Advertisement

ಸರ್ಕಾರಿ ಶಾಲೆಗಳಲ್ಲಿ ದುಬಾರಿಯಾದ ಇಂಗ್ಲಿಷ್‌

06:00 AM Sep 26, 2018 | |

ಬೆಂಗಳೂರು: ಇಂಗ್ಲಿಷ್‌ ವಿಷಯದ ಬೋಧನೆ ಹೆಸರಿನಲ್ಲಿ ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡುತ್ತಿರುವುದು ಪೋಷಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ನಿಯಮಗಳ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಶುಲ್ಕವೇ ಇಲ್ಲ. ಐದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನಿಷ್ಠ ಶುಲ್ಕ ನಿಗದಿ ಮಾಡಲಾಗಿದೆ. ರಾಜ್ಯದ ಕೆಲವು ಸರ್ಕಾರಿ ಪ್ರೌಢಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗಿದೆ. ಉಳಿದಂತೆ ಒಂದನೇ ತರಗತಿಯಿಂದ ಇಂಗ್ಲಿಷ್‌ ಒಂದು ಭಾಷೆಯಾಗಿ ಬೋಧಿಸುವ ಪ್ರಕ್ರಿಯೆಗೂ ಚಾಲನೆ ಸಿಕ್ಕಿದೆ. ಆದರೆ, ಇದೇ ಕಾರಣಕ್ಕಾಗಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡಬಾರದು ಎಂಬ ಸ್ಪಷ್ಟ ಸೂಚನೆ ಇಲಾಖೆಯಿಂದ ಇದೆ.

Advertisement

ಕೆಲವು ಸರ್ಕಾರಿ ಶಾಲೆಗಳಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ) ಸದಸ್ಯರು ಇಂಗ್ಲಿಷ್‌ ಶಿಕ್ಷಕರ ನೇಮಕಕ್ಕೆ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುವುದು ತಿಳಿದು ಬಂದಿದೆ. ಅದು ನೂರು ಇನ್ನೂರು ರೂಪಾಯಿ ಅಲ್ಲ.
ವಾರ್ಷಿಕವಾಗಿ ಒಂದೂವರೆಯಿಂದ ಎರಡು ಸಾವಿರದವರೆಗೂ ಪಾವತಿಸುವಂತೆ ಶಾಲೆಗಳಿಂದ ಸೂಚನೆ ನೀಡಿರುವ ಬಗ್ಗೆ ಪಾಲಕ, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆ ಶುಲ್ಕ ವಿವರ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ 2018-19ನೇ ಸಾಲಿನ ಶುಲ್ಕಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ 1ರಿಂದ 4ನೇ ತರಗತಿ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆ ಬಾವುಟ ಶುಲ್ಕ 8 ರೂ. ನಿಗದಿ ಮಾಡಲಾಗಿದೆ. 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕ್ರೀಡಾನಿಧಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಶಿಕ್ಷಕರ ದಿನಾಚರಣೆ ಬಾವುಟ ಶುಲ್ಕ ಸೇರಿ 53 ರೂ. ಪಡೆಯಲಾಗುತ್ತದೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ದಾಖಲಾತಿ ಶುಲ್ಕ 10ರೂ., ಕ್ರೀಡಾಶುಲ್ಕ 25 ರೂ., ರೀಡಿಂಗ್‌ ರೂಂ ಶುಲ್ಕ 20 ರೂ., ಪ್ರಯೋಗಾಲಯ ಶುಲ್ಕ 20ರೂ., ಡ್ರಾಯಿಂಗ್‌ ಶುಲ್ಕ 10 ರೂ., ವೈದ್ಯಕೀಯ ಶುಲ್ಕ 5 ರೂ., ವೃತ್ತಿ ಶಿಕ್ಷಣ ಶುಲ್ಕ 10 ರೂ., ಶಾಲಾ ಸ್ವತ್ಛತಾ ಶುಲ್ಕ 15 ರೂ., ವಿದ್ಯಾರ್ಥಿ
ಕ್ರೀಡಾ ನಿಧಿ 15 ರೂ., ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ 15 ರೂ., ಶಾಲಾಭಿವೃದಿಟಛಿ ಶುಲ್ಕ 20 ರೂ., ಶಿಕ್ಷಕರ ಕಲ್ಯಾಣ ನಿಧಿ 15 ರೂ., ಶಿಕ್ಷಕರ ದಿನಾಚರಣೆಯ ಬಾವುಟ ಶುಲ್ಕ 8 ರೂ. ಸೇರಿದಂತೆ 198 ರೂ. ವಾರ್ಷಿಕ ಶುಲ್ಕವಾಗಿ ಪಡೆಯಲು ಅವಕಾಶ ಇದೆ.

ರಿಯಾಯ್ತಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಡಿ ಬರುವ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯ್ತಿ ಇದೆ. ಎಲ್ಲ ವಿದ್ಯಾರ್ಥಿನಿಯರಿಗೂ ಶುಲ್ಕ ರಿಯಾಯ್ತಿ ಇದೆ. ಕುಟುಂಬದ ವಾರ್ಷಿಕ ವರಮಾನ 44,500 ರೂ.ಕ್ಕಿಂತ ಕಡಿಮೆ ಇರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಶುಲ್ಕ ರಿಯಾಯ್ತಿ ಇದೆ. 

ಕೆಲವೆಡೆ ಪಾಲಕರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಸೇರಿ ಒಪ್ಪಂದದ ಆಧಾರದಲ್ಲಿ ಶಾಲೆ ಅಭಿವೃದ್ಧಿಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ತಿಳಿದುಬಂದಿದೆ. ಇದಕ್ಕೂ ಅವಕಾಶ ನೀಡಿಲ್ಲ. 
● ಡಾ.ಪಿ.ಸಿ.ಜಾಫ‌ರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

● ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next