Advertisement

Bagalkot Ticket ಬದಲಿಸಲು 2 ದಿನ ಗಡುವು ನೀಡಿದ ಕಾಶಪ್ಪನವರ್‌

11:36 PM Mar 22, 2024 | Team Udayavani |

ಬಾಗಲಕೋಟೆ: ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷದೊಳಗಿನ ಶಿಸ್ತಿನ ಬಗ್ಗೆ ನಾನು ಯಾರಿಂದಲೂ ಕಲಿಯಬೇಕಿಲ್ಲ. ನಮ್ಮ ಪಕ್ಷದ ಹಿರಿಯರ ಮೇಲೆ ನನಗೆ ನಂಬಿಕೆ ಇದೆ. ಐದು ವರ್ಷ ಪಕ್ಷಕ್ಕಾಗಿ ದುಡಿದವರ ಹೆಸರನ್ನೇ ಎಐಸಿಸಿಗೆ ಕಳುಹಿಸಿಲ್ಲ. ಇದು ಕೇವಲ ಬಾಗಲಕೋಟೆ ಕ್ಷೇತ್ರದ ಸ್ವಾಭಿಮಾನಕ್ಕೆ ಧಕ್ಕೆಯಾಗಿಲ್ಲ. 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿರುವ ಕಾಶಪ್ಪನವರ್‌ ಕುಟುಂಬದ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಹೈಕಮಾಂಡ್‌ ಎರಡು ದಿನಗಳಲ್ಲಿ ಟಿಕೆಟ್‌ ಬದಲಿಸಬೇಕು. ಇಲ್ಲದಿದ್ದರೆ ನಾನು ನನ್ನ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ ಎಂದು ಹುನಗುಂದ ಶಾಸಕ, ಕರ್ನಾಟಕ ವೀರಶೈವ ಲಿಂಗಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಹೇಳಿದ್ದಾರೆ.

Advertisement

ಬಾಗಲಕೋಟೆಯ‌ಲ್ಲಿ ವೀಣಾ ಕಾಶಪ್ಪನವರ್‌ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾಭಿಮಾನಿ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇತರ ಶಾಸಕರೇ ಬೆಂಬಲ ಕೊಡುತ್ತಿಲ್ಲ. ಅಂತಹ ವಿರೋಧದ ಮಧ್ಯೆ ಗೆದ್ದು ಬರುವ ತಾಕತ್ತು ಇದೆಯಾ ಎಂದು ವಿಜಯಪುರದವರೊಬ್ಬರು ಪ್ರಶ್ನೆ ಮಾಡಿದ್ದಾರೆ.

ನಮ್ಮ ತಾಕತ್ತು ಏನೆಂಬುದು ನನಗೆ ಗೊತ್ತಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ 135 ಸ್ಥಾನ ಗೆಲ್ಲಲು ನನ್ನ ಪಾತ್ರವೂ ಇದೆ. 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಯಾರು ಬಂದರು, ಯಾರು ಹೋದರು ಎಲ್ಲವನ್ನೂ ನೋಡಿದ್ದೇನೆ. ನನಗೂ ಇಡೀ ರಾಜ್ಯವನ್ನೇ ಒಂದು ಕೈ ನೋಡೋಣ (ಸಿಎಂ ಆಗುವ ಕನಸು) ಎಂಬ ಆಲೋಚನೆ ಇದೆ ಎಂದರು.

ಪಕ್ಷನಿಷ್ಠೆ ಬಗ್ಗೆ ಮಾತನಾಡುವ ಸಚಿವ ಶಿವಾನಂದ ಪಾಟೀಲ್‌ ಕುಟುಂಬದವರು ಯಾವ ಯಾವ ಪಕ್ಷದಲ್ಲಿದ್ದಾರೆ. ನೀವು ಯಾವಾಗ ಕಾಂಗ್ರೆಸ್‌ಗೆ ಬಂದಿದ್ದೀರಿ. ನೀವು ಪಕ್ಷಕ್ಕೆ ಬರುವ ಮೊದಲೇ ನಮ್ಮ ತಂದೆ ಶಾಸಕರು, ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ನಿಮ್ಮಿಂದ ಪಕ್ಷದ ಬಗ್ಗೆ ತಿಳಿದುಕೊಳ್ಳಬೇಕಿಲ್ಲ ಎಂದರು.

ನಮ್ಮ ಪಕ್ಷದ ಹಿರಿಯರ ಮೇಲೆ ನನಗೆ ವಿಶ್ವಾಸವಿದೆ. ಯಾರದೋ ಬೆದರಿಕೆ ಅಥವಾ ಆಮಿಷಕ್ಕೆ ಬಗ್ಗದೆ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇಲ್ಲದಿದ್ದರೆ ಎರಡು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ.
– ವಿಜಯಾನಂದ ಕಾಶಪ್ಪನವರ್‌, ಕಾಂಗ್ರೆಸ್‌ ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next