Advertisement

ನಿರೀಕ್ಷೆ ಮಾರುದ್ದ; ದಕ್ಕಿದ್ದು ಗೇಣುದ್ದ

11:07 AM May 26, 2018 | Team Udayavani |

ಇನ್ನು ಸುಮ್ಮನೆ ಕೂತರೆ ತಲೆ ಕೆಡುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ಬರೀ ತಲೆ ಕೆಡುವುದಷ್ಟೇ ಅಲ್ಲ, ತಿಂಗಳಿನ ಖರ್ಚಿಗಾದರೂ ದುಡ್ಡು ಬೇಕಲ್ಲ? ಅದೇ ಕಾರಣಕ್ಕೆ ರಿಟೈರ್‌ವೆುಂಟ್‌ ಆದಮೇಲೂ ಕೆಲಸಕ್ಕೆ ಸೇರುತ್ತಾರೆ ಶ್ಯಾಮ್‌ ಪ್ರಸಾದ್‌. ಆ ಸಂಸ್ಥೆಯಲ್ಲಿ ಅವರೇ ಅತ್ಯಂತ ಹಿರಿಯರು. ಬಾಸ್‌ ಸೇರಿದಂತೆ ಮಿಕ್ಕೆಲ್ಲರೂ ಕಿರಿಯರು. ಕ್ರಮೇಣ ಅವರೆಲ್ಲರಿಗೂ ತಂದೆಯಾಗಿ, ಗುರುವಾಗಿ, ಮಾರ್ಗದರ್ಶಕರಾಗಿ ಬೆಳೆಯುತ್ತಾರೆ.

Advertisement

ಆದರೆ, ಎಲ್ಲರಿಗಿಂತಲೂ ಅವರು ಹೆಚ್ಚು ಕಾಳಜಿ ವಹಿಸುವುದು ತನ್ನ ಬಾಸ್‌ ಶ್ರಾವ್ಯ ಬಗ್ಗೆ. ಆಕೆಗೆ ಆರಂಭದಲ್ಲಿ ಅವರು ತನ್ನ ವಿಷಯದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಅನಿಸಿ, ಬೇರೆ ಕಡೆ ವರ್ಗ ಮಾಡಿಸುವುದೂ ಆಗುತ್ತದೆ. ಆದರೆ, ಕ್ರಮೇಣ ಅವರ ಮಹತ್ವ ಆಕೆಗೆ ಅರ್ಥವಾಗುತ್ತಾ ಹೋಗುತ್ತದೆ … “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರವು ಹಾಲಿವುಡ್‌ನ‌ಲ್ಲಿ 2015ರಲ್ಲಿ ಬಿಡುಗಡೆಯಾದ “ದಿ ಇಂಟರ್ನ್’ ಎಂಬ ಚಿತ್ರದ ಕನ್ನಡಾನುವಾದ.

ಒಂದಿಷ್ಟು ಬದಲಾವಣೆಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಮೂಲ ಚಿತ್ರದ ಬಹಳಷ್ಟು ಅಂಶಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಈ ತರಹದ ಕಥೆ ಇದುವರೆಗೂ ಕನ್ನಡದಲ್ಲಿ ಬಂದಿಲ್ಲವಾದ್ದರಿಂದ, ಹೊಸದು ಎಂದು ಹೇಳಬಹುದು. ಮಿಕ್ಕಂತೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಹುಟ್ಟುಹಾಕಿದ್ದ ಕುತುಹೂಲ ಮತ್ತು ನಿರೀಕ್ಷೆಗಳಿಗೆ ಚಿತ್ರ ನಿಲುಕುವುದಿಲ್ಲ. ಚಿತ್ರದ ಮೂಲ ಏನಾದರೂ ಇರಲಿ, ಚಿತ್ರವನ್ನು ಕಟ್ಟುವಾಗ ಇನ್ನಷ್ಟು ಹೊಸತನ, ವೇಗ ಎಲ್ಲವೂ ಬೇಕಿತ್ತು.

