Advertisement

ಚಿಕನ್‌ ಪ್ರಿಯರಿಗೆ ಕಹಿ ಸುದ್ದಿ : ಕೋಳಿ ಮಾಂಸ ದುಬಾರಿ; 2 ವಾರದಲ್ಲಿ  50 ರೂ. ಏರಿಕೆ! 

12:26 AM Mar 18, 2022 | Team Udayavani |

ಮಂಗಳೂರು: ಕೋಳಿಗಳ ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ರಾಜ್ಯಾದ್ಯಂತ ಕೋಳಿ ಮಾಂಸ ದುಬಾರಿಯಾಗಿದೆ. ಕೋಳಿ ಮಾಂಸದ ಖಾದ್ಯಗಳ ಬೆಲೆಯೂ ಹೆಚ್ಚಳವಾಗಿದ್ದು, ಕೋಳಿ ಮಾಂಸ ಪ್ರಿಯರ ಕಿಸೆಗೆ ಕತ್ತರಿ ಹಾಕಿದೆ.

Advertisement

ಫಾರಂಗಳಲ್ಲಿಯೇ 1 ಕೆ.ಜಿ. ಕೋಳಿಯ ಬೆಲೆ 125 ರೂ. ಇದ್ದು, ಮಾರುಕಟ್ಟೆಯಲ್ಲಿ 180ರಿಂದ 185 ರೂ. ಇದೆ. ಒಂದು ವಾರದ ಅವಧಿಯಲ್ಲಿ ಕೆ.ಜಿ.ಗೆ 50ರಿಂದ 55 ರೂ. ಏರಿಕೆಯಾಗಿದೆ.

ಕೋಳಿ ಆಹಾರ ದುಬಾರಿ ಕಾರಣ :

ಕೋಳಿ ಮಾಂಸದ ಬೆಲೆ ಏರಿಕೆಯಾಗಲು ಕೋಳಿ ಆಹಾರ ದುಬಾರಿಯಾಗಿರುವುದು ಮುಖ್ಯ ಕಾರಣ. ಕೋಳಿ ಆಹಾರ ತಯಾರಿಸಲು ಬಳಕೆಯಾಗುವ ಜೋಳ ಮತ್ತು ಸೋಯಾ ಬೆಲೆ ಏರಿಕೆಯಾಗಿದೆ. ಹಾಗಾಗಿ ಕೋಳಿ ಆಹಾರದ ಬೆಲೆ ಸುಮಾರು ಶೇ. 50ರಷ್ಟು ಹೆಚ್ಚಳವಾಗಿದೆ. ಜತೆಗೆ ಔಷಧದ ಬೆಲೆಯೂ ಏರಿಕೆಯಾಗಿದೆ. 2-3 ವಾರಗಳ ಹಿಂದೆ 1 ಕೆ.ಜಿ. ಕೋಳಿ ಆಹಾರಕ್ಕೆ 22 ರೂ. ಇತ್ತು. ಈಗ 40 ರೂ.ಗೇರಿದೆ. ಈಗ ಸೆಕೆ ಅಧಿಕ ಇರುವುದರಿಂದ ಕೋಳಿ ಸಾಕಾಣಿಕೆಗೆ ಸ್ಥಳಾವಕಾಶವೂ ಅಧಿಕ ಬೇಕಾಗುತ್ತದೆ. ಜತೆಗೆ ಸಾಕಣೆದಾರರು ಹೆಚ್ಚು ವಯಸ್ಸಾದ ಕೋಳಿಗಳನ್ನು ವಿಲೇವಾರಿ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ಕೋಳಿ ಉತ್ಪಾದನೆ ತುಸು ಕುಂಠಿತವಾಗಿದೆ. ರಾಜ್ಯದಲ್ಲಿ 1 ತಿಂಗಳ ಹಿಂದೆ ವಾರಕ್ಕೆ 1.5 ಕೋಟಿ ಮಾಂಸದ ಕೋಳಿಗಳನ್ನು ಉತ್ಪಾದಿಸಲಾಗುತ್ತಿತ್ತು. ಈಗ ಅದು 80 ಲಕ್ಷಕ್ಕೆ ಕುಸಿದಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದ್ದರಿಂದ ಮಾಂಸ ದುಬಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕೋಳಿ ಉತ್ಪಾದಕರ ಸಂಘದ ಅಧ್ಯಕ್ಷ ಡಾ| ಸುಶಾಂತ್‌ ರೈ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಫಾಸ್ಟ್‌ ಫುಡ್‌ ಮಳಿಗೆಗಳಲ್ಲಿ ಕೋಳಿ ಮಾಂಸದ ಖಾದ್ಯಗಳ ಬೆಲೆ ಏರಿಕೆಯಾಗಿದೆ. ಚಿಕನ್‌ ಬರ್ಗರ್‌ ಬೆಲೆ 50 ರೂ. ಇದ್ದದ್ದು, 60 ರೂ.ಗೇರಿದೆ. ಹಾಗೆಯೇ ಚಿಕನ್‌ ಟಿಕ್ಕಾ, ಚಿಕನ್‌ ಚಿಲ್ಲಿ, ಚಿಕನ್‌ ಕಬಾಬ್‌ಗಳ ಬೆಲೆಯನ್ನು ಕೂಡತುಸು ಏರಿಸಲಾಗಿದೆ.

