Advertisement

ಮಾರಾಟಕಿದ್ದ ನಿರ್ಬಂಧ ತೆರವು -ದರ ದುಬಾರಿ!

04:17 PM Apr 06, 2020 | Suhan S |

ಶಿವಮೊಗ್ಗ: ಚಿಕನ್‌ ಮತ್ತು ಮಾಂಸ ಮಾರಾಟಕ್ಕಿದ್ದ ನಿರ್ಬಂಧ ತೆರವು ಮಾಡಲಾಗಿದ್ದು, ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರ ಕೈ ಸುಡುತ್ತಿದೆ. ಲಾಕ್‌ಡೌನ್‌ಗೂ ಮುನ್ನ 100 ರೂ.ಇದ್ದ ಚಿಕನ್‌ ಕೆ.ಜಿಗೆ ಇಂದು 140-150 ರೂ. ಏರಿದೆ. ಕುರಿ ಮಾಂಸಕ್ಕೆ 400-500ರೂ. ಆಸುಪಾಸಿನಲ್ಲಿತ್ತು. ಆದ್ದರಿಂದ 600-700 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಚಿಕನ್‌, ಮಟನ್‌, ಮೀನು ಮಾರಾಟಕ್ಕೆ ಜಿಲ್ಲೆಯಲ್ಲಿ ಶುಕ್ರವಾರದಿಂದ ಅವಕಾಶ ಕಲ್ಪಿಸಲಾಗಿದ್ದು, ಶುಕ್ರವಾರ 130 ರೂ. ಗೆ ದೊರೆಯುತ್ತಿದ್ದ ಚಿಕನ್‌ ಶನಿವಾರ 140 ರೂ.ಗೆ ಮಾರಾಟವಾಗಿದೆ.

Advertisement

ಲಾಕ್‌ಡೌನ್‌ ಹಾಗೂ ಹಕ್ಕಿಜ್ವರ ಕಾರಣ ಏಕಾಏಕಿ ಮಾರ್ಕೆಟ್‌ ಬಂದ್‌ ಮಾಡಿದ ಕಾರಣ ಫಾರ್ಮ್ಗಳಲ್ಲಿದ್ದ ಕೋಳಿಗಳನ್ನು ಕೆಲವರು ಜೀವಂತ ಹೂತು ಹಾಕಿದ್ದರು. ಕೆಲವರು ಸಾಯಿಸಿ ಗುಂಡಿಗೆ ಹಾಕಿದ್ದರು. ಇನ್ನೂ ಕೆಲವರು ಸಿಕ್ಕಷ್ಟು ಸಿಗಲೆಂದು ಜನರಿಗೆ ಮಾರಾಟ ಮಾಡಿದ್ದರು. ಹೊಸ ಮರಿಗಳನ್ನು ಬಿಡಲು ಸಹ ಹಿಂದೇಟು ಹಾಕಿದ್ದರು. ಈಗ ಯಾವುದೇ ಚಿಕನ್‌ ಸ್ಟಾಲ್‌ ಗಳಲ್ಲಿ 2ಕೆ.ಜಿ.ಗಿಂತ ದೊಡ್ಡ ಕೋಳಿಗಳು ಸಿಗುವುದು ಕಷ್ಟವಾಗಿದ್ದು, ಫಾರ್ಮ್ಗಳಲ್ಲಿ ಅಳಿದುಳಿದ ಕೋಳಿಗಳೇ ಸರಬರಾಜಾಗುತ್ತಿವೆ. ಹೀಗಾಗಿ, ದರ ಕೂಡ ಏರಿಕೆಯಾಗಿದೆ ಎನ್ನುತ್ತಾರೆ ಮಾರಾಟಗಾರರು.

ಮಾಂಸ ಖರೀದಿಗೆ ಬೇಡಿಕೆ ಇಲ್ಲದಿದ್ದರೂಎಲ್ಲ ಕಡೆ 600 ರೂ.ಗಿಂತ ಹೆಚ್ಚು ಮಾರಾಟ ಮಾಡಲಾಗುತ್ತಿದೆ. ಜಾತ್ರೆ ಸಮಯದಲ್ಲೂ ಇಷ್ಟೊಂದು ದರ ಏರಿಕೆಯಾಗಿರಲಿಲ್ಲ. ಕೆಲ ಮಾರಾಟಗಾರರು 15 ದಿನಗಳ ನಷ್ಟವನ್ನು ಒಂದೇ ಬಾರಿಗೆ ಬಾಚಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಇನ್ನು ಮಾಂಸಕ್ಕೆ ಬೇಕಾದ ಕುರಿ, ಮೇಕೆಗಳು ದಾವಣಗೆರೆ, ಚಿತ್ರದುರ್ಗದಂಥ ಜಿಲ್ಲೆಗಳಿಂದ ಬರಬೇಕಿದೆ. ಸರಕು ವಾಹನಗಳ ಓಡಾಟಕ್ಕೆ ಮುಕ್ತ ಅವಕಾಶ ಇದ್ದರೂ ಮಾರಾಟಗಾರರು ನೆಪ ಹೇಳುತ್ತಿದ್ದಾರೆ ಎನ್ನಲಾಗಿದೆ.

