ಚೆನ್ನೈ: ಸೆಲೆಬ್ರಿಟಿಗಳ ಮದುವೆ ಅಂದರೆ ಅಲ್ಲಿ ಕೋಟಿಗಟ್ಟಲೆ ಖರ್ಚು ವೆಚ್ಚಗಳಿರುತ್ತವೆ. ಅದ್ಧೂರಿ ಮದುವೆ ಸೆಟ್, ಐಷಾರಾಮಿ ತಾಣ, ಊಟೋಪಚಾರ.. ಹೀಗೆ ವಿವಿಧ ರೀತಿಯ ಖರ್ಚು ವೆಚ್ಚಗಳಿರುತ್ತವೆ.
ದಕ್ಷಿಣದ ಮದುವೆ ಸಮಾರಂಭ ಅಂದರೆ ಅಲ್ಲಿ ಅದ್ಧೂರಿತನ ಮಾತ್ರವಲ್ಲದೆ, ವಿವಿಧ ಸಂಪ್ರದಾಯಗಳು ಕೂಡ ಇರುತ್ತದೆ. ಸೌತ್ ಸೂಪರ್ ಸ್ಟಾರ್ ಗಳಾದ ಅಲ್ಲು ಅರ್ಜುನ್, ಸೂರ್ಯ, ನಯನತಾರಾ.. ಅವರ ದುಬಾರಿ ಮದುವೆಯತ್ತ ಒಂದು ನೋಟ ಇಲ್ಲಿದೆ…
ಅಲ್ಲು ಅರ್ಜುನ್ -ಸ್ನೇಹಾ ರೆಡ್ಡಿ: ತೆಲುಗು ಸಿನಿಮಾರಂಗದ ಜನಪ್ರಿಯ ನಟರಲ್ಲಿ ಅಲ್ಲು ಅರ್ಜನ್ ಕೂಡ ಒಬ್ಬರು. ಅಲ್ಲು ಅರ್ಜುನ್ ಅವರಿಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಅಲ್ಲು – ಸ್ನೇಹಾ ಕೂಡ ಒಬ್ಬರು. ಇವರ ವಿವಾಹ 2010 ರ ನವೆಂಬರ್ 26 ರಂದು ಹೈದರಾಬಾದ್‌ನಲ್ಲಿರುವ ಶಿಲ್ಪ ಕಲಾ ವೇದಿಕೆಯಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಅಲ್ಲು ಮದುವೆಗೆ ದಕ್ಷಿಣ ಖ್ಯಾತ ಕಲಾವಿದರು ಆಗಮಿಸಿದ್ದರು. ಮದುವೆಯ ಆಮಂತ್ರಣ ಕಾರ್ಡ್ ಕೂಡ ದುಬಾರಿ ಆಗಿತ್ತು. ಈ ಮದುವೆ ಸಮಾರಂಭದಲ್ಲಿ 40 ಛಾಯಾಗ್ರಾಹಕರಿದ್ದರು.
ಈ ದಂಪತಿಗೆ ಅರ್ಹ ಮತ್ತು ಅಯಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ರಾಮ್ ಚರಣ್ -ಉಪಾಸನಾ ಕಾಮಿನೇನಿ:
ದಕ್ಷಿಣದ ಖ್ಯಾತ ನಟ ರಾಮ್ ಚರಣ್ ಅವರ ವಿವಾಹ ಕೂಡ ದುಬಾರಿಯಾಗಿ ನೆರವೇರಿತ್ತು. ಈ ವಿವಾಹ ಸಮಾರಂಭದಲ್ಲಿ ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಗಿತ್ತು. 14 ಜೂನ್ 2012 ರಂದು ನಡೆದ ಈ ವಿವಾಹ ಸಮಾರಂಭದಲ್ಲಿ ಮದುವೆ ಸಂಬಂಧಿತ ಪ್ರತಿ ಕಾರ್ಯಕ್ರಮಕ್ಕೆ 4 ಸಾವಿರಕ್ಕೂ ಹೆಚ್ಚಿನ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು. ರಾಜಕೀಯ, ವ್ಯಾಪಾರ ಮತ್ತು ಚಿತ್ರರಂಗದ ಪ್ರಮುಖರು ಮದುವೆಯಲ್ಲಿ ಭಾಗಿಯಾಗಿದ್ದರು.
ಈ ದಂಪತಿಗೆ ಕ್ಲಿನ್ ಕಾರಾ ಕೊನಿಡೇಲಾ ಎನ್ನುವ ಹೆಣ್ಣು ಮಗಳಿದ್ದಾಳೆ.