Advertisement

ಆದರೆ ಹೊಟೇಲ್‌ ಮತ್ತು ಕೆಟರಿಂಗ್‌ಗಳಲ್ಲಿ ಕೋಳಿ ಮಾಂಸದ ಖಾದ್ಯಗಳ ದರ ಹೆಚ್ಚಳವಾದ ಬಗ್ಗೆ ಮಾಹಿತಿ ಇಲ್ಲ. ಕೆಟರಿಂಗ್‌ನವರು 2-3 ತಿಂಗಳ ಮುಂಚೆಯೇ ಆರ್ಡರ್‌ ಪಡೆದಿರುವುದರಿಂದ ದರ ಏರಿಸಿದರೆ ಸಮಸ್ಯೆ ಆಗುತ್ತದೆ. ಆದರೆ ಕೋಳಿ ಮಾಂಸ ಮತ್ತು ಇತರ ವಸ್ತುಗಳ

ದರ ಏರಿಕೆ ಆಗಿರುವುದರಿಂದ ನಮಗೆ ಬಹಳಷ್ಟು ಕಷ್ಟವಾಗುತ್ತಿದೆ ಎಂದು ದ.ಕ. ಜಿಲ್ಲಾ ಕೆಟರಿಂಗ್‌ ಮಾಲಕರ ಸಂಘದ ಉಪಾಧ್ಯಕ್ಷ ರಾಜ್‌ಗೊàಪಾಲ್‌ ರೈ ತಿಳಿಸಿದ್ದಾರೆ.

ಕೋಳಿ ಮಾಂಸ ಧಾರಣೆ :

ಮಂಗಳೂರಿನಲ್ಲಿ ಜೀವಂತ ಮಾಂಸದ ಕೋಳಿಯ ಬೆಲೆ ಎರಡು ವಾರಗಳ ಹಿಂದೆ 120-130 ರೂ. ಇದ್ದರೆ ಪ್ರಸ್ತುತ ಕೆ.ಜಿ.ಗೆ 185 ರೂ.ಗೇರಿದೆ. ಕೋಳಿ ಮಾಂಸದ ದರ ಕೆ.ಜಿ.ಗೆ ವಿದ್‌ ಸ್ಕಿನ್‌ 244 ರೂ. (ವಾರದ ಹಿಂದೆ 200 ರೂ. ಇತ್ತು), ವಿದೌಟ್‌ ಸ್ಕಿನ್‌ 283 ರೂ. (ವಾರದ ಹಿಂದೆ 240 ರೂ.) ಹಾಗೂ ಟೈಸನ್‌ ಕೋಳಿಯ ಬೆಲೆ 271 ರೂ. (ವಾರದ ಹಿಂದೆ 210 ರೂ. ) ಇದೆ.

Advertisement

Udayavani is now on Telegram. Click here to join our channel and stay updated with the latest news.

Next