Advertisement

ಅಕ್ಕಡಿ ಕಾಳುಗಳ ಬೆಲೆ ಮೂರಂಕಿ ಸುತ್ತ

10:12 AM Jul 23, 2019 | Suhan S |

ಗಜೇಂದ್ರಗಡ: ಬೇಳೆ ಕಾಳುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Advertisement

ಕಳೆದ ಒಂದು ತಿಂಗಳಲ್ಲಿ ಬೇಳೆ ಕಾಳುಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳ ಆಗಿದ್ದು, ತೊಗರಿ, ಉದ್ದಿನ ಬೇಳೆ, ಚಣಗಿ ಬೇಳೆ, ಕಡಲೆ ಬೇಳೆ, ಹೆಸರು ಸೇರಿ ಮತ್ತಿತರ ಬೇಳೆ ಕಾಳುಗಳ ಬೆಲೆ ಗಗನಕ್ಕೇರಿದೆ. ಜನ ಬೆಲೆ ಕೇಳಿ ಬೆಚ್ಚಿ ಬೀಳುವಂತಾಗಿದೆ. ಜನಸಾಮಾನ್ಯರ ನೆಮ್ಮದಿ ಕದಡುತ್ತಿವೆ.

ತಿಂಗಳ ಹಿಂದೆ ಕೆ.ಜಿ ಒಂದಕ್ಕೆ 80 ರೂ. ಇದ್ದ ತೊಗರಿ ಬೇಳೆ ಈಗ 95ರೂ. ಆಗಿದೆ. ಕಡಲೆ ಬೆಳೆ 74 ರೂ., ಚಣಗಿ 96 ರೂ., ಶೇಂಗಾ ಕಾಳು 100 ರೂ., ಪುಟಾಣಿ 70 ರೂ., ಹೆಸರು 85 ರೂ. ಇದ್ದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.

ವರ್ಷದ ಹಿಂದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ಬಹುತೇಕರು ಹಣದುಬ್ಬರದತ್ತ ಬೊಟ್ಟು ಮಾಡಿದ್ದರು. ಹಣದುಬ್ಬರದಲ್ಲಿ ಇಳಿಕೆ ಕಂಡಿದೆಯಾದರೂ ಅಗತ್ಯ ವಸ್ತುಗಳ ಬೆಲೆ ಮಾತ್ರ ಇಳಿಮುಖವಾಗಿಲ್ಲ. ಬದಲು ಏರುತ್ತಲೇ ಇದೆ.

ಕಳೆದೆರೆಡು ತಿಂಗಳ ಹಿಂದೆ ಕ್ವಿಂಟಲ್ವೊಂದಕ್ಕೆ 8 ಸಾವಿರ ರೂ.ಬೆಲೆಯಿದ್ದ ತೊಗರಿ ಬೇಳೆ ಈಗ 9 ಸಾವಿರಕ್ಕೂ ಅಧಿಕ ಏರಿ ಗಗನ ಮುಖೀಯಾಗಿದೆ. ಕೆ.ಜಿಗೆ ಮೂರಂಕಿ ತಲುಪುತ್ತಿದೆ. ಜನಸಾಮಾನ್ಯರ ಪ್ರೋಟಿನ್‌ ಎಂದೇ ಪರಿಗಣಿತವಾದ ತೊಗರಿ ಬೇಳೆಯ ಬೆಲೆ ನಿಲುಕದ ರೀತಿಯಲ್ಲಿದೆ.

Advertisement

ಶಾಲೆಯಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಳೆಯನ್ನೇ ಕಡ್ಡಾಯವಾಗಿ ಬಳಸಬೇಕೆಂಬ ಕೇಂದ್ರದ ನಿರ್ದೇಶನ ತೊಗರಿ ಬೇಳೆಯ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎನ್ನುವುದು ವಾಣಿಜ್ಯ ತಜ್ಞರ ಮಾತು. ಇದೀಗ ಒಂದಾದ ಮೇಲೊಂದರಂತೆ ಹಬ್ಬಗಳು ಬರುತ್ತಿವೆ. ಎಲ್ಲ ಬೆಲೆಗಳು ತುಟ್ಟಿ, ಕೈಗೆಟುಕುವಂಥವು ಅನ್ನಿಸಿದರೂ ಸಾಲ ಶೂಲ ಮಾಡಿ ಖರೀದಿಸಿ ಹಬ್ಬ ಆಚರಿಸದೇ ವಿಧಿಯಿಲ್ಲ ಎಂದು ಗ್ರಾಹಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಒಂದೆಡೆ ಬೇಳೆ ಕಾಳುಗಳ ಚಿಲ್ಲರೆ ಮಾರಾಟ ದರವೂ ಹೆಚ್ಚಿದ್ದು, ಆಮದು ಬೆಲೆಯೂ ಅಧಿಕವಾಗಿದೆ. ಆದರೆ ಇದರ ಲಾಭ ಬೆಳೆಗಾರರಿಗೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ರೈತರು ಇತ್ತೀಚಿನ ದಿನಗಳಲ್ಲಿ ಕೃಷಿಗೆ ಒತ್ತು ನೀಡದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ.

ಆಗಸ್ಟ್‌ ತಿಂಗಳಿಂದ ಒಂದಾದ ಮೇಲೊಂದರಂತೆ ಹಬ್ಬಗಳು ಬರುತ್ತವೆ. ಆಹಾರ ಪದಾರ್ಥಗಳ ಬೆಲೆಗಳು ತುಟ್ಟಿಯಾಗುತ್ತಲೆ ಇವೆ. ಸಾಲ ಶೂಲ ಮಾಡಿ ದಿನಸಿ ಖರೀದಿಸಿ ಹಬ್ಬ ಆಚರಿಸದೇ ವಿಧಿಯಿಲ್ಲ. ಆದರೆ ಅಧಿಕಾರ ನಡೆಸುತ್ತಿರುವ ಸರ್ಕಾರಗಳು ಮಾತ್ರ ಬೆಲೆ ಏರಿಕೆ ಕಡಿವಾಣಕ್ಕೆ ಮುಂದಾಗುತ್ತಿಲ್ಲ. •ಸಿದ್ದು ಗೌಡರ, ಗ್ರಾಹಕ

ನಗರ-ಪಟ್ಟಣಗಳಿಗೆ ವಲಸೆ ಬರುವ ಕೃಷಿ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಬೇಸಾಯಕ್ಕೆ ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ. ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಅದನ್ನೇ ನೆಚ್ಚಿಕೊಂಡ ಬೇಸಾಯ ಸೋತು ಸೊರಗಿದೆ. ಹೀಗಾಗಿ ಬೆಲೆ ಏರಿಕೆ ಸಾಮಾನ್ಯವಾಗಿದೆ. •ಕೂಡ್ಲೆಪ್ಪ ಗುಡಿಮನಿ, ಪ್ರಗತಿಪರ ರೈತ.
•ಡಿ.ಜಿ ಮೋಮಿನ್‌
Advertisement

Udayavani is now on Telegram. Click here to join our channel and stay updated with the latest news.

Next