ಬೆಂಗಳೂರು: ವಿಧಾನಪರಿಷತ್ ಸಭಾಪತಿ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಟಾಪಟಿ ನಡೆಯುವ ಲಕ್ಷಣಗಳು ಕಂಡುಬರುತ್ತಿವೆ.
ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಆರ್.ಪಾಟೀಲ್ ಕಣಕ್ಕಿಳಿಯುವುದು ಖಚಿತವಾಗಿದ್ದು, ಹಂಗಾಮಿ ಸಭಾಪತಿ ಆಗಿರುವ ಬಸವರಾಜ ಹೊರಟ್ಟಿ ಅವರೂ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು ಇಬ್ಬರೂ ಸ್ಪರ್ಧೆ ಮಾಡಿದರೆ ಕಗ್ಗಂಟಾಗಲಿದೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಎಸ್.ಆರ್.ಪಾಟೀಲ್‌ಗೆ ಸಭಾಪತಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಬಸವರಾಜ ಹೊರಟ್ಟಿ ಅವರು ಜೆಡಿಎಸ್‌ನಿಂದ ಸಂಪುಟಕ್ಕೆ ಸೇರಲಿದ್ದಾರೆ. ಹೀಗಾಗಿ, ಸಭಾಪತಿ ಸ್ಥಾನ ಕಾಂಗ್ರೆಸ್‌ಗೆ ಇರಲಿ. ಪರಿಷತ್‌ನಲ್ಲೂ ಕಾಂಗ್ರೆಸ್ 38 ಸ್ಥಾನ ಹೊಂದಿದೆ ಎಂಬುದು ಕಾಂಗ್ರೆಸ್‌ನಾಯಕರ ವಾದ.
ಆದರೆ, ಬಸವರಾಜ ಹೊರಟ್ಟಿ ಅವರನ್ನೇ ಖಾಯಂ ಸಭಾಪತಿ ಸ್ಥಾನದಲ್ಲಿ ಮುಂದುವರಿಸುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭರವಸೆ ನೀಡಿದ್ದಾರೆ. ಹೀಗಾಗಿ, ಹಂಗಾಮಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಭಾಪತಿ ಸ್ಥಾನಕ್ಕೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಸಭಾಪತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೂರ್ವಭಾವಿಯಾಗಿ ಚರ್ಚೆಯಾಗದಿರುವುದರಿಂದ ಗೊಂದಲ ಮುಂದುವರಿದಿದೆ. ಎರಡೂ ಪಕ್ಷಗಳ ನಾಯಕರು ಈ ವಿಚಾರವನ್ನು ಯಾವ ರೀತಿ ಬಗೆಹರಿಸಿಕೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ಡಿಸೆಂಬರ್ 12 ಕ್ಕೆ ಸಭಾಪತಿ ಸ್ಥಾನದ ಚುನಾವಣೆ ನಿಗದಿಯಾಗಿದೆ. ಡಿ.11 ರವರೆಗೆ ಸೂಚನಾ ಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.