ಧಾರವಾಡ: ಮುಂಗಾರು ವಿಳಂಬದಿಂದ ಬಿತ್ತನೆಗೆ ರೈತ ಸಮುದಾಯ ಹಿಂದೇಟು ಹಾಕುತ್ತಿರುವ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಈಗ ಹಸಿ ಮೆಣಸಿನಕಾಯಿ ಬೆಳೆದ ರೈತರು ಕೀಟಬಾಧೆಯಿಂದ ಕಂಗಾಲಾಗಿದ್ದಾರೆ. ಜೊತೆಗೆ ಮುಂದೆ ಹಸಿ ಹಾಗೂ ಒಣ ಮೆಣಸಿನಕಾಯಿ ಬೆಳೆಯಲು ಕಾಯುತ್ತಿರುವ ರೈತರೂ ಆತಂಕಕ್ಕೆ ಒಳಗಾಗಿದ್ದಾರೆ.
ಕ್ಷೀಣಿಸಿದ ಹಸಿ ಮೆಣಸಿನಕಾಯಿ: ಜಿಲ್ಲೆಯಲ್ಲಿ ವಾರ್ಷಿಕ 2 ಸಾವಿರ ಹೆಕ್ಟೇರ್‌ದಲ್ಲಿ ಹಸಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ನೀರಾವರಿ ವ್ಯವಸ್ಥೆ ಬಳಕೆ ಮಾಡಿ ಈವರೆಗೆ 340 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ರೈತರು ಬೋರ್‌ವೆಲ್ ನೆಚ್ಚಿಕೊಂಡಿದ್ದು, ಬೋರ್‌ವೆಲ್ಗಳಿಂದ ನೀರಿನ ಲಭ್ಯತೆ ಕಡಿಮೆ ಆದ ಕಾರಣ ಬಿತ್ತನೆ ಪ್ರಮಾಣದ ಮೇಲೆ ನೇರ ಹೊಡೆತ ಬೀಳುವಂತೆ ಮಾಡಿದೆ. ಸದ್ಯ ಬೆಳೆದು ನಿಂತು ಇಳುವರಿ ಸಮಯದಲ್ಲಿ ಕಂಡು ಬಂದಿರುವ ರೋಗ ಲಕ್ಷಣಗಳು ರೈತರ ಮೊಗದಲ್ಲಿ ಚಿಂತೆ ಮೂಡುವಂತೆ ಮಾಡಿದೆ. ಇನ್ನೂ ಜೂನ್ ತಿಂಗಳಲ್ಲಿ ಮಳೆಯಾಶ್ರಿತವಾಗಿ ಹಸಿ ಮೆಣಸಿನಕಾಯಿ ಬೆಳೆಯುವ ರೈತರು ಮಳೆಗಾಗಿ ಕಾಯುತ್ತಿದ್ದು, ಸದ್ಯಅವರಿಗೆ ಈಗ ರೋಗದ ಭೀತಿ ಇಲ್ಲ.
ಕೀಟಬಾಧೆ ಉಪಟಳ: 5-6 ತಿಂಗಳ ಅವಧಿಯ ಈ ಬೆಳೆಯನ್ನು ಜನವರಿಯಲ್ಲಿ ಬೆಳೆದಿದ್ದು, ಇನ್ನೂ ಒಂದೂವರೆ ತಿಂಗಳಲ್ಲಿ ಉತ್ತಮ ಇಳುವರಿ ನೀಡುತ್ತೆ ಎಂಬ ನಿರೀಕ್ಷೆಯಲ್ಲಿರುವ ರೈತರಲ್ಲಿ ಕೀಟಬಾಧೆ ಆತಂಕ ಹೆಚ್ಚಾಗಿದೆ. ಜಿಲ್ಲೆಯ ಅಲ್ಲಲ್ಲಿ ಈಗ ಎಲೆ ಮುಟುರ ರೋಗ ಕಾಣಿಸಿಕೊಂಡಿದ್ದು, ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಗಾಳಿ ಮೂಲಕವೇ ಹರಡುವ ಈ ರೋಗದಿಂದ ಮೆಣಸಿನಕಾಯಿ ಗಿಡದ ರಸವೇ ಮಾಯವಾಗಿ ಸಾಯುತ್ತದೆ. ಅದರಲ್ಲೂ ಹವಾಮಾನ ವೈಪರೀತ್ಯ, ಮಳೆ ಕ್ಷೀಣಿಸಿರುವ ಈಗಿನ ಮೋಡ ಕವಿದ ವಾತಾವರಣ ರೋಗ ಹರಡಲು ಪೂರಕವಾಗಿದೆ.
