Advertisement

ಅನುಭವ ಮಂಟಪ, ಅಪ್ರಂಟಿಸ್‌!

11:50 AM Nov 28, 2017 | Team Udayavani |

ಯಾವ ಸಂದರ್ಶನಕ್ಕೆ ಹೋದ್ರೂ ಕೆಲಸ ಸಿಗ್ತಾನೇ ಇಲ್ಲ. ಎಲ್ಲ ಕಡೆಯೂ, ಐದು ವರ್ಷ- ಎಂಟು ವರ್ಷ ಎಕ್ಸ್‌ಪೀರಿಯನ್ಸ್‌ ಇದೆಯಾ ಅಂತ ಕೇಳ್ತಾರೆ. ಅನುಭವವಿದ್ದವರಿಗೆ ಮಾತ್ರ ನೌಕರಿ ಅಂತಾರೆ. ಕೆಲ್ಸ ಕೊಟ್ರೆ ತಾನೇ ಎಕ್ಸ್‌ಪೀರಿಯೆನ್ಸ್‌ ಸಿಗೋದು ಎಂಬುದು ನಿರುದ್ಯೋಗಿಗಳ ಅಳಲು. ಕೆಲವು ಕಂಪನಿಗಳು ಅನುಭವಿಗಳಿಗೆ  ಮಾತ್ರ ಉದ್ಯೋಗ ನೀಡುತ್ತವೆ. ಇನ್ನು ಕೆಲವು ಕಂಪನಿಗಳು ಪ್ರಾರಂಭಿಕ ಹಂತದ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ಹಾಗೂ ನೌಕರಿಯ ಅನುಭವ ನೀಡಲು ಅಪ್ರಂಟೀಸ್‌ ಹುದ್ದೆಗಳನ್ನು ಆಹ್ವಾನಿಸುತ್ತದೆ. ಪ್ರಸ್ತುತ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ (ಬಿಎಚ್‌ಇಎಲ್) ಬೆಂಗಳೂರು ವಿಭಾಗದಿಂದ 250 ಅಪ್ರಂಟೀಸ್‌ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ… 

Advertisement

“ಇಲ್ಲಿವರೆಗೆ ನಿನ್ನ ವಿದ್ಯಾಭ್ಯಾಸಕ್ಕೆ ನಾವು ಶ್ರಮಿಸಿದ್ದೀವಿ, ಇನ್ನು ನೀನು ನಿನ್ನ ಕಾಲಿನ ಮೇಲೆ ನಿಂತ್ಕೊಬೇಕು. ಯಾವುದಾದರೂ ಒಳ್ಳೆ ಕೆಲ್ಸ ಹುಡುಕಿಕೊಂಡ್ರೆ ನಮ್ಮ ಜವಾಬ್ದಾರಿನೂ ಕಡಿಮೆಯಾಗುತ್ತೆ ಕಣೋ’ ಎಂದು ಪೋಷಕರು ಹೇಳ್ಳೋದನ್ನು ಕೇಳಿದ್ದೇವೆ. ನೋಡು, ಡಿಗ್ರಿ ಮುಗಿಸಿ ನಾಲ್ಕು ವರ್ಷ ಆದ್ರೂ ಅವನಿಗೆ ಇನ್ನು ಕೆಲ್ಸಾನೇ ಸಿಕ್ಕಿಲ್ಲ ಎಂದು ಕೇಳಿಸುವಂತೆ ನೆರೆಹೊರೆಯವರು ಮೂದಲಿಸಿದ ದಿನಗಳೂ ನಿರುದ್ಯೋಗಿಗಳ ಅನುಭವದಲ್ಲಿರುತ್ತವೆ. ಆದರೆ, ಉತ್ತಮ ವಿದ್ಯಾಭ್ಯಾಸದ ನಂತರವೂ ಕೆಲವರಿಗೆ ಹುದ್ದೆಗಳು ದೊರೆಯದಿದ್ದಾಗ ಆಗುವ ನರಕಯಾತನೆ ಹೇಳಲು ಅಸಾಧ್ಯ.

ಉದ್ಯೋಗಕ್ಕೆ ಆಯ್ಕೆಯಾಗದೆ, ಪರೀಕ್ಷೆ, ಸಂದರ್ಶನಗಳಲ್ಲಿ ಅನುತ್ತೀರ್ಣನಾಗುತ್ತಿದ್ದೇನೆ ಎಂದಾಗ ಕುಗ್ಗಿ ಹೋಗುವ ಆತ್ಮವಿಶ್ವಾಸವನ್ನು ಮತ್ತಷ್ಟು ಕುಗ್ಗಿಸುವ ತಂತ್ರಗಳು ಸ್ನೇಹಿತರ ವಲಯದಿಂದಲೇ ನಡೆದು ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಇದೇ ಹುದ್ದೆ ಬೇಕು ಎಂದು ಹೇಳುವ ಮನಃಸ್ಥಿತಿಗಿಂತ, ಹುದ್ದೆಗೆ ಬೇಕಾದ ಸರಿಯಾದ ಅನುಭವ ನಮ್ಮದಾಗಬೇಕೆಂಬ ಕಿಚ್ಚು ಮನಸ್ಸಿನಲ್ಲಿರುತ್ತದೆ. ಅಂತಹ ಕಿಚ್ಚನ್ನು ತಣಿಸಲು ಕೆಲವು ವೇಳೆ ಅಪ್ರಂಟಿಸ್‌ ಹುದ್ದೆಗಳು ಕೈಹಿಡಿಯುತ್ತವೆ. ಪ್ರಸ್ತುತ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌(ಬಿಎಚ್‌ಇಎಲ್) ಬೆಂಗಳೂರು ವಿಭಾಗದಿಂದ ಒಂದು ವರ್ಷದ ಅವಧಿಗೆ 250 ಟೆಕ್ನೀಶಿಯನ್‌ಗಳಿಗಾಗಿ ಅಪ್ರಂಟಿಸ್‌ಗೆ ನೇರ ಸಂದರ್ಶಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ ಸಂದರ್ಶಗಳು ಪ್ರಾರಂಭವಾಗಿದ್ದು ಡಿ.16ರ ವರೆಗೂ ನಡೆಯಲಿದೆ.

