Advertisement

ಈಡೇರದ ಸಿಎಂ ತವರಿನ ಜನರ ನಿರೀಕ್ಷೆ

06:56 AM Feb 09, 2019 | |

ರಾಮನಗರ: ಶುಕ್ರವಾರ ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಬಾರಿ ಅವರು ಬಜೆಟ್ ಮೂಲಕ ಕೊಟ್ಟ ಯಾವ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೂ ಈ ಬಾರಿಯ ಬಜೆಟ್ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳು ಇದ್ದವು. ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡುವ ಯಾವ ಕಾರ್ಯಕ್ರಮವನ್ನು ಬಜೆಟ್ ಮೂಲಕ ಕೊಟ್ಟಿಲ್ಲ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

2018-19ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಕೊಟ್ಟಿದ್ದು ಅಲ್ಪವಾಗಿದ್ದರು, ಅನ್ಯ ಪಕ್ಷಗಳ ರಾಜ್ಯ ನಾಯಕರು ರಾಮನಗರಕ್ಕೆ ಬರಪೂರ ಕೊಡುಗೆ ಎಂದೆಲ್ಲ ಹೇಳಿದ್ದರು. ಘೋಷಿಸಿದ್ದ ಯೋಜನೆಗಳು ಪೈಕಿ ಯಾವ ಯೋಜನೆಯೂ ಜಾರಿಯಾಗಿಲ್ಲ. ಇನ್ನೂ ಈ ಬಜೆಟ್‌ನಲ್ಲಿ ಕೊಟ್ಟಿರುವ ಕೆಲವು ಯೋಜನೆಗಳು ತಕ್ಷಣದಲ್ಲೇ ಆರಂಭವಾಗುವುದು ಅನುಮಾನ ಎಂದು ವಿರೋಧ ಪಕ್ಷಗಳ ನಾಯಕರು ಲೇವಡಿಯಾಡಿದ್ದಾರೆ.

ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ಸ್ವಾಗತ: ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ಇದ್ದ ಬಹುದಿನಗಳ ಬೇಡಿಕೆಗೆ ಸಿಎಂ ಅವರು ಸ್ಪಂದಿಸಿರುವುದನ್ನು ಜಿಲ್ಲೆಯ ಜನತೆ ಸ್ವಾಗತಿಸಿದ್ದಾರೆ. ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೋ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ಅಂದರೆ ಬಹುಶಃ ಮೂರು ಯೋಜನೆಗಳಿಗೆ 20 ಕೋಟಿ ಅನುದಾನ ಬಳಕೆಯಾಗುವುದರ ಬಗ್ಗೆ ಮಾವು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಈ ಇಷ್ಟು ಅನುದಾನ ಮೀಸಲಿಡಬೇಕಿತ್ತು ಎಂದು ಮಾವು ಬೆಳೆಗಾರರು ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೇಷ್ಮೆ ಮಾರುಕಟ್ಟೆಗೆ 10 ಕೋಟಿ: ವಿಶ್ವ ದರ್ಜೆಯ ರೇಷ್ಮೆ ಗೂಡು ಮಾರುಕಟ್ಟೆ ಬೇಡಿಕೆಗೆ ಸ್ಪಂದಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆದರೆ, ಹಾಲಿ ಇರುವ ರೇಷ್ಮೆ ಗೂಡಿನ ಮಾರುಕಟ್ಟೆಯ ಆಧುನೀಕರಣ ಮತ್ತು ಬಲವರ್ಧನೆಗೆ 10 ಕೋಟಿ ಕೊಟ್ಟಿದ್ದಾರೆ ಎನ್ನುವುದೇ ಸಮಾಧಾನಕರ ವಿಚಾರ. ರೇಷ್ಮೆ ಕೃಷಿ ಮತ್ತು ಉದ್ಯಮದ ಅಭಿವೃದ್ಧಿಗೆ ಸಿಎಂ ಯಾವ ನಿರ್ಧಾರವನ್ನು ಕೈಗೊಂಡಿಲ್ಲ. ರೇಷ್ಮೆ ಗೂಡಿಗೆ ನೀಡುತ್ತಿರುವ ಗುಣಮಟ್ಟದ ರೇಷ್ಮೆ ಗೂಡು ಬೆಳೆಯಲು ಹಾಗೂ ನೂಲು ತೆಗೆಯುವ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಬೇಕಿತ್ತು ಎಂದು ರೀಲರ್‌ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೈನೋದ್ಯಮಿಗಳಿಗೆ ಸಂತಸ: ಹೈನೋದ್ಯಮಿಗಳಿಗೆ ಲೀಟರ್‌ ಹಾಲಿಗೆ ನೀಡುವ 5 ರೂ. ಪ್ರೋತ್ಸಾಹ ಧನವನ್ನು 6 ರೂ.ಗೆ ಹೆಚ್ಚಿಸಿರುವುದನ್ನು ಜಿಲ್ಲೆಯ ಹೈನೋದ್ಯಮಿಗಳಿಗೆ ಸಂತಸವಾಗಿದೆ. ಕೆಲವು ಹೈನೋದ್ಯಮಿಗಳು ಫೀಡ್ಸ್‌ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿರುವುದರಿಂದ ಪ್ರೋತ್ಸಾಹಧನವನ್ನು 10 ರೂ.ಗೆ ಏರಿಸಿದ್ದರೆ ಇನ್ನೂ ಚೆನ್ನಾಗಿತ್ತು.