ತರಕಾರಿ ಕೂಡ ದುಬಾರಿ :  ಎಪಿಎಂಸಿಯಲ್ಲಿ ಖರೀದಿ ಮಾಡಿ ತಳ್ಳುಗಾಡಿಗಳಲ್ಲಿ ಮಾರಾಟ ಮಾಡುವ ವರ್ತಕರು ದುಬಾರಿ ದರಕ್ಕೆಮಾರುತ್ತಿರುವ ಆರೋಪಗಳು ಕೇಳಿ ಬಂದಿವೆ. ಹೋಲ್‌ಸೆಲ್‌ ಮಾರಾಟ ದರ ಮಾತ್ರ ಎಪಿಎಂಸಿಯಿಂದ ಒದಗಿಸಲಾಗುತ್ತಿದೆ. ಮಾರಾಟ ಮಾಡುವ ಗಾಡಿಗಳಲ್ಲಿ ದರಪಟ್ಟಿ ಹಾಕಲೇಬೇಕೆಂಬ ನಿಯಮವಿಲ್ಲ. ಇದು ಕೆಲ ವರ್ತಕರಿಗೆ ವರದಾನವಾಗಿದೆ. ಮನಸ್ಸಿಗೆ ಬಂದ ದರಕ್ಕೆ ಮಾರುತ್ತಿದ್ದಾರೆ. ಕೆಲಸ, ಸಂಬಳ ಇಲ್ಲದೇ ಪರದಾಡುತ್ತಿರುವ ಮಧ್ಯಮ, ಬಡ ವರ್ಗದ ಜನರು ಇದರಿಂದ ಹೈರಾಣಾಗಿದ್ದಾರೆ.

 

Advertisement

ಹಾಪ್‌ಕಾಮ್ಸ್‌ ಬೆಸ್ಟ್‌ :  ಹಾಪ್‌ಕಾಮ್ಸ್‌ನಿಂದ ವ್ಯವಸ್ಥೆ ಮಾಡಿರುವ ಲಗೇಜ್‌ ಆಟೋಗಳಲ್ಲಿ ಹಣ್ಣು, ತರಕಾರಿ ಸಿಗುತ್ತಿದೆ. ರೇಟ್‌ಕಾರ್ಡ್‌ ಕೂಡ ಅಳವಡಿಸಲಾಗುತ್ತಿದೆ. ಎಪಿಎಂಸಿ ಹಾಗೂ ಹಾಪ್‌ಕಾಮ್ಸ್‌ಗಳಲ್ಲಿ ನಿಗದಿ ಮಾಡುವ ದರದಲ್ಲೇ ಮಾರಲು ಸೂಚನೆ ನೀಡಲಾಗಿದೆ. ಅನೇಕ ಗ್ರಾಹಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನಗರದ ಎಲ್ಲ 35 ವಾರ್ಡ್ ಗಳಿಗೆ ಇದನ್ನು ಗಾಡಿಗಳನ್ನು ಬಿಡಲಾಗಿದೆ. ಜತೆಗೆ 12 ವಾರ್ಡ್‌ಗಳಲ್ಲಿ ಮಳಿಗೆಗಳು ಇವೆ. ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅವರು ಹಾಪ್‌ಕಾಮ್ಸ್‌ ಮ್ಯಾನೇಜರ್‌ಗೆ ದೂರು ನೀಡಬಹುದು. ಮೊ. 944868731.

ಬಾಳೆಹಣ್ಣು ದುಬಾರಿ ಇಲ್ಲ :  ಬೇರೆ ಜಿಲ್ಲೆಗಳಿಗೆ ಹೋಗಬೇಕಿದ್ದ ಬಾಳೆಹಣ್ಣು ಸಂಚಾರ ಸಮಸ್ಯೆಯಿಂದ ಇಲ್ಲೇ ಉಳಿದ ಪರಿಣಾಮ ಲಾಕ್‌ಡೌನ್‌ಗೂ ಮುಂಚೆ ಇದ್ದ ದರದಲ್ಲೇ ಸಿಗುತ್ತಿದೆ. ಹೋಲ್‌ಸೇಲ್‌ ದರ ಕೆ.ಜಿಗೆ 15ರೂ ಇದ್ದರೆ, ಚಿಲ್ಲರೆ ದರ 30 ರೂ. ಇದೆ.

 

ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ತರಕಾರಿ ವ್ಯಾಪಾರಸ್ಥರಿಗೆ, ಮಾಂಸ, ಕೋಳಿ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಅಂತಹ ಪ್ರಕರಣ ಕಂಡು ಬಂದರೆ ಸ್ಥಳೀಯ ಪೊಲೀಸರಿಗೆ ದೂರು ನೀಡಬಹುದು.  ಚಿದಾನಂದ ವಟಾರೆ, ಕಮೀಷನರ್‌, ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next