Advertisement

ಗ್ರಾಹಕರಿಗೆ ಡಿಜಿಟಲ್‌ ಮೀಟರ್‌ ಬರೆ

01:33 PM Nov 19, 2019 | Suhan S |

ಸಿಂದನೂರು: ತಾಲೂಕಿನಲ್ಲಿ ಡಿಜಿಟಲ್‌ ವಿದ್ಯುತ್‌ ಮೀಟರ್‌ ಅಳವಡಿಸಿದ್ದರಿಂದ ಬಡ ಗ್ರಾಹಕರಿಗೆ ಹೆಚ್ಚು ಬಿಲ್‌ ಬರುತ್ತಿದ್ದು, ಇದರಿಂದ ಅವರಿಗೆ ಹೊರೆ ಆಗುತ್ತಿದೆ. ಸರ್ಕಾರ ಬಡವರ ರಕ್ತ ಹೀರುತ್ತಿದೆ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Advertisement

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ತಾಪಂ ಅಧ್ಯಕ್ಷೆ ಲಕ್ಷ್ಮೀ ಅಮರೇಶ ಗುರಿಕಾರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯ ನರಸಿಂಹ ಮಾತನಾಡಿ, ಸರಕಾರ ಮಾಡಿರುವ ಇಂತಹ ಯೋಜನೆಗಳಿಂದ ಕಡಿಮೆ ವಿದ್ಯುತ್‌ ಬಳಸುವ ಗ್ರಾಹಕರೂ ಹೆಚ್ಚು ಬಿಲ್‌ ಪಾವತಿಸಬೇಕಿದೆ.

ನಮ್ಮ ಮನೆಯಲ್ಲೇ ಮೊದಲು ತಿಂಗಳಿಗೆ 500 ರೂ.ಗಳಿಂದ 600 ರೂ. ಬಿಲ್‌ ಬರುತ್ತಿತ್ತು. ಈಗ ಡಿಜಿಟಲ್‌ ಮಿಟರ್‌ ಅಳವಡಿಕೆ ನಂತರ ಸುಮಾರು 1800 ರೂ.ಗಳಿಂದ 2,000 ರೂ. ಬಿಲ್‌ ಬರುತ್ತಿದೆ. ಒಂದೆಡೆ ಸರ್ಕಾರ ಬಡವರ ಕಣ್ಣೊರೆಸುವ ಕೆಲಸ ಮಾಡುತ್ತದೆ. ಇನ್ನೊಂದೆಡೆ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಲ್ಲ ಸದಸ್ಯರು ಜೆಸ್ಕಾಂ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಾಪಂ ಸದಸ್ಯ ಉದಯಕುಮಾರ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಹೋಗುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಬೇಕಾ ಬಿಟ್ಟಿ ಕೆಲಸ ಮಾಡುವ ವೈದ್ಯರ ಸಂಖ್ಯೆ ಹೆಚ್ಚಿದೆ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರಾದ ನಿಂಗಪ್ಪ ಹಾಗೂ ವೀರಭದ್ರಪ್ಪ ತಲೇಖಾನ ಮಾತನಾಡಿ, ಗ್ರಾಮದಲ್ಲಿ ಯಾವೊಂದು ಸರಕಾರಿ ಕಾರ್ಯಕ್ರಮಗಳ ಅಡಿಯಲ್ಲಿ ಕಾಮಗಾರಿಗಳು ನಡೆದರೂ ಆಯಾ ಕ್ಷೇತ್ರದ ತಾಪಂ ಸದಸ್ಯರ ಗಮನಕ್ಕೆ ತಂದು ಕೆಲಸ ಮಾಡಬೇಕು. ಇಲ್ಲವಾದರೆ ಕಳಪೆ ಕಾಮಗಾರಿಗಳಿಗೆ ಅಧಿಕಾರಿಗಳೇ ನೇರ ಹೋಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು. ಪ್ರತಿ ಗ್ರಾಮಗಳಲ್ಲಿ ಶೌಚಾಲಯ, ನೀರಿನ ಕೊರತೆ ಇದ್ದರೂ ಅಧಿಕಾರಿಗಳು ಗಾಢನಿದ್ರೆಗೆ ಜಾರಿದ್ದಾರೆ ಎಂದು ಹರಿಹಾಯ್ದರು. ಸದಸ್ಯೆ ನಾಗರತ್ನ ಮಾತನಾಡಿ, ಪಿಡಿಒಗಳು ಗ್ರಾಮಗಳಿಗೆ ಭೇಟಿ ನೀಡದೆ ಅಲ್ಲಿನ ಸಮಸ್ಯೆಗಳನ್ನು ಆಲಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ. ಅಂತಹರನ್ನು ಕೆಲಸದಿಂದ ವಜಗೊಳಿಸಬೇಕೆಂದು ಒತ್ತಾಯಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ದೇಸಾಯಿ ಮಾತನಾಡಿ, ಪ್ರತಿ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಬೇಜವಾಬ್ದಾರಿತನ ಮಾಡುವುದು ಬಿಟ್ಟು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ತಾಪಂ ಅಧ್ಯಕ್ಷೆ ಲಕ್ಷ್ಮೀ ಗುರಿಕಾರ ಮಾತನಾಡಿ, ಯಾವುದೇ ಕಾಮಗಾರಿಗಳು ನಡೆದರೆ ಸದಸ್ಯರ ಗಮನಕ್ಕೆ ತಂದು ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಬೇಕು. ಅಭಿವೃದ್ಧಿ ವಿಷಯದಲ್ಲಿ ಮೌನ ವಹಿಸಿರುವುದು ಕಂಡು ಬಂದರೆ ಅಂಥವರು ಕೆಲಸದಿಂದ ಹೊರ ಹೋಗಿ ಎಂದು ಪಿಡಿಒಗಳಿಗೆ ತಾಕೀತು ಮಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬುರಾಠೊಡ ಮಾತನಾಡಿ, ಈಗಾಗಲೇ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರು ಶೌಚಾಲಯ ಇನ್ನಿತರ ಮೂಲ ಸೌಲಭ್ಯಗಳಿಗೆ ಒತ್ತು ನೀಡಲಾಗಿದೆ. ಇನ್ಮುಂದೆ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ಮಾಡಲಾಗುವುದು. ಪಿಡಿಒಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು. ತಾಪಂ ಉಪಾಧ್ಯಕ್ಷೆ ಕರಿಯಮ್ಮ ಸದಸ್ಯರಾದ ಬಸಮ್ಮ, ಶರಣಮ್ಮ, ಗುರುರಾಜ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next