ವಾಡಿ: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಬಿಜೆಪಿ ಸರ್ಕಾರ ಬೆಲೆ ಏರಿಕೆಯ ಬರೆ ನೀಡಿ ಗಾಯಗೊಳಿಸಿದೆ. ಜನದ್ರೋಹಿ ಆಡಳಿತದಿಂದಾಗಿ ಉದ್ಯೋಗ ಗಗನ ಕುಸುಮವಾಗಿದ್ದು, ಆಹಾರ ಮತ್ತು ಔಷಧಗಳ ದರ ದುಬಾರಿಯಾಗಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ನಾಯಕಿ ವಿ.ನಾಗಮ್ಮಾಳ್ ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಸ್ಥಳೀಯ ಸಮಿತಿ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಅಧ್ಯಯನ ಶಿಬಿರದಲ್ಲಿ “ಮಾನವ ಸಮಾಜ ಬೆಳೆದು ಬಂದ ದಾರಿ ಮತ್ತು ವೈಜ್ಞಾನಿಕ ದೃಷ್ಟಿಕೋನ’ ವಿಷಯ ಕುರಿತು ಅವರು ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಅತೃಪ್ತಿ ಹೊರ ಹಾಕುತ್ತಿದ್ದಾರೆ. ಬಹುಸಂಖ್ಯೆಯಲ್ಲಿರುವ ಬಡವರು ಹಸಿವಿನಿಂದ ನರಳುತ್ತಿದ್ದಾರೆ. ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ರೈತರು ಸಾಲದ ಸುಳಿಗೆ ಸಿಲುಕಿ ಕಂಗಾಲಾಗಿದ್ದಾರೆ. ಉದ್ಯೋಗಗಳ ಕಡಿತದಿಂದ ಕೂಲಿ ಕಾರ್ಮಿಕರು ದಿಕ್ಕೆಟ್ಟಿದ್ದಾರೆ. ಮಹಿಳೆಯರು ವಿವಿಧ ರೀತಿಯ ದೌರ್ಜನ್ಯ ದಬ್ಟಾಳಿಕೆಗಳಿಗೆ ಗುರಿಯಾಗುತ್ತಿದ್ದಾರೆ. ನೊಂದ ಜನಗಳು ತಿರುಗಿ ಬಿದ್ದರೆ ಉಳಿಗಾಲವಿಲ್ಲ ಎಂಬ ಕಾರಣಕ್ಕೆ ಆಳುವವರು ಧರ್ಮಾಭೀಮಾನ, ಜಾತಿ ಮತ್ತು ಭಾಷೆಯ ತಿಕ್ಕಾಟಗಳನ್ನು ಎದುರಿಗಿಡುತ್ತಿದ್ದಾರೆ. ನಾವುಗಳು ಇನ್ನೂ ಮೌನವಹಿಸಿದರೆ ಮತ್ತಷ್ಟು ಕೆಟ್ಟ ದಿನಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್‌ಯುಸಿಐ ನಗರ ಸಮಿತಿ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ. ಮಾತನಾಡಿ, ಮಾಕ್ಸ್‌ವಾದ ಸಮಾಜದ ಬದಲಾವಣೆಗೆ ಹೇಗೆ ಪೂರಕ ಎಂಬುದನ್ನು ವೈಜ್ಞಾನಿಕವಾಗಿ ಯೋಚಿಸುವ ಕಾಲಘಟ್ಟ ನಮ್ಮೆದುರಿಗಿದೆ. ಮಾನವ ಸಮಾಜದ ಬೆಳವಣಿಗೆಯನ್ನು ಭಾವನಾತ್ಮಕ ದೃಷ್ಟಿಕೋನದಿಂದ ನೋಡಿದರೆ ಅರ್ಥವಾಗುವುದಿಲ್ಲ. ಕಾರ್ಲ್ ಮಾರ್ಕ್ಸ್ ಅವರ ಸಿದ್ಧಾಂತದಡಿ ಇದನ್ನು ನೋಡಬೇಕು. ಸಮಾಜವನ್ನು ಹಾಳು ಮಾಡಿದ ಖಾಸಗಿ ಆಸ್ತಿ ಮನೋಭಾವ ಸಮಾಜವಾದ ವ್ಯವಸ್ಥೆ ಸ್ಥಾಪನೆಗೆ ತೊಡಕಾಗಿದೆ ಎಂದು ವಿಷಾದಿಸಿದರು.
