ಬಾಗಲಕೋಟೆ: ಇಲ್ಲಿನ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಜಿಪಂ ಅನುದಾನದಲ್ಲಿ ಖರೀದಿಸಿದ ಹೊಸ ಮೊಬೈಲ್ ಬಗ್ಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಜಿಲ್ಲಾ ಪಂಚಾಯತ್ ಕಚೇರಿ ಖರ್ಚು-ವೆಚ್ಚ ನಿರ್ವಹಣೆಗಿರುವ ಅನುದಾನದಲ್ಲಿ ರೂ. 85 ಸಾವಿರ ಖರ್ಚು ಮಾಡಿ ಹೊಸ ಮೊಬೈಲ್ ಖರೀದಿಸಿದ ವಿಷಯ ವಿವಾದ ರೂಪ ಪಡೆಯಿತು.
ಸಿಇಒ ಮಾನಕರ ಅವರು 85 ಸಾವಿರ ಮೊತ್ತದ ಮೊಬೈಲ್ ಖರೀದಿಸಲು ಜಿಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದಿಲ್ಲ. ಜನರ ಕೆಲಸ ಹೇಳಿದಾಗ ನಮಗೆ ಕಾನೂನು ಪಾಠ ಹೇಳುವ ಜಿಪಂ ಸಿಇಒ ಯಾರ ಅನುಮತಿ ಪಡೆದು 85 ಸಾವಿರ ಮೊತ್ತದ ಮೊಬೈಲ್ ಖರೀದಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ಸದಸ್ಯ ಹೂವಪ್ಪ ರಾಠೊಡ ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲೆಯಲ್ಲಿ ಬರ ಬಿದ್ದಿದೆ. ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಸಿಇಒ ಅವರು ಹೊಸ ಮೊಬೈಲ್‌ಗೆ ಸಾವಿರಾರು ಖರ್ಚು ಮಾಡಿರುವುದು ಸರಿಯೇ? ಜಿಪಂ ನಿಯಮಾವಳಿಯಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ನಾನು ಮೊಬೈಲ್ ನನ್ನ ಸ್ವಂತಕ್ಕೆ ತೆಗೆದುಕೊಂಡಿಲ್ಲ. ಇದು ಸರ್ಕಾರದ ಆಸ್ತಿ. ನಾನು ವರ್ಗವಾಗಿ ಹೋದಾಗ ಈ ಮೊಬೈಲ್ ಮುಂದೆ ಬರುವ ಸಿಇಒ ಬಳಸುತ್ತಾರೆ. ಅಲ್ಲದೇ ಜಿಪಂನ ಕಚೇರಿ ಖರ್ಚು-ವೆಚ್ಚದಡಿ ಸಾಮಗ್ರಿ ಖರೀದಿಗೆ ಅವಕಾಶವಿದೆ. ಒಟ್ಟಾರೆ ಅನುದಾನಕ್ಕೆ ಜಿಪಂನಲ್ಲೇ ಅನುಮೋದನೆ ದೊರೆತಿದೆ. ಹೀಗಾಗಿ ಮೊಬೈಲ್ ಖರೀದಿಸಲಾಗಿದೆ ಇದರಲ್ಲಿ ನಿಯಮ ಉಲ್ಲಂ ಸಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳು ತಮ್ಮ ಕಚೇರಿ ಖರ್ಚು-ವೆಚ್ಚ ಹಾಗೂ ಇತರೆ ಸಾಮಗ್ರಿ ಖರೀದಿಗೆ ಜಿಪಂ ಸಾಮಾನ್ಯಸಭೆಯಲ್ಲಿ ಅನುಮೋದನೆ ಪಡೆಯಬೇಕು ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೂಚಿಸಿದರು. ಈ ವಿಷಯವಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿಸಿ ಬಿಸಿ ಚರ್ಚೆ ನಡೆಯಿತು.