Advertisement

ಟೊಮೆಟೊ ಬೆಲೆ ಗಗನಕ್ಕೆ: ಗ್ರಾಹಕರ ಜೇಬಿಗೆ ಕತ್ತರಿ

01:01 PM May 22, 2019 | Suhan S |

ಗಜೇಂದ್ರಗಡ: ಪಟ್ಟಣದ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಕಳೆದೊಂದು ವಾರದಿಂದ ನಿರಂತರವಾಗಿ ಹೆಚ್ಚಾಗುತ್ತಿದೆ. ಕಳೆದ ಹಂಗಾಮಿನಲ್ಲಿ ಟೊಮೆಟೊ ಬೆಳೆದ ನೇಗಿಲ ಯೋಗಿಗೆ ಲಾಭವಾಗದೇ ಕಣ್ಣೀರಧಾರೆ ಹರಿಸಿತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಅದೇ ಟೊಮೆಟೊ ಬೆಲೆ ಮೂರಂಕಿ ತಲುಪುವ ಹಂತಕ್ಕೆ ಬಂದಿದೆ.

Advertisement

ಕಳೆದ ಏಪ್ರಿಲ್ ಮತ್ತು ಮೇ ತಿಂಗಳ ಮೊದಲ ವಾರದಲ್ಲಿ ಕೆಜಿಗೆ 30ರಿಂದ 40 ಇತ್ತು. ಆದರೀಗ ಟೊಮೆಟೊ ಬೆಲೆ ಹೆಚ್ಚಾಗುತ್ತಲೇ ಇದ್ದು, ಕೆಜಿಗೆ 60 ರಿಂದ 70ಕ್ಕೆ ಏರಿಕೆಯಾಗಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಕಂಗೆಡಿಸಿದೆ.

ಮಳೆ ಕೊರತೆಯೇ ಕಾರಣ: ಸತತ ಮಳೆಯ ಕೊರತೆಯಿಂದಾಗಿ ಬೋರ್‌ವೆಲ್ಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾದ ಪರಿಣಾಮ ಬೋರ್‌ವೆಲ್ ಆಶ್ರಿತ ಜಮೀನುಗಳಲ್ಲಿ ಬೆಳೆದ ಟೊಮೆಟೊ ಇಳುವರಿ ಕುಸಿದೆ. ಈ ಬಾರಿ ಮುಂಗಾರು ಪ್ರವೇಶದಲ್ಲಿ ವಿಳಂಬವಾಗಲಿದೆ ಎನ್ನುವ ಹವಾಮಾನ ಇಲಾಖೆಯ ವರದಿ ಅನ್ನದಾತರ ನಿದ್ದೆಗೆಡಿಸಿದೆ.

ಕೊಳ್ಳಲು ಗ್ರಾಹಕರ ಹಿಂದೇಟು:

ನೀರಿನ ಸಮಸ್ಯೆಯಿಂದ ಇಳುವರಿ ಕುಂಠಿತಗೊಂಡಿದೆ. ಬಿಸಿಲಿನ ಪ್ರತಾಪಕ್ಕೆ ಟೊಮೆಟೊ ಗಿಡಗಳು ಒಣಗುತ್ತಿವೆ. ಹೀಗಾಗಿ ಕಡಿಮೆ ದರದಲ್ಲಿ ತರಕಾರಿ ಸಿಗುವುದೇ ಕಷ್ಟ ಸಾಧ್ಯವಾಗಿದೆ. ಆದ್ದರಿಂದ ತರಕಾರಿ ಖರೀದಿಗೆ ಬರುವ ಗ್ರಾಹಕರು ಇಷ್ಟೊಂದು ದರವಾ ಎಂದು ಪ್ರಶ್ನಿಸುತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಟೊಮೆಟೊ ಸೇರಿ ಇನ್ನಿತರ ತರಕಾರಿ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

Advertisement

ಆಹಾರ ಪದಾರ್ಥಗಳ ತಯಾರಿಕೆಗೆ ಟೊಮೆಟೊ ಅಗತ್ಯವಾಗಿರುವುದರಿಂದ ಜನರು ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.

ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಸೂರ್ಯನ ಪ್ರಖರತೆ ಹೆಚ್ಚಾಗಿದೆ. ಜನಸಾಮಾನ್ಯರೇ ಬದುಕುವುದು ಕಷ್ಟಕರವಾದ ಸಂದರ್ಭದಲ್ಲಿ ತರಕಾರಿ ಬೆಳೆಯುವುದು ದುಸ್ತರವಾಗಿದೆ. ಹೀಗಾಗಿ ತರಕಾರಿ ಬೆಲೆಗಳು ಮಾರುಕಟ್ಟೆಯಲ್ಲಿ ಗಗನಕ್ಕೇರಿವೆ. -ಬಸಪ್ಪ
ಕುಮುಟಳ್ಳಿ, ರೈತಸಂತ್ಯಾಗ ಕಾಯಿಪಲ್ಲೆ ತರಾಕಂತ ಎರಡನೂರ ರೂಪಾಯಿ ಒಯ್ದರ ಕೈಚೀಲ ತುಂಬುವಷ್ಟು ಸಹ ಕಾಯಿಪಲ್ಲೆ ಆಗುತ್ತಿಲ್ಲ. ಅದ್ರಾಗ ಟೊಮೆಟೊ ರೇಟ್ ಮತ್ತಷ್ಟು ಹೆಚ್ಚಾಗೈತ್ರಿ. ಹೀಂಗಾದ್ರ ಜೀವನಾ ಸಾಗಿಸೋದು ಕಷ್ಟ ಐತ್ರಿ. -ಜಯದೇವಿ ರೇವಡಿ, ಮಹಿಳೆ
Advertisement

Udayavani is now on Telegram. Click here to join our channel and stay updated with the latest news.

Next