Advertisement

ನಿರೀಕ್ಷಿತ ಉದನೆ ಸೇತುವೆ ಕಾಮಗಾರಿ ನಿಧಾನ

10:34 PM Jan 16, 2020 | mahesh |

ಕಲ್ಲುಗುಡ್ಡೆ: ಕಡಬ ತಾಲೂಕಿನ ಕಡ್ಯ ಕೊಣಾಜೆ ಗ್ರಾಮದ ಉದನೆಯಲ್ಲಿ ಹರಿಯುತ್ತಿರುವ ಗುಂಡ್ಯ ಹೊಳೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) ವತಿಯಿಂದ 9.6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿದೆ ಎಂಬ ದೂರು ಕೇಳಿ ಬರುತ್ತಿದೆ. ಸರಕಾರದ ಅಧಿಸೂಚನೆ ಪ್ರಕಾರ ಅದು 2020ರ ಮಾರ್ಚ್‌ ನಲ್ಲಿ ಪೂರ್ಣಗೊಳ್ಳಬೇಕಿದೆ.

Advertisement

ಉದನೆ ಸೇತುವೆ – ಪುತ್ತಿಗೆ ಕಲ್ಲುಗುಡ್ಡೆ ರಸ್ತೆ ಕಾಮಗಾರಿಗೆ 2017ರ ಡಿ. 5ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ರಮಾನಾಥ ರೈ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಸರಗೋಡಿನ ಲೋಫ್ ಕನ್‌ಸ್ಟ್ರಕ್ಷನ್‌ ಸಂಸ್ಥೆ ಗುತ್ತಿಗೆ ವಹಿಸಿಕೊಂಡು ಕಾಮಗಾರಿ ನಿರ್ವಹಿಸುತ್ತಿದೆ.

ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ನ್ನು ಕಡ್ಯ ಕೊಣಾಜೆ ಅಥವಾ ನೂಜಿಬಾಳ್ತಿಲದಿಂದ ಸಂಪರ್ಕಿಸಲು ಗುಂಡ್ಯ ಹೊಳೆಗೆ ಸೇತುವೆ ನಿರ್ಮಿಸಬೇಕೆಂದು ಬಹಳ ಹಿಂದಿನಿಂದಲೇ ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ನೂತನ ಕಡಬ ತಾಲೂಕನ್ನು ಸಂಪರ್ಕಿಸಲು ಉದನೆ, ಶಿರಾಡಿ, ಗುಂಡ್ಯ ಭಾಗದ ಜನತೆಗೆ ಈ ಸೇತುವೆ ಸಹಕಾರಿ.

ಪಿಲ್ಲರ್‌ ಕೆಲಸ ಪೂರ್ಣ
ಅಂದುಕೊಂಡಂತೆ ಕಾಮಗಾರಿ ನಡೆಯುತ್ತಿದ್ದರೆ ಈ ವೇಳೆಗೆ ಸೇತುವೆ ಲೋಕಾರ್ಪಣೆಗೊಂಡು ಸಂಚಾರಕ್ಕೆ ಮುಕ್ತಗೊಳ್ಳಬೇಕಿತ್ತು. ಆದರೆ ಶಂಕು ಸ್ಥಾಪನೆಗೊಂಡು ಎರಡು ವರ್ಷಗಳೇ ಕಳೆದರೂ ಸೇತುವೆ ಕಾಮಗಾರಿ ಪೂರ್ಣವಾಗದೆ ಪಿಲ್ಲರ್‌ ಕೆಲಸಗಳು ಮಾತ್ರ ಮುಗಿದಿವೆ. ಮಧ್ಯದಲ್ಲಿ 4 ಪಿಲ್ಲರ್‌ಗಳು ನಿರ್ಮಾಣಗೊಂಡಿದ್ದು, ಎರಡು ಬದಿಗಳಲ್ಲಿ ಆಧಾರ ಪಿಲ್ಲರ್‌ ಕಾಮಗಾರಿಯೂ ಪೂರ್ಣಗೊಂಡಿದೆ. ಸೇತುವೆ ಕಾಮಗಾರಿ ಅದರ ನಿರೀಕ್ಷಿತ ವೇಗವನ್ನು ಪಡೆದಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ದೋಣಿಯ ಬಳಕೆಯಲ್ಲಿದ್ದರು
ಗುಂಡ್ಯ ಹೊಳೆಗೆ ತೂಗುಸೇತುವೆ ನಿರ್ಮಾಣವಾಗುವ ಮೊದಲು ಸ್ಥಳೀಯರು ಹೊಳೆ ದಾಟಲು ನಾಡದೋಣಿಯನ್ನು ಬಳಸುತ್ತಿದ್ದರು. ಮಳೆಗಾಲದಲ್ಲೂ ಅಪಾಯಕಾರಿಯಾಗಿ ದೋಣಿಯಲ್ಲೇ ಪ್ರಯಾಣಿಸುತ್ತಿದ್ದ ಜನತೆಯ ಆಗ್ರಹದ ಮೇರೆಗೆ ಉದನೆಯಲ್ಲಿ 25 ವರ್ಷಗಳ ಹಿಂದೆ ತೂಗುಸೇತುವೆ ನಿರ್ಮಾಣಗೊಂಡಿತ್ತು. ಇದರ ಮೂಲಕ ನಡೆದುಕೊಂಡು ಹೋಗಲು, ದ್ವಿಚಕ್ರ ವಾಹನ ಸಂಚರಿಸಲು ಮಾತ್ರ ಸಾಧ್ಯವಾಗುತ್ತಿದೆ.

