ಉಡುಪಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದು ಆರು ತಿಂಗಳಾಗಿದೆ. ಆದರೆ ರಾಜ್ಯದ 197 ತಾಲೂಕಿನಲ್ಲಿ ಕಂಡು ಕೇಳರಿಯದ ಬರವಿದೆ. 30 ಸಾವಿರ ಕೋ.ರೂ.ನಷ್ಟು ಬೆಳೆ ನಷ್ಟವಾಗಿದೆ ಎಂದು ಕಂದಾಯ ಇಲಾಖೆಯೇ ತಿಳಿಸಿದೆ.
ಜನರು ಸರಕಾರದ ಮೇಲಿಟ್ಟ ನಿರೀಕ್ಷೆ ಹುಸಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ರಾಜ್ಯ ಸರಕಾರ ಕನಿಷ್ಠ ಐದು ಸಾವಿರ ಕೋ.ರೂ.ಗಳನ್ನಾದರೂ ಬಿಡುಗಡೆ ಮಾಡಬೇಕಿತ್ತು. ತುರ್ತಾಗಿ ನೀರಾವರಿ, ಗೋಶಾಲೆಗಳಿಗೆ ಅನುಕೂಲ ಮಾಡಬೇಕಿತ್ತು. ಆದರೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ವರದಿ ಕೊಟ್ಟಿದ್ದೇವೆ ಎಂದು ಹೇಳಿ ಸುಮ್ಮನಾಗಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ನೆರೆ ಬಂದಾಗ ರೈತರಲ್ಲಿ ವಿಶ್ವಾಸ ತುಂಬಿ ಆರ್ಥಿಕ ನೆರವು ನೀಡಲಾಗಿತ್ತು. ರಾಜ್ಯದಲ್ಲಿ ಬೀಜ, ಗೊಬ್ಬರ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಜನಪರವಾದ ಸರಕಾರ ಎಂದುಕೊಂಡವರು ಅಧ್ಯಯನದಲ್ಲೇ ಕಾಲಕಳೆಯುತ್ತಿದ್ದಾರೆ. ರೈತರ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಏಳು ಗಂಟೆ ಬದಲಿಗೆ ಎರಡು ಗಂಟೆಗಳಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದೆ ಇದುವೇ ರೈತರಿಗೆ ಸಿದ್ದರಾಮಯ್ಯ ಸರಕಾರದ ಕೊಡುಗೆಯಾಗಿದೆ ಎಂದರು.
ಶಾಸಕರು, ನಾಯಕರಿಂದಾಗಿ ಸರಕಾರ ವಿಭಜನೆಯಾಗಿದೆ. ಶಾಸಕರ ನೇತೃತ್ವದ ಅಭಿವೃದ್ಧಿಗೆ ಒಂದು ಕೋ.ರೂ. ಕೂಡ ಬಿಡುಗಡೆಯಾಗಿಲ್ಲ. ಶಾಲೆಯಲ್ಲಿ ವಿವೇಕ ಕೊಠಡಿಗಳು ನಿರ್ಮಾಣ ಆಗುತ್ತಿಲ್ಲ. 9000 ಕೊಠಡಿ ನಿರ್ಮಾಣ ಬಾಕಿಯಿದೆ. ಶಾಸಕರು ವಿಧಾನಸೌಧದ ಕಡೆಗೆ ಬರುತ್ತಿಲ್ಲ ಎಂದರು.
ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಿಟ್ಟ 11,500 ಕೋ.ರೂ.ಗಳನ್ನು ಗ್ಯಾರಂಟಿ ಯೋಜನೆಗೆ ತೆಗೆಯಲಾಗಿದೆ. ಜನರ ಹಣದಲ್ಲಿ ಜನರಿಗೆ ಬಸ್ ವಿದ್ಯುತ್, ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಮಕ್ಕಳ ಶಿಕ್ಷಣ, ವಸತಿಗೆ ಮೀಸಲಾದ ಹಣವನ್ನು ಬಳಕೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ತನ್ನ ಸಾವಿಗೆ ಸಚಿವ ಶರಣಪ್ರಕಾಶ ಪಾಟೀಲ್ ಕಾರಣ ಎಂದು ಬಿಜೆಪಿ ಕಾರ್ಯಕರ್ತನೊಬ್ಬ ಡೆತ್ ನೋಟ್ ಬರೆದಿದ್ದರೂ ಅವರು ಸಚಿವರಾಗಿ ಮುಂದುವರಿದಿರುವುದು ಸರಿಯೇ ಎಂದು ಪ್ರಶ್ನಿಸಿದರು.