ರಾಮನಗರ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಶುಲ್ಕವನ್ನು ಜೂ.3ರಿಂದ ಶೇ.5ರಷ್ಟು ಹೆಚ್ಚಳ ಮಾಡಲಾಗಿದೆ. ಇನ್ನೊಂದಡೆ ಎಕ್ಸ್‌ಪ್ರೆಸ್ ವೇನಲ್ಲಿ ಎಐ ಕ್ಯಾಮರಾಗಳನ್ನು ಅಳವಡಿಸಿ, ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನ ಸಂಚಾರ ಪ್ರಯಾಣಿಕರಿಗೆ ದುಬಾರಿ ಎನಿಸಿದೆ.
ಹೌದು.., ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಜೂ.1 ಮತ್ತು ಜೂ.2ರಂದು ಎರಡು ದಿನಗಳ ಅವಧಿಗೆ ಎಕ್ಸ್‌ಪ್ರೆಸ್‌ವೇನದಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ 8158 ಪ್ರಕರಣಗಳು ದಾಖಲಾಗಿವೆ. ಒಟ್ಟು 43.15 ಲಕ್ಷ ರೂ. ದಂಡವನ್ನು ವಿಧಿಸಲಾಗಿದ್ದು, ಎಕ್ಸ್‌ಪ್ರೆಸ್ ವೇ ಸಂಚಾರ ತುಟ್ಟಿಯಾಗಿದೆ ಎಂಬುದನ್ನು ಈ ಮಾಹಿತಿ ಎತ್ತಿಹಿಡಿಯುತ್ತಿದೆ. ಎಕ್ಸ್‌ಪ್ರೆಸ್ ವೇನಲ್ಲಿ ಮೈಸೂರಿಗೆ ಕಾರಿನಲ್ಲಿ ಹೋಗಿಬರಲು ಒಂದು 495 ರೂ. ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಹೋಗಿ ಬರುವುದು 24 ತಾಸುಗಳನ್ನು ದಾಟಿದರೆ ಈ ಶುಲ್ಕ ಇನ್ನು ಹೆಚ್ಚಾಗಲಿದೆ. ಇದರೊಂದಿಗೆ ಎಕ್ಸ್‌ಪ್ರೆಸ್ ವೇನಲ್ಲಿ ಸ್ವಲ್ಪ ಯಾಮಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದರೆ ದಂಡದಿಂದಾಗಿ ಜೇಬಿಗೆ ಹೊರೆಯಾಗುವುದು ಗ್ಯಾರಂಟಿ.
ಸೀಟ್ ಬೆಲ್ಟ್ ಪ್ರಕರಣವೇ ಹೆಚ್ಚು: ಎರಡು ದಿನಗಳಲ್ಲಿ ಸೀಟ್ ಬೆಲ್ಟ್ ಧರಿಸದೇ ಕಾರು ಚಾಲನೆ ಮಾಡಿರುವ ಪ್ರಕರಣಗಳ ಸಂಖ್ಯೆ 6998 ಇದೆ. ಮೇ ತಿಂಗಳಲ್ಲಿ 74 ಸಾವಿರ ಸಂಚಾರ ಉಲ್ಲಂಘನೆ ಪ್ರಕರಣಗಳು ಕ್ಯಾಮ ರಾ ಸೆರೆ ಹಿಡಿದಿದ್ದು, ಇದರಲ್ಲಿ 56 ಸಾವಿರ ಪ್ರಕರಣ ಗಳು ಸೀಟ್ ಬೆಲ್ಟ್ ಧರಿಸದೇ ಇರುವುದೇ ಇತ್ತು. ಮತ್ತೆ ಸೀಟ್ ಬೆಲ್ಟ್ ಧರಿಸದೇ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಗಮನಾರ್ಹ. ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಕಾರು ಚಾಲನೆ ಮಾಡುವಾಗ ಚಾಲಕರು ಸೀಟ್ ಬೆಲ್ಟ್ ಹಾಕುತ್ತಾರೆ. ಆದರೆ, ಅವರ ಪಕ್ಕದಲ್ಲಿ ಕುಳಿತವರು ಸೀಟ್ ಬೆಲ್ಟ್ ಹಾಕುವುದಿಲ್ಲ. ಮಹಿಳೆಯರು ಕುಳಿತಾಗ ಸೀಟ್ ಬೆಲ್ಟ್ ಹಾಕುವ ಗೋಜಿಗೆ ಹೋಗುವುದಿಲ್ಲ. ಸಂಚಾರ ನಿಯಮದ ಪ್ರಕಾರ ಕಾರಿನ ಮುಂಬದಿಯ ಪ್ರಯಾಣಿಕರಿಬ್ಬರೂ ಸೀಟ್‌ಬೆಲ್ಟ್ ಧರಿಸಬೇಕಾಗಿದ್ದು, ಒಬ್ಬರು ಧರಿಸದೇ ಇದ್ದರೂ ಎಐ ಕ್ಯಾಮರಾಗಳು ನಿಯಮ ಉಲ್ಲಂಘನೆ ಎಂದು ಗುರುತಿಸಿ, ದಂಡ ವಿಧಿಸುತ್ತವೆ. ಹೀಗಾಗಿ ಸೀಟ್ ಬೆಲ್ಟ್ ಧರಿಸದೇ ಇರುವ ಬಗ್ಗೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾ ಗುತ್ತಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಹೆದ್ದಾರಿ ಅವ್ಯವಸ್ಥೆ ಬಗ್ಗೆಯೂ ಗಮನಹರಿಸಲಿ : ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ಪ್ರಯಾಣಿಕರಿಗೆ ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಎಕ್ಸ್‌ಪ್ರೆಸ್ ವೇನಲ್ಲಿ ಇರುವ ಅವ್ಯವಸ್ಥೆಗಳು ಇನ್ನೂ ಸರಿಹೋಗಿಲ್ಲ. ಸಂಚಾರ ನಿಯಮ ಜಾರಿಗೆ ಉತ್ಸಾಹ ತೋರುವವರು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.ಎಕ್ಸ್‌ಪ್ರೆಸ್ ವೇನಲ್ಲಿ ಮಳೆ ಬಂದರೆ ನೀರು ನುಗ್ಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಎಕ್ಸೈಟ್ ಮತ್ತು ಎಂಟ್ರಿಗಳು ಸಮರ್ಪಕವಾಗಿಲ್ಲ. ಅಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇನ್ನು ಅಲ್ಲಲ್ಲಿ ಹೆದ್ದಾರಿಗೆ ಕಾಡುಪ್ರಾಣಿ, ಸಾಕುಪ್ರಾಣಿಗಳು, ಪಾದಚಾರಿಗಳು ಎಂಟ್ರಿ ಪಡೆಯದಂತೆ ಅಳವಡಿಸಿರುವ ತಂತಿ ಬೇಲಿ ಕಿತ್ತು ಹೋಗಿ ಯಾರು ಎಲ್ಲಿ ಬೇಕಾದರೂ ಎಂಟ್ರಿ ಪಡೆಯುವಂತಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಯಾಕೆ ಪೊಲೀಸ್ ಇಲಾಖೆಯಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಗಮನಿಸುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಬಹುಶಃ ಪ್ರಯಾಣಿಕರು ಸಂಚಾರ ನಿಯಮವನ್ನು ನಿರ್ಲಕ್ಷಿಸಿ ಪ್ರಯಾಣಿಸುತ್ತಿರುವಂತಿದೆ.
ಪ್ರತಿದಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವುದು ಬೇಸರದ ಸಂಗತಿ. ದಯವಿಟ್ಟು ಪ್ರಯಾಣಿಕರು ಸಂಚಾರ ನಿಯಮಗಳನ್ನು ಪಾಲಿಸಿ.
● ಅಲೋಕ್‌ಕುಮಾರ್, ಎಡಿಜಿಪಿ, ಸಂಚಾರ ನಿಯಂತ್ರ ಮತ್ತು ರಸ್ತೆ ಸುರಕ್ಷತಾ ವಿಭಾಗ
-ಸು.ನಾ.ನಂದಕುಮಾರ್