Advertisement

ಒತ್ತಡ ಅಗತ್ಯ
ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಗುತ್ತಿಗೆದಾರರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಒತ್ತಡ ಹೇರಿ ಶೀಘ್ರ ಲೋಕಾರ್ಪ ಣೆಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇಲ್ಲಿ ಸೇತುವೆ ನಿರ್ಮಾಣವಾಗಬೇಕೆಂದು ಜನ ಆಗ್ರಹಿಸಿದ್ದರು. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು ಸರಕಾರಕ್ಕೆ ಬೇಡಿಕೆ ಸಲ್ಲಿಸಿ ಸೇತುವೆ ಮಂಜೂರು ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗುಂಡ್ಯ ಹೊಳೆಗೆ ಸೇತುವೆ ನಿರ್ಮಾಣವಾಗುತ್ತಿರುವ ಸ್ಥಳದ ಪಕ್ಕದಲ್ಲೇ ತೂಗುಸೇತುವೆ ಇದ್ದು, ಸದ್ಯಕ್ಕೆ ಅದರ ಮೂಲಕವೇ ಪ್ರಯಾಣಿಸುತ್ತಿದ್ದಾರೆ. ಆದರೆ ತೂಗುಸೇತುವೆ ಕಳೆದ ಮಳೆಗಾಲದಲ್ಲಿ ಮುಳುಗಿ ಹಾನಿಯಾಗಿದೆ. ಆದಷ್ಟು ಬೇಗ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸ್ಥಳೀ ಯರು ಆಗ್ರಹಿಸುತ್ತಿದ್ದಾರೆ.

ರಸ್ತೆ ಅಭಿವೃದ್ಧಿಯಾಗಲಿ
ಸೇತುವೆ ನಿರ್ಮಾಣದ ಜತೆಗೆ ಆ ಭಾಗವನ್ನು ಸಂಪರ್ಕಿಸುವ ರಸ್ತೆಗಳನ್ನೂ ಅಭಿವೃದ್ಧಿಗೊಳಿಸಿದ್ದಲ್ಲಿ ಉದನೆ- ಪುತ್ತಿಗೆ- ಕಲ್ಲುಗುಡ್ಡೆ ಮೂಲಕ ಕಡಬ ತಾಲೂಕು ಕೇಂದ್ರವನ್ನು ಸಂಪರ್ಕಿಸಲು ಸುಲಭ ದಾರಿಯಾಗಲಿದೆ. ಉದನೆಯಲ್ಲಿ ಸೇತುವೆ ನಿರ್ಮಾಣಗೊಂಡಲ್ಲಿ ಆ ಭಾಗದ ಅಭಿವೃದ್ಧಿಯೂ ವೇಗ ಪಡೆಯಲಿದೆ. ಸೇತುವೆ ನಿರ್ಮಾಣಗೊಂಡು ರಸ್ತೆಗಳು ಅಭಿವೃದ್ಧಿಗೊಂಡಲ್ಲಿ ಕಡ್ಯ ಕೊಣಾಜೆ ಪಂಚಾಯತ್‌ ವ್ಯಾಪ್ತಿಯ ಪುತ್ತಿಗೆ ಭಾಗದ ಜನತೆ ಪ್ರಯೋಜನವಾಗಲಿದೆ.

ಸದ್ಯದಲ್ಲೇ ಪೂರ್ಣ
ಉದನೆ ಸೇತುವೆ ಕಾಮಗಾರಿ ಶೀಘ್ರ ಪೂರ್ಣ ಗೊಳ್ಳಲಿದೆ. ಮಳೆಗಾಲ ಮುಗಿದಿದ್ದು, ಈ ತಿಂಗಳು ಕಾಮಗಾರಿ ಪ್ರಾರಂಭವಾಗಲಿದೆ. ಉದನೆ- ಕಲ್ಲುಗುಡ್ಡೆ, ಉದನೆ-ಕೊಣಾಜೆ ರಸ್ತೆಯೂ ಅಭಿವೃದ್ಧಿಯಾಗಬೇಕಿದೆ.
– ಯಶೋಧರ ಗೌಡ, ಉಪಾಧ್ಯಕ್ಷ , ಕಡ್ಯ ಕೊಣಾಜೆ ಗ್ರಾಮ ಪಂಚಾಯತ್‌

ಶೀಘ್ರ ಪ್ರಾರಂಭ
ಉದನೆ ಸೇತುವೆ ಕಾಮಗಾರಿ ನಿಂತಿಲ್ಲ, ಇದರ ಸೂಪರ್‌ ಸ್ಟ್ರಕ್ಚರ್‌ ಸ್ಟೀಲ್‌ನ ಫ್ಯಾಬ್ರಿಕೇಶನ್‌ ಕೆಲಸಗಳು ಧಾರವಾಡ ಕಾರ್ಖಾನೆಯಲ್ಲಿ ನಡೆಯುತ್ತಿದ್ದು, ಅಲ್ಲಿಂದ ಸೆಟ್‌ಗಳನ್ನು ತಂದು ಜೋಡಿಸುವ ಕೆಲಸ ಶೀಘ್ರ ನಡೆಸಲಾಗುವುದು. ಈ ತಿಂಗಳಲ್ಲಿ ಕೆಲಸ ಪುನರಾರಂಭಗೊಳ್ಳಲಿದೆ.
– ಸಂಗಮೇಶ್‌ , ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಕೆ.ಆರ್‌.ಡಿ.ಸಿ.ಎಲ್‌.

ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next