ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಂಗಡಣೆ ಮಾಡುವಲ್ಲಿ ಲೋಪ, ಕಸ ಎಲ್ಲೆಂದರಲ್ಲಿ ಎಸೆಯುವವರ ಮೇಲೆ ದಂಡ ವಿಧಿಸುತ್ತಿರುವ ಮಾರ್ಷಲ್‌ಗಳು ನಿಯಮ ಮೀರಿ ದಂಡ ವಿಧಿಸುತ್ತಿರುವ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು, ಕಸ ವಿಂಗಡಣೆ ಮಾಡದಿರುವುದು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರ ಮೇಲೆ ಮಾರ್ಷಲ್‌ಗಳು ದಂಡ ವಿಧಿಸುವ ಅಧಿಕಾರ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರ್ಷಲ್‌ಗಳು ಬೈಲಾದ ನಿಯಮಗಳಿಗಿಂತಲೂ ಹೆಚ್ಚು ದಂಡ ವಿಧಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
2 ಸಾವಿರ ವಿಧಿಸುವ ಜಾಗದಲ್ಲಿ 2,500 ರೂ. ದಂಡ: ಕಸ ವಿಂಗಡಣೆ ಮಾಡದೆ ಹಸಿಕಸ ಹಾಗೂ ಒಣಕಸವನ್ನು ಸೇರಿಸಿ ನೀಡಿದರೆ, ಬಿಬಿಎಂಪಿ ಕಸ ನಿರ್ವಹಣೆ ಬೈಲಾ -2019ರ ಅನ್ವಯ ಕಸ ವಿಂಗಡಣೆ ಮಾಡದೆ ಇದ್ದರೆ, ಮೊದಲ ಬಾರಿ ಒಂದು ಸಾವಿರ ರೂ. ಹಾಗೂ ಎರಡನೇ ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಎರಡು ಸಾವಿರ ದಂಡ ವಿಧಿಸುವ ಅವಕಾಶ ಇದೆ. ಆದರೆ, ಮಾರ್ಷಲ್‌ಗಳು ಬೇರ್ಪಡಿಸಿದ ತ್ಯಾಜ್ಯ ಸಂಗ್ರಹಿಸಲು ( ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಮಾವೇಶ) ಕಾಲಂನ ಅಡಿ ದಂಡ ವಿಧಿಸುತ್ತಿದ್ದಾರೆ ಎನ್ನಲಾಗಿದೆ.
ಇದೇ ರೀತಿ ಪ್ಲಾಸ್ಟಿಕ್ ವಸ್ತು, ಬಯೋ ಮೆಡಿಕಲ್ ತ್ಯಾಜ್ಯ ಹಾಗೂ ಧೂಮಪಾನ ಮಾಡುವುದಕ್ಕೂ ದಂಡ ವಿಧಿಸಲಾಗುತ್ತಿದೆ. ಮಾರ್ಷಲ್‌ಗಳಿಗೆ ಈ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ದಂಡ ವಿಧಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ, ಈ ರೀತಿ ತಪ್ಪುಗಳಾಗುತ್ತಿವೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಪರಿಶೀಲನೆ ಮಾಡಿ ಕ್ರಮ; ರಂದೀಪ್: ಎಲ್ಲ ಮಾರ್ಷಲ್‌ಗಳು ಅವರಿಗೆ ನೀಡಿರುವ ಯಂತ್ರದ ಮೂಲಕ ಅಧಿಕೃತವಾಗಿ ದಂಡ ವಿಧಿಸುತ್ತಿದ್ದಾರೆ. ಮಾರ್ಷಲ್‌ಗಳಿಗೆ ಬಯೋಮೆಡಿಕಲ್ ವೇಸ್ಟ್ ಉಲ್ಲಂಘನೆ ಮಾಡುವುದಕ್ಕೆ ದಂಡ ವಿಧಿಸುವ ಅಧಿಕಾರವೂ ಇದೆ. ಆದರೆ, ಬೇರೆ- ಬೇರೆ ಕಾಲಂನ ಅಡಿ ದಂಡ ವಿಧಿಸುವುದು ತಪ್ಪು. ಈ ರೀತಿ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ರಂದೀಪ್ ತಿಳಿಸಿದರು. ಮಾರ್ಷಲ್‌ಗಳಿಗೆ ಬಿಬಿಎಂಪಿ ಕಸ ನಿರ್ವಹಣೆ ಬೈಲಾ ಹಾಗೂ ಪ್ರತಿಯೊಂದಕ್ಕೂ ನಿಗದಿ ಮಾಡಲಾಗಿರುವ ದಂಡ ಪ್ರಮಾಣದ ಬಗ್ಗೆ ಮತ್ತೂಮ್ಮೆ ತರಬೇತಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
2.84 ಕೋಟಿ ರೂ. ದಂಡ ಸಂಗ್ರಹ : ಮಾರ್ಷಲ್‌ಗಳು ತಪ್ಪಾಗಿ ದಂಡ ವಿಧಿಸಿರುವ ಆರೋಪಗಳ ಹೊರತಾಗಿಯು ಈ ವರ್ಷ ಜ. ಯಿಂದ ಜು. ಅಂತ್ಯದ ವರೆಗೆ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘನೆ ಮಾಡಿರುವ ಸಾರ್ವಜನಿಕರಿಂದ ಒಟ್ಟು 2.84 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಇದರಲ್ಲಿ ಕೋವಿಡ್ ಸೋಂಕು ವರದಿಯಾದ ಮೇಲೆ ಪ್ರಾರಂಭಿಸಲಾಗಿರುವ ಮಾಸ್ಕ್ ಧರಿಸದೆ ಇರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸಿರುವ ದಂಡವೂ ಸೇರಿದೆ.