು ಉತ್ತಮ ಸಹಕಾರ ನೀಡಿದ್ದಾರೆ ಎಂದರಲ್ಲದೆ ಜಿಲ್ಲಾಡಳಿತಕ್ಕೂ ಅಭಿನಂದನೆ ಸಲ್ಲಿಸಿದರು.
ಎಷ್ಟು ಬೇಗ ಮನೆಗೆ ಬರುತ್ತೇವೆ ಎನ್ನುವ ತವಕ ಇತ್ತು. ಎರಡು ದಿನ ಭಟ್ಕಳ ಹಾಗೂ 16 ದಿನ ಕಾರವಾರದ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಲಭಿಸಿದೆ. ದುಬೈಯಿಂದ ಬಂದ ನಂತರ 10 ದಿನ ಮನೆಯಲ್ಲಿ ಯಾರೊಂದಿಗೂ ಬೆರೆಯದೆ ಬೇರೆಯೇ ಇರುತ್ತಿದ್ದೆ. ಇದರಿಂದಾಗಿ ಬೇರೆ ಯಾರಿಗೂ ಬಂದಿಲ್ಲ. ಒಂದೆರಡು ದಿನ ಸ್ವಲ್ಪ ಭಯವಾಗಿತ್ತು. ನಂತರ ಎಲ್ಲರೂ ಸರಿ ಹೋಯಿತು.
-ಕೋವಿಡ್ 19 ದಿಂದ ಗುಣಮುಖನಾದ ವ್ಯಕ್ತಿ