Advertisement

ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ: ಹೈ ನೋಟಿಸ್‌

01:59 AM May 17, 2019 | Sriram |

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಪಿಯು ಕಾಲೇಜುಗಳು ಮನಬಂದಂತೆ ಪ್ರವೇಶ ಶುಲ್ಕ ನಿದಗಿಪಡಿಸಿ ‘ಹಗಲು ದರೋಡೆ’ ನಡೆಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ಕುರಿತಂತೆ ವಕೀಲ ಎನ್‌.ಪಿ. ಅಮೃತೇಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಾನ್‌ ಮೈಕೆಲ್ ಕುನ್ಹಾ ಮತ್ತು ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾಲೇಜು ಶಿಕ್ಷಣ ಆಯುಕ್ತರು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿ ಅರ್ಜಿಗೆ ಸಂಬಂಧಿಸಿದಂತೆ ಎರಡು ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ವಕೀಲರೂ ಆದ ಅರ್ಜಿದಾರ ಎನ್‌.ಪಿ.ಅಮೃತೇಶ್‌ ವಾದ ಮಂಡಿಸಿ, ಎಸ್ಸೆಸ್ಸೆಲಿ ಫ‌ಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಿಯುಸಿ ಕೋರ್ಸ್‌ ಗಳ ಪ್ರವೇಶಗಳು ಪ್ರಾರಂಭವಾಗಿವೆ. ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪಿಯು ಕಾಲೇಜುಗಳಿಗೆ ಸರ್ಕಾರ ಶುಲ್ಕ ನಿಗದಿಪಡಿಸಿದೆ. ಆದರೆ, ಖಾಸಗಿ ಪಿಯು ಕಾಲೇಜುಗಳಿಗೆ ಮಾತ್ರ ಶುಲ್ಕ ನಿಗದಿಪಡಿಸಿಲ್ಲ. ಇದರ ಅನುಕೂಲ ಪಡೆದಿರುವ ಖಾಸಗಿ ಪಿಯು ಕಾಲೇಜುಗಳು ಪೋಷಕರಿಂದ ದುಬಾರಿ ಶುಲ್ಕ ದೋಚುತ್ತಿದ್ದಾರೆ ಎಂದು ದೂರಿದರು.

ಖಾಸಗಿ ಪಿಯು ಕಾಲೇಜುಗಳು ಕಟ್ ಆಫ್ ಮಾರ್ಕ್ಸ್ ನಿಗದಿಪಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ಖಾಸಗಿ ಕಾಲೇಜುಗಳು ಪ್ರವೇಶಕ್ಕೆ ಶೇ.90 ಕಟ್ ಆಫ್ ಮಾರ್ಕ್ಸ್ ಎಂಬ ಸ್ವಯಂ ಮಾನದಂಡ ನಿಗದಿಪಡಿಸಿಕೊಂಡಿವೆ. ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ದೊಡ್ಡ ಮೊತ್ತದ ಶುಲ್ಕ ಕೇಳುತ್ತಿವೆ. ಇದರಿಂದ ಪೋಷಕರಿಗೆ ಹೊರೆಯಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಪರಸ್ಪರ ಸೇರಿ ಶುಲ್ಕ ನಿಗದಿಪಡಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಫ್ಲೈಯಿಂಗ್‌ ಸ್ಕ್ವಾಡ್‌ ನೇಮಿಸಿ
ಖಾಸಗಿ ಕಾಲೇಜುಗಳ ಹಗಲು ದರೋಡೆಗೆ ಕಡಿವಾಣಕ್ಕೆ ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ನೇಮಿಸಬೇಕು. ದುಬಾರಿ ಶುಲ್ಕ ಪಡೆಯುವ ಕಾಲೇಜುಗಳ ಮಾನ್ಯತೆ ರದ್ದುಪಡಿ ಸಬೇಕು, ವಿಜ್ಞಾನ, ವಾಣಿಜ್ಯ ಸೇರಿದಂತೆ ಇನ್ನಿತರ ವಿಷಯಗಳಿಗೆ ಬೇಡಿಕೆಯಿರುವ ಪ್ರದೇಶಗಳಲ್ಲಿ ಹೊಸ ಪಿಯು ಕಾಲೇಜು ಆರಂಭಿಸಬೇಕು. ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪಿಯು ಕಾಲೇಜುಗಳಿಗೆ ಸರಿ ಸಮಾನವಾಗಿ ಖಾಸಗಿ ಪಿಯು ಕಾಲೇಜುಗಳಿಗೂ ಶುಲ್ಕ ನಿಗದಿಪಡಿಸಬೇಕು. ಕಟ್ ಆಫ್ ಮಾರ್ಕ್ಸ್ ನೆಪದಲ್ಲಿ ದುಬಾರಿ ಶುಲ್ಕ ಕೇಳುವ ಸಮಸ್ಯೆ ಬಗೆಹರಿಸಲು ಜಿಲ್ಲಾ ಕೇಂದ್ರಗಳಲ್ಲಿ ‘ಅಹವಾಲು ಸ್ವೀಕಾರ ಕೇಂದ್ರ’ ಸ್ಥಾಪಿಸು ವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next