ಹತೋಟಿಗೆ ಕ್ರಮವುಂಟು: ಮಳೆ ಬಂದರೆ ಈ ರೋಗಕ್ಕೆ ಕಡಿವಾಣ ಬೀಳುತ್ತದೆಯೆಂದು ತೋಟಗಾರಿಕೆ ಇಲಾಖೆ ತಜ್ಞರು ಹೇಳುತ್ತಿದ್ದಾರೆ. ಆದರೆ ಎಷ್ಟೇ ಔಷಧಿ ಹೊಡೆದರೂ ಹತೋಟಿಗೆ ಬರುತ್ತಿಲ್ಲ ಎಂಬುದು ರೈತರ ಅಳಲು. ಪ್ರತಿ ಲೀಟರ್ ನೀರಿಗೆ ಕಾನ್ ಫಿಟಾರ್ ಔಷಧಿ 0.25 ಎಂಎಲ್ ಹಾಗೂ ಹೆರ್ಯಾಕೊನಾಟೋಲ್ ಔಷಧಿಯನ್ನು 1 ಎಂಎಲ್ ಸೇರಿಸಿ 1-2 ಸಲ ಸಿಂಪಡಿಸಿದರೆ ರೋಗ ಹತೋಟಿಗೆ ಬರಲಿದೆ. ಔಷಧಿ ಸಿಂಪಡಿಸಿದ ವಾರದ ನಂತರ ಎಡೆಕುಂಟಿ ಹೊಡೆದರೆ ಉತ್ತಮ ಫಲಿತಾಂಶ ಸಿಗಲಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರವೀಣ ಕಾಮಾಟಿ ‘ಉದಯವಾಣಿ’ಗೆ ತಿಳಿಸಿದ್ದಾರೆ.
Advertisement
ಜಿಲ್ಲೆಯಲ್ಲಿ ಈವರೆಗೆ 340 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿಯಿಂದ ಹಸಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದ್ದು, ಇನ್ನೇನು ಇಳುವರಿ ಕೈ ಸೇರುವ ಕಾಲ ಸನ್ನಿಹಿತದಲ್ಲಿದೆ. ಆದರೆ ಹವಾಮಾನ ವೈಪರೀತ್ಯ ಹಾಗೂ ಮಳೆ ಬಾರದೇ ಮೋಡ ಕವಿದ ವಾತರಣದಿಂದ ಈ ಬೆಳೆಗೆ ಕೀಟಬಾಧೆ ಶುರುವಾಗಿದೆ.
Related Articles
Advertisement
ಒಣ ಮೆಣಸಿನಕಾಯಿಗೂ ಆತಂಕ: ಜಿಲ್ಲೆಯಲ್ಲಿ ಕಳೆದ ಬಾರಿ 31,293 ಹೆಕ್ಟರ್ ಪ್ರದೇಶದಲ್ಲಿ ಮಳೆಯಾಶ್ರಿತ ಒಣ ಮೆಣಸಿನಕಾಯಿ ಬೆಳೆಯಲಾಗಿತ್ತು. ಕುಂದಗೋಳ ತಾಲೂಕಿನಲ್ಲಿಯೇ 14,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. 8-9 ತಿಂಗಳ ಅವಧಿಯಲ್ಲಿ ಇಳುವರಿ ನೀಡುವ ಒಣ ಮೆಣಸಿನಕಾಯಿ ಬಿತ್ತನೆ ಜುಲೈ ತಿಂಗಳಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಮುಂಗಾರಿನ ಉತ್ತಮ ಮಳೆ ಬೇಕಿದ್ದು, ರೈತರೂ ಮಳೆಗೆ ಕಾಯುತ್ತಿದ್ದಾರೆ. ನಿಗದಿತ ಪ್ರಮಾಣದ ಮಳೆ ಆಗದಿದ್ದರೆ ಒಣ ಮೆಣಸಿನಕಾಯಿ ಬಿತ್ತನೆ ಹಾಗೂ ಇಳುವರಿ ಮೇಲೂ ನೇರ ಪರಿಣಾಮ ಉಂಟಾಗಲಿದೆ.