ಬಹುಶಃ ಒಂದೆರೆಡು ಟ್ವಿಸ್ಟ್‌ಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಪ್ರೇಕ್ಷಕನನ್ನು ಹಿಡಿದಿಡುವ ಅಥವಾ ಕೂರಿಸುವ ಅಂಶಗಳು ಸಿಗುವುದು ಕಡಿಮೆಯೇ.  ಈ ತರಹದ ಚಿತ್ರಗಳಲ್ಲಿ ರೋಚಕತೆ ಬಯಸುವುದು ತಪ್ಪಾಗುತ್ತದೆ. ಆದರೂ ಚಿತ್ರ ಯಾವೊಂದು ಹಂತದಲ್ಲೂ ಪ್ರೇಕ್ಷಕನನ್ನು ತಟ್ಟುವುದಿಲ್ಲ. ಅದಕ್ಕೆ ಒಂದಿಷ್ಟು ವಿಷಯಗಳಿವೆಯಾದರೂ, ಅದು ಗಾಢವಾಗಿಲ್ಲ. ಇನ್ನು ನಿರೂಪಣೆ ಸಹ ಬಹಳ ನಿಧಾನವಾಗಿ ಮತ್ತು ಅತ್ಯಂತ ನೀರಸವಾಗಿ ಸಾಗುತ್ತದೆ.

ಇನ್ನು ಹಾಡುಗಳನ್ನು, ಕೆಲವು ದೃಶ್ಯಗಳನ್ನು ಸುಮ್ಮನೆ ತುರುಕಿದಂತೆ ಕಾಣುತ್ತದೆ. ಹಾಗಾಗಿ ಪ್ರೇಕ್ಷಕನಿಗೆ ಚಿತ್ರ ಹೃದಯಕ್ಕೂ ಆಗುವುದಿಲ್ಲ, ಮೆದುಳಿಗೂ ಆಗುವುದಿಲ್ಲ. ಮೂಲ ಚಿತ್ರದಲ್ಲಿ ರಾಬರ್ಟ್‌ ಡಿ ನೀಯರೋ ಮಾಡಿದ ಪಾತ್ರವನ್ನು ಅನಂತ್‌ ನಾಗ್‌ ಅವರು ಮಾಡಿದ್ದಾರೆ. ಅನಂತ್‌ ನಾಗ್‌ ಅವರ ಪಾತ್ರ, ಅಭಿನಯದ ಬಗ್ಗೆ ಎರಡು ಮಾತಾಡುವುದು ಕಷ್ಟ.

Advertisement

ಅವರ ಮಾತುಗಳು, ಮೌನ, ನಡುವೆ ನೀಡುವ ಪಾಸ್‌ಗಳು ಎಲ್ಲವೂ ಖುಷಿಕೊಡುತ್ತದೆ. ರಾಧಿಕಾ ಚೇತನ್‌ ಸಹ ಪಕ್ವವಾದ ಅಭಿನಯ ನೀಡಿದ್ದಾರೆ. ಮಿಕ್ಕಂತೆ ಚಿತ್ರದಲ್ಲಿ ಹೆಚ್ಚು ಪಾತ್ರಗಳಿಲ್ಲ, ಇದ್ದರೂ ಗಮನ ಸೆಳೆಯುವುದು ಕಷ್ಟವೇ. ರಾಮಚಂದ್ರ ಹಡಪ್‌ ಸಂಗೀತ, ಪಿ.ಕೆ.ಎಚ್‌. ದಾಸ್‌ ಛಾಯಾಗ್ರಹಣ ಗಮನಸೆಳೆಯುವಂತಿದೆ.

ಚಿತ್ರ: ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ನಿರ್ದೇಶನ: ನರೇಂದ್ರ ಬಾಬು
ನಿರ್ಮಾಣ: ಸುದರ್ಶನ್‌, ರಾಮಮೂರ್ತಿ, ಹರೀಶ್‌ ಶೇರಿಗಾರ್‌
ತಾರಾಗಣ: ಅನಂತ್‌ ನಾಗ್‌, ರಾಧಿಕಾ ಚೇತನ್‌ ಮುಂತಾದವರು

* ಚೇತನ್‌ ನಾಡಿಗೇರ್

Advertisement

Udayavani is now on Telegram. Click here to join our channel and stay updated with the latest news.

Next