ಎರಡನೇ ಗೋಷ್ಠಿಯಲ್ಲಿ ಪ್ರಸಕ್ತ ರಾಜಕೀಯ ವ್ಯವಸ್ಥೆಯ ಕುರಿತು ಮಾತನಾಡಿದ ಎಸ್ ಯುಸಿಐ ರಾಯಚೂರು ಜಿಲ್ಲಾ ಕಾರ್ಯದರ್ಶಿ ಡಾ|ಚಂದ್ರಗಿರೀಶ, ಉಳಿಗಮಾನ್ಯ ವ್ಯವಸ್ಥೆ ಗುಲಾಮಗಿರಿಯನ್ನು ಪೋಷಿಸಿ ಶೋಷಿಸಿದೆ. ಈಗ ಸ್ವಾತಂತ್ರ್ಯ ಭಾರತದಲ್ಲಿ ಜಾರಿಯಲ್ಲಿರುವ ಬಂಡವಾಳಶಾಹಿ ವ್ಯವಸ್ಥೆ ಜನರನ್ನು ಉಸಿರುಗಟ್ಟಿಸುತ್ತಿದೆ. ಸಾವಿರಾರು ಬಿಲಿಯನ್ ವರ್ಷಗಳಿಂದ ಸಮಾಜ ಹಂತಹಂತವಾಗಿ ಬದಲಾಗುತ್ತಾ ಬಂದಿದೆ. ಇಂದಿನ ಈ ಶೋಷಕ ಬಂಡವಾಳಶಾಹಿ ವ್ಯವಸ್ಥೆಯೂ ಬದಲಾಗುತ್ತದೆ. ಇದರ ಮುಂದೊರೆದ ಸಮಾಜವೇ ಸಮಾಜವಾದ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಇದು ವೈಜ್ಞಾನಿಕ ನಿಯಮವಾಗಿದ್ದು, ಮಾರ್ಕ್ಸ್ ಇದನ್ನು ಪ್ರತಿಪಾದಿಸಿದ್ದಾರೆ. ಕ್ರಾಂತಿ ಪ್ರವಾಹದ ಅಲೆಗಳಂತೆ ಆಗಾಗ ಅಪ್ಪಳಿಸಿ ಹಿಂದಕ್ಕೆ ಹೋಗುತ್ತಿದೆ. ಅದನ್ನು ನೆರವೇರಿಸಲು ನಾವು ಜನರ ಎದೆಗಳಲ್ಲಿ ಹೋರಾಟದ ಬೀಜಗಳನ್ನು ಬಿತ್ತಬೇಕಷ್ಟೆ ಎಂದರು.
ಮಲ್ಲಿನಾಥ ಹುಂಡೇಕಲ್, ಗುಂಡಣ್ಣ ಕುಂಬಾರ, ಶರಣು ಹೇರೂರ, ವೆಂಕಟೇಶ ದೇವದುರ್ಗಾ, ಗೋವಿಂದ ಯಳವಾರ, ವಿಠ್ಠಲ ರಾಠೊಡ, ಗೌತಮ ಪರತೂರಕರ, ಅರುಣ ಹಿರೇಬಾನರ್, ಶಿವುಕುಮಾರ ಆಂದೋಲಾ, ಮಲ್ಲಣ್ಣ ದಂಡಬಾ, ಮಲ್ಲಿಕಾರ್ಜುನ ಗಂದಿ, ಗೋದಾವರಿ, ಪದ್ಮರೇಖಾ, ಶರಣಮ್ಮ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.