Advertisement

ಜಿಲ್ಲೆಯನ್ನು ನಿರಂತರ ಬರಗಾಲ ಕಾಡುತ್ತಿರುವುದರಿಂದ ಕೃಷಿ ಚಟುವಟಿಕೆಗಲು ಕುಂಠಿತವಾಗಿದ್ದು, ಹೈನೋದ್ಯಮ ರೈತರ ಆರ್ಥಿಕ ಪರಿಸ್ಥಿತಿಯನ್ನು ತಕ್ಕ ಮಟ್ಟಿಗೆ ಸುಧಾರಿಸುತ್ತಿದೆ. ಹೀಗಾಗಿ ಪ್ರೋತ್ಸಾಹ ಧನ ಹೆಚ್ಚಳ ಸಂತಸವುಂಟು ಮಾಡಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 500 ಸ್ವಯಂಚಾಲಿತ ಹಾಲು ಶೇಖರಣೆ ಯಂತ್ರ ಖರೀದಿಗೆ 5 ಕೋಟಿ ರೂ. ಅನುದಾನ ಮೀಸಲಿರಿಸಿರುವ ಬಗ್ಗೆಯೂ ರೈತರು ಸ್ವಾಗತಿಸಿದ್ದಾರೆ.

ವೀರಾಪುರ, ಬಾನಂದೂರು ಪ್ರಗತಿಗೆ ಸ್ವಾಗತ: ನಡೆದಾಡುವ ದೇವರು ಶ್ರೀಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ರಾಮನಗರ ಜಿಲ್ಲೆ ಮಾಗಡಿ ತಾಲೂಕು ವೀರಾಪುರ ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮಸ್ಥಳ ಬಿಡದಿ ಬಳಿಯ ಬಾಣಂದೂರು ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ. ಮೀಸಲಿಟ್ಟಿರುವ ಮೈತ್ರಿ ಸರ್ಕಾರದ ಕ್ರಮಕ್ಕೆ ಜಿಲ್ಲೆಯ ಜನತೆ ಸ್ವಾಗತಿಸಿದ್ದಾರೆ.

ಮೇಕೆದಾಟು ಯೋಜನೆಗೇಕೆ ವಿಳಂಬ: ಮೇಕೆದಾಟು ಯೋಜನೆಯಿಂದಾಗುವ ಲಾಭಗಳು ಮತ್ತು ಯೋಜನೆಯ ಡಿಪಿಆರ್‌ ಸಿದ್ಧವಾಗಿರುವ ಬಗ್ಗೆ ಸಿಎಂ ಮಾತನಾಡಿದ್ದಾರೆ. ಆದರೆ, ಈ ಯೋಜನೆಗೆ ಹಣ ಮೀಸಲಿಡದಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನವಿದೆ. ಮೇಕೆದಾಟು ಯೋಜನೆಯ ಹೆಜ್ಜೆಗಳು ಮಂದಗತಿಯಲ್ಲೇ ಸಾಗಲಿವೆ. ಇನ್ನೂ ಉದ್ಯೋಗ ಸೃಷಿ, ಜನ ಸಾಮಾನ್ಯರ ಆರ್ಥಿಕ ಬಲವರ್ಧನೆಗೆ ಬಜೆಟ್‌ನಲ್ಲಿ ಯಾವ ಕ್ರಮಗಳನ್ನು ಕೈಗೊಂಡಿಲ್ಲ. ರಾಮನಗರದ ಕೆರೆಗಳನ್ನು ತುಂಬಿಸುವ ಯೋಜನೆಯ ನಿರೀಕ್ಷೆ ಹುಸಿಯಾಗಿದೆ ಎಂಬ ಬೇಸರವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next