ಯಾರಿಗೆ ಅವಕಾಶ?
ಬಿಎಚ್‌ಇಎಲ್ ನ ಬೆಂಗಳೂರು ವಿಭಾಗದಿಂದಲೇ 250 ಟೆಕ್ನೀಶಿಯನ್‌ ಅಪ್ರಂಟಿಸ್‌ಗಳಿಗೆ ಅವಕಾಶ ನೀಡಿರುವುದು ವಿಶೇಷವಾಗಿದ್ದು, ಎಲೆಕ್ಟ್ರಾನಿಕ್‌ ಅಂಡ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್ ಅಂಡ್‌ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌, ಮೆಕ್ಯಾನಿಕಲ್ಸ್ ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿಭಾಗಗಳಗೆ ತತ್ಸಂಬಂಧ ಡಿಪ್ಲೊಮಾ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅವಕಾಶ.

ವಯೋಮಿತಿ ಮತ್ತು ವಿದ್ಯಾರ್ಹತೆ
ಅಂಗೀಕೃತ ವಿಶ್ವ ವಿದ್ಯಾಲಯಗಳಲ್ಲಿ 2015ರ ಬಳಿಕ ವಿದ್ಯಾಭ್ಯಾಸ ಮುಗಿಸಿದ ಅಭ್ಯರ್ಥಿಗಳು ಅಪ್ರಂಟೀಸ್‌ಗೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 18ರಿಂದ ಗರಿಷ್ಠ 27ರವರೆಗೆ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಓಬಿಸಿ ಅಭ್ಯರ್ಥಿಗಳಿಗೆ 30 ಮತ್ತು ಪರಿಶಿಷ್ಠ ಅಭ್ಯರ್ಥಿಗಳಿಗೆ 32ವರ್ಷ, ಅಂಗವಿಕಲರಿಗೆ ಹತ್ತು ವರ್ಷಗಳವರೆಗೂ ವಯೋಮಿತಿಯಲ್ಲಿ ಸಡಿಲಿಕೆಯಿದೆ.

Advertisement

ಆಯ್ಕೆ ಹೇಗೆ?
ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರ, ಸೆಮಿಸ್ಟರ್‌ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ದೃಢೀಕರಿಸಿದ( ಅಟೆಸ್ಟೇಷನ್‌) ಎರಡು ಜೆರಾಕ್ಸ್ ಪ್ರತಿಗಳನ್ನು ಕೊಂಡೊಯ್ಯಬೇಕು. ನಂತರ ನೇರ ಸಂದರ್ಶನದಲ್ಲಿ ಭಾಗವಹಿಸಿ ಸಂವಾದ, ಪ್ರಶ್ನೋತ್ತರದಲ್ಲಿ ಯಶಸ್ವಿಯಾದರೆ ಹುದ್ದೆಗೆ ಆಯ್ಕೆ ಸುಲಭ. ಅದರೆ ಒಂದು ವರ್ಷದ ಅವಧಿಗೆ ಈ ಹುದ್ದೆ ಎಂಬುದನ್ನು ಅಭ್ಯರ್ಥಿಗಳು ನೆನಪಿನಲ್ಲಿಡಬೇಕು. ನೇರ ಸಂದರ್ಶನವು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರವೆರೆಗೆ ನಡೆಯಲಿದೆ. ಶನಿವಾರ ಬೆಳಗ್ಗೆ 9ರಿಂದ 11.30ರವೆರೆಗೂ ನಡೆಯಲಿದೆ.

ಟ್ರೈನಿಂಗ್‌
ಒಂದು ವರ್ಷದ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌, ಎಲೆಕ್ಟ್ರಿಕಲ್ ಅಂಡ್‌ ಎಲೆಕ್ಟ್ರಾನಿಕ್ಸ್ , ಮೆಕ್ಯಾನಿಕಲ್, ಕಂಪ್ಯೂಟರ್‌ ಸೈನ್ಸ್‌ ಸಂಬಂಧಿತ ವಿಭಾಗದಲ್ಲಿ ತತ್ಸಂಬಂಧ ಅಭ್ಯರ್ಥಿಗಳು ತರಬೇತಿ ಪಡೆಯಬಹುದಾಗಿದೆ. 250 ಹುದ್ದೆಗಳು ಬೆಂಗಳೂರಿನಲ್ಲಿ ಆಯ್ಕೆ ಮಾಡುವುದರಿಂದ ಅಭ್ಯರ್ಥಿಗೆ ಕನ್ನಡ ಬರಬೇಕು ಎಂಬುದು ಕಂಪನಿಯ ನಿರೀಕ್ಷೆ. ಟೆಕ್ನೀಷಿಯನ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫ‌ಂಡ್‌ ಅನ್ನೂ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ //www.bheledn.com/images/ pdf/TechApp.pdf  ಮತ್ತು www.bheledn.com ಸಂಪರ್ಕಿಸಿ. 

ಅನಂತನಾಗ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next