ಎಂಟಿಆರ್ ಕಂಪನಿಗೂ ಬೇಕು ಜಿಲ್ಲೆಯ ಒಣ ಮೆಣಸಿನಕಾಯಿ
ಜಿಲ್ಲೆಯ ಒಣ ಮೆಣಸಿನಕಾಯಿಗೆ ಉತ್ತಮ ಬೇಡಿಕೆ ಇದ್ದು, ಕುಂದಗೋಳದ ಬ್ಯಾಡಗಿ ಮೆಣಸಿನಕಾಯಿಯ ಬಣ್ಣ, ಖಾರಕ್ಕೆ ಮನ ಸೋಲದವರಿಲ್ಲ. ಪ್ರತಿಷ್ಠಿತ ಎಂಟಿಆರ್ ಕಂಪನಿಯೇ ನೇರವಾಗಿ ರೈತರಲ್ಲಿ ಬಂದು ಒಣ ಮೆಣಸಿನಕಾಯಿ ಖರೀದಿ ಮಾಡುತ್ತಿದೆ. ತೋಟಗಾರಿಕೆ ಇಲಾಖೆ ಮುಂದಾತ್ವದಲ್ಲಿ ಕಳೆದ ವರ್ಷದಿಂದ ಇದು ಆರಂಭಗೊಂಡಿದೆ. ಕಳೆದ ಬಾರಿ ಎಂಟಿಆರ್ ಕಂಪನಿ ಜಿಲ್ಲೆಯ ರೈತ ಉತ್ಪಾದಕರ ಸಂಘದಿಂದ ಪ್ರತಿ ಕೆಜಿಗೆ 130 ರೂ.ದಂತೆ 45 ಲಕ್ಷ ರೂ. ಬೆಲೆಯ 30 ಟನ್‌ಗಳಷ್ಟು ಒಣ ಮೆಣಸಿನಕಾಯಿ ಖರೀದಿಸಿದ್ದು, ಈ ಸಲ 100 ಟನ್ ಖರೀದಿಸಲು ಕಂಪನಿ ಮುಂದೆ ಬಂದಿದೆ. ಆದರೆ ಮಳೆ ಕೊರತೆಯಿಂದ ಇಳುವರಿ ಕೊರತೆ ಜೊತೆಗೆ ಗುಣಮಟ್ಟದ ಮೇಲೂ ಹೊಡೆತ ಬಿದ್ದರೆ ರೈತ ಉತ್ಪಾದಕರ ಸಂಘದ 1 ಸಾವಿರ ಒಣ ಮೆಣಸಿನಕಾಯಿ ಬೆಳೆಯುವ ರೈತರಿಗೆ ಹೊಡೆತ ಬೀಳುವ ಲಕ್ಷಣಗಳಿವೆ.
ರೋಗ ಬಾಧೆಗೆ ತುತ್ತಾದ ಬೆಳೆಗೆ ವಿಮೆಯೂ ಇಲ್ಲ:
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಾರಿ ಮಾಡಿದ್ದು, ಅದು ಕಳೆದ ಬಾರಿ 100 ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬೆಳೆದ ಹೋಬಳಿಗಳಾದ ಅಮ್ಮಿನಬಾವಿ, ಧಾರವಾಡ, ಗರಗ, ಛಬ್ಬಿ ಹಾಗೂ ದುಮ್ಮವಾಡಗಳಿಗೆ ಈ ಸಲ ಅನ್ವಯಿಸಲಾಗಿದೆ. ಜೂ. 30 ರೊಳಗೆ ರೈತರು ವಿಮೆ ಅರ್ಜಿ ಹಾಕಲು ಅವಕಾಶ ಇದ್ದು, ಮುಂದೆ ಹವಾಮಾನ ವೈಪರೀತ್ಯದಿಂದ ಬೆಳೆಗೆ ಹಾನಿಯಾದರೆ ವಿಮೆ ದೊರಕಲಿದೆ. ಆದರೆ ನೀರಾವರಿ ಮೂಲಕ ಬೆಳೆದು ಈಗ ರೋಗಕ್ಕೆ ತುತ್ತಾಗಿರುವ ಬೆಳೆಗೆ ವಿಮೆಯೂ ಇಲ್ಲ. ಹೀಗಾಗಿ ಈ ರೈತರು ಇನ್ನಷ್ಟು ಸಂಕಷ್ಟ ಎದುರಿಸುವಂತಾಗಿದೆ.
•ಶಶಿಧರ್ ಬುದ್ನಿ