ಸೂರ್ಯ -ಜ್ಯೋತಿಕಾ: ಸೂರ್ಯ – ಜ್ಯೋತಿಕಾ ಪರಸ್ಪರ ಪ್ರೀತಿಸಿ ಮದುವೆಯಾದ ಜೋಡಿ. 11 ಸೆಪ್ಟೆಂಬರ್ 2006 ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಅದ್ಧೂರಿ ಮದುವೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಮದುವೆಗೆ ಜ್ಯೋತಿಕಾ 3 ಲಕ್ಷ ರೂ. ಮೌಲ್ಯದ ಉಡುಪನ್ನು ಧರಿಸಿದ್ದರು.
ಈ ದಂಪತಿಗೆ ದಿಯಾ, ದೇವ್ ಎನ್ನುವ ಮಕ್ಕಳಿದ್ದಾರೆ.
ಜೂ.ಎನ್ ಟಿಆರ್ – ಲಕ್ಷ್ಮಿ ರಾವ್ : ಸೌತ್ ಸ್ಟಾರ್ ಗಳಲ್ಲಿ ಅತ್ಯಂತ ದುಬಾರಿ ಮದುವೆಯಲ್ಲಿ ಜೂ.ಎನ್ ಟಿಆರ್ ಅವರ ಮದುವೆ ಕೂಡ ಒಂದು. ಇವರ ಮದುವೆ ಸಮಾರಂಭಕ್ಕೆ ಅದ್ಧೂರಿ ಸೆಟ್ ಗಳನ್ನು ಹಾಕಲಾಗಿತ್ತು. ಜೂನಿಯರ್ ಎನ್‌ಟಿಆರ್ ಅವರ ಪತ್ನಿ ಲಕ್ಷ್ಮಿ ರಾವ್ ಅವರ ಮದುವೆಯ ಸೀರೆಯು 1 ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು. ಮದುವೆ ಮಂಟಪದ ಅಲಂಕಾರಕ್ಕೆ 18 ಕೋಟಿ ರೂ. ಖರ್ಚು ಮಾಡಲಾಗಿತ್ತು. 300ಕ್ಕೂ ಹೆಚ್ಚು ಸದಸ್ಯರ ತಂಡ ಅವರ ಮದುವೆಯಲ್ಲಿ ಕೆಲಸ ಮಾಡಿತ್ತು.
ಅಭಯ್ ಮತ್ತು ಭಾರ್ಗವ್ ಎನ್ನುವ ಮಕ್ಕಳಿದ್ದಾರೆ.
ವಿಘ್ನೇಶ್ ಶಿವನ್ – ನಯನತಾರಾ: ಸೌತ್ ಸ್ಟಾರ್ ಗಳಲ್ಲಿ ನಡೆದ ಇತ್ತೀಚೆಗಿನ ಮದುವೆ ಸಮಾರಂಭ ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರ ಅವರದು. ಜೂನ್ 9, 2022 ರಂದು ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್‌ನಲ್ಲಿ ಇವರ ವಿವಾಹ ನೆರವೇರಿತ್ತು. ವಿಘ್ನೇಶ್ ಶಿವನ್ ಪತ್ನಿ ನಯನತಾರಾ ಅವರಿಗೆ 5 ಕೋಟಿ ರೂಪಾಯಿಯ ಉಂಗುರವನ್ನು ಹಾಕಿದ್ದರು. ಇದಲ್ಲದೆ ಮದುವೆಗಾಗಿ ನಯನತಾರಾ 25 ಲಕ್ಷ ರೂಪಾಯಿ ಮೌಲ್ಯದ ಸೀರೆಯನ್ನು ಧರಿಸಿದ್ದರು.
ಈ ದಂಪತಿಗೆ ಉಯಿರ್ ಮತ್ತು ಉಳಗಂ ಎನ್ನುವ ಅವಳಿ ಮಕ್ಕಳಿದ್ದಾರೆ.
ಈ ಸಮಾರಂಭದಲ್ಲಿ ನಟ ಶಾರುಖ್ ಖಾನ್, ಅಟ್ಲಿ, ಮಣಿರತ್ನಂ, ರಜನಿಕಾಂತ್ ಮತ್ತು ಕಾಲಿವುಡ್ ಚಿತ್ರರಂಗದ ಅನೇಕರ ಕಲಾವಿದರು ಭಾಗಿಯಾಗಿದ್ದರು.